Wednesday, April 3, 2013

ಅಭಿವೃದ್ಧಿ ಮತ್ತು ಬಲಿ

ಅಭಿವೃದ್ಧಿ ಕಾರ್ಯಗಳಿಗೂ ಬಲಿ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆ ಎಂಬುದು ಜಾನಪದ ಗಾಢ ನಂಬಿಕೆ. ಉದಾಹರಣೆಗೆ ಯಜಮಾನ ಕಟ್ಟಿಸಿದ ಕೆರೆಯಲ್ಲಿ ನೀರು ಬರಲು ಮನೆಯ ಸೊಸೆ ಬಲಿಯಾಗುವ ಜಾನಪದ ಹಾಡು ’ಕೆರೆಗೆ ಹಾರ’ವನ್ನು ಗಮನಿಸಬಹುದು. ಈ ಬಲಿಯಲ್ಲಿ ಸರ್ವರ ಹಿತವಿದೆ. ಸಾಹಸಿ ಎನಿಸಿಕೊಂಡ ಗಂಡ ಮಾದೇವರಾಯನ ತಲ್ಲಣವೂ ಇದೆ. ಜಾನಪದ ಕಥನಗಳು ಬಲಿಯನ್ನು ವೈಭವೀಕರಿಸುವ ಭರದಲ್ಲಿ ವೈಯಕ್ತಿಕ ತಲ್ಲಣಗಳನ್ನು ಉಪೇಕ್ಷಿಸುವುದಿಲ್ಲ. ಹಾಗೆಯೆ ಜಾನಪದ ಕಲ್ಪನೆಯ ಅಭಿವೃದ್ಧಿ ಕೂಡ ಜನಪದರನ್ನು ತಮ್ಮ ಕುಟುಂಬ ಅಥವಾ ಸಮುದಾಯಗಳಿಂದ, ತಾವು ನಂಬಿದ ಕ್ಷೇತ್ರ ದೇವತೆಗಳಿಂದ, ತಮಗೆ ಒಗ್ಗಿದ ಜೀವನಕ್ರಮದಿಂದ ದೂರವಾದ ಇನ್ನೇನನ್ನೊ ಅಕಾರಣವಾಗಿ ಹೇರುತ್ತಿರಲಿಲ್ಲ.

ನಮ್ಮ ದೇಶಕ್ಕೀಗ ಶ್ರೀಮಂತಿಕೆಯ ಕನಸು ಬೀಳುತ್ತಿದೆ. ಹಾಗಾಗಿ ನಾವೀಗ ಶ್ರೀಮಂತ ರಾಷ್ಟ್ರವಾಗಬೇಕೆಂಬ ಧಾವಂತದಲ್ಲಿ ಒಪ್ಪಿಕೊಂಡಿರುವುದು ಪಾಶ್ಚಿಮಾತ್ಯ ಅಭಿವೃದ್ಧಿ ರಾಜಕಾರಣದ ಭ್ರಷ್ಟ ಮಾದರಿಯನ್ನು. ಇಲ್ಲಿ ಅಭಿವೃದ್ಧಿ ಎಂದರೆ ವ್ಯಾಪಾರ ಮಾಡುವ ಅಪರಿಮಿತ ಅವಕಾಶಗಳು ಮತ್ತು ಲಾಭಗಳಿಕೆ. ಹಣವೆಂಬ ಅಮೂರ್ತ ಮೌಲ್ಯದ ಕೈಯಲ್ಲಿ ಎಲ್ಲಾ ನಿರ್ಧಾರಗಳು ನಿಂತಿವೆಯೆ ಹೊರತು ಮಾನವೀಯ ಭಾವನೆಗಳಿಗೆ ಇಲ್ಲಿ ಆಸ್ಪದವಿಲ್ಲ. ಒಂದು ದೇಶ ದುಡ್ಡಿನಿಂದ ಶ್ರೀಮಂತವಾಗಹೊರಟರೆ, ತನ್ನ ಬೇರುಗಳನ್ನು ಮರೆತರೆ, ಲಾಭವೊಂದೆ ಗುರಿಯಾದರೆ, ಪರಮ ಸ್ವಾರ್ಥದಲ್ಲಿ ನೈತಿಕವಾಗಿ ಭ್ರಷ್ಟವಾಗುತ್ತದೆ. ನಾವು ಇಂದಿನ ರಾಜಕಾರಣದಲ್ಲಿ ಕಾಣುತ್ತಿರುವುದೂ ಇದನ್ನೇ ಅಲ್ಲವೆ? ಯಾವುದೇ ಸರ್ಕಾರ ಬಂದರೂ ಎಷ್ಟು ಹೊಸ ರಸ್ತೆಗಳನ್ನು ಕಟ್ಟಬಹುದು, ಎಷ್ಟು ಹೊಸ ಸೇತುವೆಗಳನ್ನು ಕಟ್ಟಬಹುದು, ಎಲ್ಲೆಲ್ಲಿ ಅಣೆಕಟ್ಟು ಕಟ್ಟಬಹುದು, ಎಲ್ಲಿ ಬಹುಮಹಡಿಯ ಕಟ್ಟಡಗಳನ್ನು ನಿರ್ಮಿಸಬಹುದು ಎಂದೇ ಯೋಚಿಸುತ್ತವೆ. ಇಲ್ಲಿ ಜನಹಿತವೆಂಬುದು ಬೂಟಾಟಿಕೆಯ ಮಾತು. ಇಂತಹ ಯೋಜನೆಗಳಲ್ಲಿ ಜನಾಭಿಪ್ರಾಯವನ್ನು ಎಷ್ಟು ಬಾರಿ ಗಣನೆಗೆ ತೆಗೆದುಕೊಳ್ಳಲಾಗಿದೆ? ಅಷ್ಟಕ್ಕೂ ಅಭಿವೃದ್ಧಿ ಎಂದರೆ ಭೌತಿಕವಾದ ಒಂದಿಷ್ಟು ಕಾಮಗಾರಿಗಳಷ್ಟೆ ಏನು?

ಕೆಲವು ಅಂಕಿಅಂಶಗಳನ್ನು ಗಮನಿಸೋಣ. ಸ್ವಾತಂತ್ರ್ಯಾನಂತರದ ಮೊದಲ ಇಪ್ಪತ್ತು ವರ್ಷಗಳಲ್ಲಿ ಇಪ್ಪತ್ತು ಲಕ್ಷ ಭಾರತೀಯರು ದೇಶ ಬಿಟ್ಟು ವಲಸೆ ಹೋಗಿದ್ದರು. ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ೨೧ನೇ ಶತಮಾನ ಅಂದರೆ ನಾವು ಪಾಶ್ಚಿಮಾತ್ಯ ಅಭಿವೃದ್ಧಿಯನ್ನು ಅನುಕರಿಸತೊಡಗಿದ ನಂತರದ ಅಂಕಿಅಂಶಗಳನ್ನು ಗಮನಿಸಿದರೆ ನಮಗೆ ಅತಿದೊಡ್ಡ ಪ್ರಮಾಣದ ವಲಸೆಗಾರರು ಸಿಗುವುದು ದೇಶದ ಒಳಗಡೆಯೇ. ಅಂದರೆ ಸುಮಾರು ೩೩ ಕೋಟಿ ಭಾರತೀಯರಿಗೆ ಈ ಶತಮಾನದಲ್ಲಿ ತಾವು ಹುಟ್ಟಿದ ಊರಲ್ಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಈ ಸಂಖ್ಯೆ ಭಾರತದ ಒಟ್ಟು ಜನಸಂಖ್ಯೆಯ ಮೂರನೆ ಒಂದರಷ್ಟು. ಇನ್ನೂ ಸೂಕ್ಷ್ಮವಾಗಿ ನೋಡಿದರೆ ಶೇ. ೧೦ರಷ್ಟು ಆಂತರಿಕ ವಲಸಿಗರು ತಮ್ಮ ಇಷ್ಟಕ್ಕೆ ವಿರುದ್ಧವಾಗಿ ನೆಲೆ ಕಳೆದುಕೊಂಡ ವಲಸಿಗರಾಗಿದ್ದಾರೆ. ಅಂದರೆ ಬೃಹತ್ ಕಾರ್ಖಾನೆ, ವಿಶೇಷ ಆರ್ಥಿಕ ವಲಯ, ಅಣೆಕಟ್ಟು, ಹೆದ್ದಾರಿಗಳು, ವಿಮಾನ ನಿಲ್ದಾಣ ಇತ್ಯಾದಿ ಕಾರ್ಯಯೋಜನೆಗಳಿಗೆ ಜಾಗಮಾಡಿಕೊಡಲು ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದಾರೆ. ಮನುಷ್ಯ ಜೀವನದ ಯಾತನಾಮಯ ಕ್ಷಣಗಳಲ್ಲಿ ವಲಸೆಯೂ ಒಂದು. ಅದು ತಾಯಿಬೇರಿಂದ ಬೇರ್ಪಟ್ಟು ಇನ್ನೆಲ್ಲೊ ನೆಲೆಗೊಳ್ಳುವ ಕ್ರೀಯೆ. ಯಾರನ್ನೋ ಸುಖವಾಗಿಡುವ ಯೋಜನೆಗಳಿಗೆ ತಮ್ಮ ಸಮೃದ್ಧ ನೆಲೆಗಳನ್ನು ಕಳೆದುಕೊಂಡು, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ, ನಮ್ಮ ಜನರೇ ಗುಳೆಹೋದ ಪರಿಸ್ಥಿತಿ ಜಾಗತಿಕವಾಗಿ ಇನ್ನೆಲ್ಲೂ ನಡೆದಿರಲಿಕ್ಕಿಲ್ಲ.

ಹಾಗಾದರೆ ಅಭಿವೃದ್ಧಿ ಬೇಡವೆ? ಎಂದು ಯಾರಾದರೂ ಕೇಳಬಹುದು. ಅಭಿವೃದ್ಧಿ ಬೇಡವೆಂದಲ್ಲ. ಬದುಕುತ್ತಿರುವ ಎಲ್ಲ ಸಮಾಜಗಳೂ ಬದಲಾಗುತ್ತಲೆ ಇರಬೇಕಾಗುತ್ತದೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಹವಾಮಾನ ವೈಪರಿತ್ಯವಾದಗ, ಮಾರಕ ಸಾಂಕ್ರಾಮಿಕ ರೋಗಗಳು ಹರಡಿದಾಗ ಇತ್ಯಾದಿ ಸಂದರ್ಭಗಳಲ್ಲಿ ವಲಸೆಗಳು ಸ್ವಾಭಾವಿಕವಾಗಿ ಆಗುತ್ತವೆ. ಇನ್ನೂ ಅನೇಕ ಸಾಮಾಜಿಕ ಕಾರಣಗಳಿಗೂ ವಲಸೆಗಳಾಗಬಹುದು. ಆಯಾ ಕಾಲಘಟ್ಟದಲ್ಲಿ ತಾನು ಉಳಿದುಕೊಳ್ಳಲು ಯಾವ್ಯಾವ ಉಪಾಯಗಳನ್ನು ಮಾಡಬೇಕೊ ಅವನ್ನು ಎಲ್ಲ ಸಮಾಜಗಳೂ ಮಾಡುತ್ತಲೆ ಇರುತ್ತವೆ. ನಿಸರ್ಗ ಮತ್ತು ಸಮಾಜ ಈ ಎರಡೂ ಘಟಕಗಳು ನಾವು ಸಾಧಿಸಬಯಸುವ ಅಭಿವೃದ್ಧಿಯ ಕಾಳಜಿಗೆ ಒಳಗಾಗಬೇಕು. ಈ ಎರಡರಲ್ಲಿ ಯಾವುದೇ ಒಂದರಲ್ಲಿ ಸಮತೋಲನ ತಪ್ಪಿದರೂ ಅಪಾಯ ನಿಶ್ಚಿತ. ಆದರೆ ನಾವಿಂದು ಅನುಕರಿಸುತ್ತಿರುವ ಅಭಿವೃದ್ಧಿ ಮಾದರಿಯಲ್ಲಿ ಒಂದುಕಡೆ ಕಾಮಗಾರಿಗಳಿಗಾಗಿ ಅರಣ್ಯಗಳು, ಕೃಷಿ ಭೂಮಿ ಒತ್ತುವರಿಯಾಗುತ್ತಿವೆ; ಇನ್ನೊಂದು ಕಡೆ ಅದೇ ಅಭಿವೃದ್ಧಿ ಬಡವನನ್ನು ದರಿದ್ರನನ್ನಾಗಿಯೂ, ದೀನನನ್ನಾಗಿಯೂ ಮಾಡಿ, ಉಳ್ಳವನನ್ನು ಶ್ರೀಮಂತನನ್ನಾಗಿ ಮಾಡುತ್ತಿದೆ.

ಇಡಿ ಭಾರತದಲ್ಲಿ ಉತ್ತರಕನ್ನಡವನ್ನು ಹೋಲಬಲ್ಲ ಇನ್ನೊಂದು ಜಾಗ ಸಿಗಲಿಕ್ಕಿಲ್ಲ. ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳಿಂದ ಕೂಡಿದ ಅತ್ಯಂತ ರೋಚಕ ಭಾಗದಲ್ಲಿ ಈ ಜಿಲ್ಲೆ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಇಲ್ಲಿಯ ಜನ ನೆಲವನ್ನು, ನೆಲೆಯನ್ನು, ಬದುಕನ್ನೂ ಕಳೆದುಕೊಂಡರು. ಈ ಕಳೆದುಕೊಳ್ಳುವಿಕೆ ಸ್ವಾತಂತ್ರ್ಯಾನಂತರವೂ ಮುಂದುವರಿದಿದೆ. ಅದು ಅಭಿವೃದ್ಧಿಯ ನೆಪದಲ್ಲಿ. ಹೆದ್ದಾರಿಗಳ ನಿರ್ಮಾಣಕ್ಕೆ. ರೈಲ್ವೆ ಯೋಜನೆಗೆ, ಅಣು ಸ್ಥಾವರ, ಸೀಬರ್ಡ್ ನೌಕಾನೆಲೆಗೆ ಎಷ್ಟೋ ಜನ ತಮ್ಮ ಭೂಮಿಯನ್ನು ಕಳೆದುಕೊಂಡು ಗುಳೆ ಹೋಗಿದ್ದಾರೆ. ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಇದಕ್ಕೀಗ ಹೊಸ ಸೇರ್ಪಡೆ. ರಾಷ್ಟ್ರೀಯ ಹೆದ್ದಾರಿ ೧೭ ಈಗ ಚತುಷ್ಪತ ಹೆದ್ದಾರಿ ೬೬ ಆಗಿ ಬದಲಾಗುತ್ತಿದೆ. ಈ ಅಭಿವೃದ್ಧಿ ಪಡೆದಿರುವ ಬಲಿಯನ್ನು ಗಮನಿಸಿದರೆ ಆಘಾತವಾಗುತ್ತದೆ. ಮಂಗಳೂರಿನಿಂದ ಕುಂದಾಪುರದವರೆಗೆ ನಡೆದ ಕಾಮಗಾರಿಯಲ್ಲಿ ಮೊದಲ ಹಂತದಲ್ಲಿ ೩೭.೫ ಕಿ.ಮಿ. ಹಾಗೂ ಎರಡನೆ ಹಂತದಲ್ಲಿ ೯೦ ಕಿ.ಮಿ. ವ್ಯಾಪ್ತಿಯಲ್ಲಿ ಒಟ್ಟು ಸುಮರು ೩೩೦೦೦ ಮರಗಳನ್ನು ಕಡಿಯಲಾಗಿದೆ! ಈಗ ತ್ರತೀಯ ಹಂತಕ್ಕೆ ಅಂದರೆ ಕುಂದಾಪುರದಿಂದ ಕಾರವಾರ ನಡುವೆ ನಡೆಯುವ ೧೮೯ ಕಿ.ಮಿ. ವಿಸ್ತರಣೆಗೆ ಎಷ್ಟು ಮರಗಳು ಉರಳಲಿವೆ? ಎಷ್ಟು ಸಂಸಾರಗಳ ಮೇಲೆ ಇಚ್ಛೆಗೆ ವಿರುದ್ಧವಾಗಿ ಬುಲ್ಡೋಜರ್ ಓಡಲಿದೆ? ಎಂದು ಕಲ್ಪಿಸಿಕೊಳ್ಳುವುದೆ ಆತಂಕಕಾರಿಯಾಗಿದೆ.

ಕೆಲವೊಮ್ಮೆ ಖುಷಿಯಲ್ಲಿ, ವಿಷಾದದಲ್ಲಿ ಅಥವಾ ಕಾರಣವಿಲ್ಲದೆಯೂ ಹಾಡುಗಳು ನೆನೆಪಾಗುತ್ತವೆ. ಅಂಥಾ ಒಂದು ಕವಿವಾಣಿ:
ಹೇ ಉತ್ತರಕನ್ನಡಾ ನೀ ಹಿಂಗೇ ತೀಡಡಾ
ಶಕ್ತಿಯೆಲ್ಲಾ ಮನದಲಿಂಗಿ ಭಕ್ತಿಯೆಲ್ಲಾ ಬಾನಲಿಂಗಿ
ಮಳ್ಳು ಗಾಳಿ ಮಳೆಯಂತೆ ಸೊಗೆಯಲ್ಲಿ ಸೋರಡಾ

ನಾವು ಕಾಣುತ್ತಿರುವ ಅಭಿವೃದ್ಧಿಯ ದುರಂತವೆಂದರೆ, ನೆಲೆ ಕಳೆದುಕೊಂಡವರಿಗೆ ಪರಿಹಾರವಾಗಿ ಸಿಗುವ ಪರ್ಯಾಯ ಭೂಮಿ ಎಷ್ಟೊ ಬಾರಿ ನೆಲೆಸಲು ಯೋಗ್ಯವಾಗಿ, ಜೀವನ ಕಟ್ಟಿಕೊಂಡು ಬದುಕಬಲ್ಲ ಭೂಮಿಯಾಗಿರುತ್ತದೆ ಎಂದು ನಂಬುವುದು ಕಷ್ಟ. ಹಾಗಾಗಿ ಅವರು ಕಳೆದುಕೊಂಡ ಭೂಮಿಯ ಮೇಲೆ ನಿರ್ಮಾಣವಾದ ಬೃಹತ್ ಹೆದ್ದಾರಿಗಳ ಮೇಲೆ ಏನಲ್ಲದಿದ್ದರೂ ಗುಳೆ ಹೋಗಬಹುದು. ನಾವು ಅನುಭವಿಸುತ್ತಿರುವ ಈ ಸೌಭಾಗ್ಯಕ್ಕೆ ಏನೆನ್ನೋಣ?

No comments:

Post a Comment