Thursday, April 11, 2013

ಕ್ರಿಕೆಟ್ ಮತ್ತು ಸಂಘಟಿತ ಭ್ರಷ್ಟಾಚಾರ

ಕ್ರಿಕೆಟ್ ನಲ್ಲಿ ಹಿಂದೆ ಇದ್ದ ಕಲಾತ್ಮಕತೆ ಈಗ ಉಳಿದಿಲ್ಲ. ಒಂದು ಕಾಲದಲ್ಲಿ ಕ್ರಿಕೆಟ್ ಬರಿಯ ಕ್ರೀಡೆಯಲ್ಲ ಅದೊಂದು ಜನ ಸಂಸ್ಕೃತಿ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಪ್ರಭಾವಿಸಿತ್ತು. ಇಂದಿಗೂ ಆ ಪ್ರಭಾವಳಿಯನ್ನು ಕ್ರಿಕೆಟ್ ಪೂರ್ಣವಾಗಿ ಕಳೆದುಕೊಂಡಿಲ್ಲ. ಕ್ರಿಕೆಟ್ ಒಂದು ಕಲೆಯಾಗಿ ಏಕೆ ಬೆಳೆಯಲಿಲ್ಲ ಎಂಬುದು ಒಂದು ಮುಖ್ಯ ಪ್ರಶ್ನೆ. ಬಹುಶಃ ಇನ್ನೊಂದು ಕಲಾ ಪ್ರಕಾರದೊಂದಿಗೆ ಇದನ್ನು ಹೋಲಿಸಿ ನೋಡುವುದು ಈ ಸಂಶಯವನ್ನು ಪರಿಹರಿಸಬಹುದು. ಒಂದು ಯಕ್ಷಗಾನ ಪ್ರಸಂಗ ಅದು ಆಡಲ್ಪಟ್ಟ ದೇಶಕಾಲದಲ್ಲಿ ನೋಡುಗನಿಗೆ ಒಂದು ಅನುಭವವನ್ನು ಕಟ್ಟಿಕೊಡುತ್ತದೆ. ಆದರೆ ಮಾಧ್ಯಮಗಳ ಮೂಲಕ ’ನೇರಪ್ರಸಾರ’ವಾಗುವ ಕ್ರಿಕೆಟ್ ಹಾಗಲ್ಲ. ಅದು ದೇಶವನ್ನು ಮೀರಿ ಮನೆ ಮನೆಗೂ ಕಥನವನ್ನು ತರುತ್ತದೆ. ಕ್ರಿಕೆಟ್ ಗೆ ಮೈದಾನದ ಒಳಗಿರುವ ಪ್ರೇಕ್ಷಕನಿಗಿಂತ ಮೈದಾನದ ಹೊರಗಿರುವ ಪ್ರೇಕ್ಷಕರ ಸಂಖ್ಯೆ ಸಾವಿರಾರು ಪಟ್ಟು ಹೆಚ್ಚು. ಹಾಗಾಗಿ ದೇಶಾತೀತವಾದ ಪ್ರೇಕ್ಷಕನನ್ನು ನೆಚ್ಚಿಕೊಂಡು ಕ್ರಿಕೆಟ್ ಬೆಳೆಯಬೇಕಾಯಿತು. ಅದಕ್ಕಾಗಿ ಕಲೆಯಾಗಿ ಕ್ರಿಕೆಟ್ ಕ್ಷೀಣಿಸಿತು.

ಒಂದು ಕಾಲಕ್ಕೆ ಆಟಗಾರರ ಬಲಾಬಲವನ್ನು, ಸೃಜನಶೀಲ ಕಸುವನ್ನು ಜಾಹೀರುಗೊಳಿಸುವ ಟೆಸ್ಟ್ ಕ್ರಿಕೆಟ್ ಮಾದರಿ ಮುಂಚೂಣಿಯಲ್ಲಿತ್ತು. ಇಂದು ೨೦-೨೦ ಮಾದರಿಯ ಮೂಲಕ ಕ್ರಿಕೆಟ್ ನ್ನು ಕಳಪೆ ಮನರಂಜನೆಯಾಗಿಸಲಾಗಿದೆ. ಕ್ರಿಕೆಟ್ ಈಗ ಉದ್ಯಮವಾಗಿ ಬದಲಾಗಿರುವುದು ಈ ಬದಲಾವಣೆಗೆ ಕಾರಣ. ಉದ್ಯಮದ ಮುಖ್ಯ ಅಜೆಂಡಾ ಲಾಭಕೋರತನ. ಹಣದ ಮುಂದೆ ಉಳಿದೆಲ್ಲವನ್ನು ಕೀಳು ದರ್ಜೆಗಿಳಿಸಿ ತುಚ್ಛವಾಗಿ ಕಾಣುವುದು ಉದ್ಯಮದ ಗುಣ. ಹಗಲು ಹೊತ್ತಿನಲ್ಲಿ ಕ್ರಿಕೆಟ್ ಪ್ರೇಕ್ಷಕರು ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಕ್ರಿಕೆಟ್ ರಾತ್ರಿ ಆರಂಭ, ಮಲಗುವುದರೊಳಗೆ ಮುಗಿಯುವ ಧಾರಾವಾಹಿ ಎಪಿಸೋಡ್ ನಂತೆ ೨೦-೨೦ ಓವರ್ ಮುಗಿಯುವುದರೊಳಗೆ ಆಟವೂ ಮುಕ್ತಾಯ, ಬೌಲಿಂಗ್ ಗಿಂತ ಬ್ಯಾಟಿಂಗ್ ನೋಡಲು ಚೆಂದ ಎಂದು ಫೀಲ್ಡಿಂಗ್ ನಲ್ಲಿ ಬ್ಯಾಟ್ಸ್ ಮನ್ ಪರ ನಿಯಮಗಳು, ಕ್ರೀಡೆಗೆ ಸಂಬಂಧವಿಲ್ಲದ ಚೀಯರ್ ಲೀಡರ್ ಕುಣಿತ...ಹೀಗೆ ಕ್ರಿಕೆಟ್ ದೈನಿಕದ ಧಾರವಾಹಿಯಂತಹ ಒಂದು ಸರಕಾಗಿ ನೋಡಲ್ಪಡುತ್ತಿದೆ.

ಈಗಷ್ಟೆ ಐಪಿಎಲ್ ೨೦-೨೦ ಕ್ರಿಕೆಟ್ ಸರಣಿ ಆರಂಭವಾಗಿದೆ. ಕ್ರೀಡೆಯನ್ನು ಉದ್ಯಮವಾಗಿಸಿದ ಪರಾಕಾಷ್ಟೆಯನ್ನು ಇಲ್ಲಿ ಕಾಣಬಹುದು. ಒಂದು ಐಪಿಎಲ್ ಸರಣಿ ಸುಮಾರು ಎರಡು ತಿಂಗಳ ಅವಧಿಯಲ್ಲಿ ನೂರು ಬಿಲಿಯನ್ (ಒಂದು ಸಾವಿರ ಕೋಟಿ) ಡಾಲರ್ ಆದಾಯವನ್ನು ತರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಒಂದು ವರ್ಷದ ಗಳಿಕೆಗಿಂತ ಬಹಳ ಹೆಚ್ಚು. IPL is more in air than ground ಎಂಬ ಕಾಲೆಳೆಯುವ ಮಾತು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಎಸ್ ಎಮ್ ಎಸ್, ಎಮ್ ಎಮ್ ಎಸ್ ಗಳ ಮೂಲಕ ಕ್ರಿಕೆಟ್ ಸ್ಕೋರ್ ಭಿತ್ತರಣೆ, ಮೊಬೈಲ್ ನಲ್ಲಿ ಲೈವ್ ಕಾಮೆಂಟರಿ, ಖಾಸಗಿ ಚಾನೆಲ್ ಗಳಿಂದ ಆಟದ ನೇರ ಪ್ರಸಾರ, ಯೂಟ್ಯೂಬ್ ನತಂಹ ವೆಬ್ ಸೈಟ್ ಗಳ ಮೂಲಕ ನೇರಪ್ರಸಾರ ಹೀಗೆ ಆಟದ ಹರಿದಾಟ ಆಗಸದಲ್ಲೇ ಹೆಚ್ಚಾದಂತಿದೆ! ಕ್ರಿಕೆಟ್ ಆಟಕ್ಕಿಂತ ತಂತ್ರಜ್ಞಾನದ ಮೇಲಾಟವೆ ಇಂತಹ ಮತುಗಳು ಕೇಲಿಬರಲು ಕಾರಣ.

ವಿವಿಧ ತಂಡಗಳ ಮಾಲೀಕತ್ವ ಹೊಂದಿರುವ ಫ್ರಾಂಚೈಸಿಗಳ ಕಾರ್ಯವೈಖರಿ ಮತ್ತು ಆಟೋಪ ಐಪಿಎಲ್ ಕ್ರಿಕೆಟ್ ನ್ನು ಇನ್ನಷ್ಟು ವಿವಾದಾಸ್ಪದವಾಗಿಸಿದೆ. ಸಂತೆಯಲ್ಲಿ ಎಮ್ಮೆಯನ್ನೊ ಕುರಿಯನ್ನೊ ಸವಾಲು ಮಾಡಿ ಕೊಳ್ಳುವಂತೆ ಕ್ರಿಕೆಟಿಗರನ್ನು ಕೊಂಡು ಒಂದು ತಂಡ ದಾರುಣವಾಗಿ ರಚಿಸಲ್ಪಡುವುದರೊಂದಿಗೆ ಈ ಪ್ರಕ್ರೀಯೆ ಆರಂಭಗೊಳ್ಳುತ್ತದೆ. ಆದರೆ ಫ್ರಾಂಚೈಸಿಗಳ ಗಳಿಕೆಯ ದಾರಿಗಳು ಈ ಕ್ರೀಡೆಯನ್ನು ಕಾಸಿಗಾಗಿ ಕ್ರಿಕೆಟ್ ಎಂಬಲ್ಲಿಗೆ ತಂದು ನಿಲ್ಲಿಸಿವೆ. ಅವುಗಳ ಕೆಲವು ಮುಖ್ಯ ಹಣದ ಮೂಲಗಳನ್ನು ಗಮನಿಸೋಣ. ಐಪಿಎಲ್ ನಿಯಮಾವಳಿಗಳ ಪ್ರಕಾರ ಫ್ರಾಂಚೈಸಿಗಳು ತಮ್ಮ ತಂಡವನ್ನು ಹಲವು ಕಂಪನಿಗಳಿಗೆ ಜಾಹೀರಾತಿಗಾಗಿ ಮಾರಿಕೊಳ್ಳಬಹುದು. ಹೀಗೆ ಜಾಹೀರಾತಿನಿಂದ ಬಂದ ಹಣ ಆಟಗಾರನಿಗೆ ಬದಲಾಗಿ ಫ್ರಾಂಚೈಸಿಗೆ ಸಲ್ಲುತ್ತದೆ. ತಂಡದ ಯಾವ ಆಟಗಾರನೂ ಫ್ರಾಂಚೈಸಿ ಜಾಹೀರಾತಿನ ಸಲುವಾಗಿ ವಿಧಿಸುವ ಷರತ್ತುಗಳನ್ನು ಉಲ್ಲಂಘಿಸುವಂತಿಲ್ಲ. ಅಲ್ಲದೆ ಆಟಗಾರರು ಫ್ರಾಂಚೈಸಿಯ ಅನುಮತಿ ಇಲ್ಲದೆ ತಮ್ಮ ವೈಯಕ್ತಿಕ ಒಪ್ಪಂದದ ಜಾಹೀರಾತುಗಳಲ್ಲಿ ಐಪಿಎಲ್ ಮುಗಿಯುವವರೆಗೂ ಕಾಣಿಸಿಕೊಳ್ಳುವಂತಿಲ್ಲ. ಕ್ರೀಡಾಂಗಣದಲ್ಲಿ ಮಾರಾಟವಾಗುವ ಟಿಕೆಟ್ ಗಳ ಮೂಲಕ ಫ್ರಾಂಚೈಸಿಗಳು ಹಣವನ್ನು ಸಂಪಾದಿಸಬಹುದು. ತಮ್ಮ ತಂಡದ ಮ್ಯಾಚ್ ನ ಟಿ.ವಿ. ಹಕ್ಕುಗಳನ್ನು ಚ್ಯಾನಲ್ ಗಳಿಗೆ ಮಾರಿಕೊಂಡು ಹಣ ಗಳಿಸಬಹುದು. ಸ್ಟೇಡಿಯಂನಲ್ಲಿ ಪ್ರದರ್ಶಿತವಾಗುವ ಜಾಹೀರಾತುಗಳ ಮೂಲಕ ಹಣ ಗಳಿಸಬಹುದು. ತಂಡದ ಆಟಗಾರರು ತೊಡುವ ಧಿರಿಸು (ಜೆರ್ಸಿ)ಗಳಿಗೆ ಪ್ರಾಯೋಜಕರನ್ನು ಹುಡುಕಿ ಅವರಿಂದ ಹಣ ಸಂಗ್ರಹಿಸಬಹುದು. ಇಷ್ಟೆ ಅಲ್ಲದೆ ತಮ್ಮ ತಂಡಕ್ಕೆ ಮಾಡಿರುವ ಹೂಡಿಕೆಯ ಕೆಲವು ಭಾಗವನ್ನು ಬೇರೆ ಹೂಡಿಕೆದಾರರಿಗೆ ಹೆಚ್ಚಿನ ಬೆಲೆಗೆ ಮಾರಿಕೊಂಡು ಲಾಭ ಗಳಿಸಬಹುದು. ಇದೆಲ್ಲ ಗಮನಿಸಿದಾಗ ಐಪಿಎಲ್ ಫ್ರಾಂಚೈಸಿಗಳ ಹಣದ ಥೈಲಿಗಾಗಿ ರೂಪುಗೊಂಡ ಕ್ರಿಕೆಟ್ ಮಾದರಿ ಎನಿಸದೆ ಇರದು.

ಇದುವರೆಗೆ ಆಡಲ್ಪಟ್ಟ ಐಪಿಎಲ್ ನ ಎಷ್ಟೊ ಆಟಗಳು ಮ್ಯಾಚ್ ಫಿಕ್ಸಿಂಗ್ ಗೆ ಒಳಪಟ್ಟಿವೆ ಎನ್ನುತಾರೆ. ಈ ಕುರಿತು ತನಿಖೆಗಳೂ ನಡೆದಿವೆ. ಬೆಳಕಿಗೆ ಬಂದಿರುವುದು ಕೆಲವು ಮಾತ್ರ. ಮ್ಯಾಚ್ ಫಿಕ್ಸಿಂಗ್ ನ ಸಂಧರ್ಭದಲ್ಲಿ ಎರಡು ತಂಡಗಳ ಮಾಲೀಕರೂ ಹಣ ಮಾಡಬಹುದು. ಇವೆಲ್ಲ ಭೂಗತ ಲೋಕದ ಆಟಗಳು, ಮಿಲಿಯನ್ ಡಾಲರ್ ಲೆಕ್ಕಾಚಾರಗಳು! ಮ್ಯಾಚ್ ಫಿಕ್ಸಿಂಗ್ ಮೂಲಕ ಐಪಿಎಲ್ ನಲ್ಲಿ ಹೆಚ್ಚಿನ ಪ್ರಮಾಣದ ಹಣ ಹರಿದಾಡುತ್ತದೆ. ಒಂದು ಅಂದಾಜಿನ ಪ್ರಕಾರ ಶೇ. ೭೦ರಷ್ಟು ಲಾಭಗಳು ಬರುವುದು ಫಿಕ್ಸಿಂಗ್ ಮೂಲಕ ಎಂದು ಅಂದಾಜಿಸಲಾಗಿದೆ. ನಾವು ಐಪಿಎಲ್ ಅಂಗಳದಲ್ಲಿ ನೋಡುವ ಎಷ್ಟೊ ಆಟಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ಕೋಟ್ಯಾಂತರ ಪ್ರೇಕ್ಷಕರನ್ನು ಮಹಾಮೋಸಕ್ಕೆ ದೂಡುತ್ತವೆ. ಬಾಕಿ ಏನೆ ಆದರೂ ಐಪಿಎಲ್, ಬಿಸಿಸಿಐ, ಫ್ರಾಂಚೈಸಿ, ಆಟಗಾರರು, ತಂಡದ ಮ್ಯಾನೇಜರ್ ಗಳು ಹಾಗು ಹಲವು ಪ್ರತಿಷ್ಠಿತ ವ್ಯಕ್ತಿಗಳು ಬಿಲಿಯನ್ ಡಾಲರ್ ಗಳಿಕೆ ಮಾಡಿಕೊಳ್ಳುತ್ತಾರೆ. ಇವೆಲ್ಲ ನಡೆಯುವುದು ಸರಕಾರದ ಪರವಾನಗಿಯಲ್ಲಿ, ತಂತ್ರಜ್ಞಾನದ ಬೆಳಕಿನಲ್ಲಿ, ಮಾಧ್ಯಮಗಳ ಕಾಳಜಿಯಲ್ಲಿ, ಉದ್ಯಮ ಜಗತ್ತಿನ ಪ್ರೋತ್ಸಾಹದಲ್ಲಿ. ಇದು ಸಂಘಟಿತ ಭ್ರಷ್ಟಾಚಾರವಲ್ಲದೆ ಇನ್ನೇನು? ಭಾರತದಲ್ಲಿ ಕ್ರಿಕೆಟ್ ಬರಿಯ ಆಟವಲ್ಲ, ಅದು ಧರ್ಮ ಎಂದು ಹುಸಿ ರೋಮಾಂಚನಪಡುವವರು ಮತ್ತೊಮ್ಮೆ ಯೋಚಿಸಲಿ.

ನಾವು ಇತಿಹಾಸವನ್ನೊಮ್ಮೆ ಗಮನಿಸಬೇಕು. ೧೯ನೇ ಶತಮಾನದ ಮಧ್ಯ ಭಾಗದವರೆಗೆ ಕ್ರಿಕೆಟ್ ಅಮೇರಿಕೆಯಲ್ಲಿ ಜನಪ್ರೀಯ ಕ್ರೀಡೆಯಾಗಿತ್ತು. ಆಮೇಲೆ ಆ ಸ್ಥಾನವನ್ನು ಕ್ರಿಕೆಟ್ಟನ್ನೆ ಬಹುವಾಗಿ ಹೋಲುವ ಬೇಸ್ ಬಾಲ್ ಎಂಬ ಆಟ ಆಕ್ರಮಿಸಿತು. ಕ್ರಿಕೆಟ್ ಅಮೇರಿಕಾದಲ್ಲಿ ಜನಪ್ರೀಯತೆ ಕಳೆದುಲೊಳ್ಳಲು ಅಲ್ಲಿ ಆಗಷ್ಟೆ ಉತ್ತುಂಗ ತಲುಪಿದ್ದ ರಾಷ್ಟ್ರೀಯವಾದ ಕಾರಣ ಎಂಬ ವಾದವಿದೆ. ಅಮೇರಿಕೆಗೆ ಪ್ರವಾಹದಂತೆ ನುಗ್ಗುತ್ತಿದ್ದ ವಿದೇಶಿ ವಲಸಿಗರನ್ನು ಅವರ ಮೂಲ ಅಸ್ಮಿತೆಯಿಂದ ಬೇರ್ಪಡಿಸಿ ಅಮೇರಿಕನ್ನರನ್ನಾಗಿಸುವ Melting Pot (ಕರಗಿಸುವ ಮಡಿಕೆ) ಸಂಸ್ಕೃತಿಗೆ ಬೇಕಾಗಿದ್ದ ಐಡೆಂಟಿಟಿಯನ್ನು ಬೇಸ್ ಬಾಲ್ ಒಂದು ಕ್ರೀಡೆಯಾಗಿ ಒದಗಿಸಿತು. ಆಂಗ್ಲೊ-ಅಮೆರಿಕನ್ನರ ಪರಂಪರೆಯ ಭಾಗವಾಗಿ ಬಂದ ಕ್ರಿಕೆಟ್ ಇಪ್ಪತ್ತನೆ ಶತಮಾನದ ಆರಂಭದ ಹೊತ್ತಿಗೆ ಬೇಸ್ ಬಾಲ್ ಹೊಂದಿದ್ದ ಕ್ರಿಕೆಟ್ ನ ಸಾಮ್ಯತೆ, ಅದರ ಚುಟುಕು ಮಾದರಿ ಮತ್ತು ಹೊಡಿ ಬಡಿ ಮನರಂಜನೆಯಿಂದಾಗಿ ಜನಪ್ರೀಯತೆ ಕಳೆದುಕೊಂಡಿತು. ಅಮೆರಿಕನ್ನರಲ್ಲಿ ಬೆಳೆಯುತ್ತಿದ್ದ ಉದ್ಯಮಶೀಲತೆ ಬೇಸ್ ಬಾಲ್ ಕ್ರೀಡೆಯನ್ನು ಇನ್ನಷ್ಟು ಪೋಷಿಸಿತು. ಬದಲಾಗುವ ಸಾಮಾಜಿಕ ವಿದ್ಯಮಾನಗಳು, ಉದ್ಯಮ ಭಾರತದಲ್ಲಿಯೂ ಕ್ರಿಕೆಟ್ ಗೆ ಒಂದು ಹೊಸ ರೂಪ ಕೊಡಲು ಹೊರಟಿವೆ. ಈ ಬದಲಾವಣೆ ಮತ್ತು ಜನಪ್ರೀಯತೆ ಕ್ರಿಕೆಟ್ಟಿಗೆ ತನ್ನನ್ನು ಮರು ಸೃಷ್ಟಿಸಿಕೊಳ್ಳಲು ಸಹಕರಿಸಬಹುದೆ ಅಥವಾ ಅವಸಾನದ ಅಂಚಿಗೆ ದೂಡಬಹುದೆ ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.

No comments:

Post a Comment