Monday, August 13, 2012

ಬೆಡ್ರೂಮಲ್ಲಿ ಹೆಗ್ಣ ಬಂದ್ರೆ, ಇಂಟರ್ನೆಟ್ಟಲಿ ದೊಣ್ಣೆ ಹುಡ್ಕಿನೀವು ಕನ್ನಡದ ಹೊಸ ಅಲೆಯ ಚಿತ್ರಗೀತೆಗಳ ಕೇಳುಗರಾಗಿದ್ದರೆ ಶೀರ್ಷಿಕೆಯಲ್ಲಿರುವ ಸಾಲುಗಳನ್ನು ಕೇಳಿರುತ್ತೀರಿ. ಮುಂಗಾರು ಮಳೆ ಚಿತ್ರದಿಂದ ಖ್ಯಾತಿಗೆ ಬಂದ ನಿರ್ದೇಶಕ ಯೋಗರಾಜ್ ಭಟ್ ಇಂತಹ ಸಾಲುಗಳಿಗಾಗಿ ಜನಪ್ರೀಯರು. ಸಮಕಾಲೀನ ಜಗತ್ತಿನ ಓರೆಕೋರೆಗಳನ್ನು ತುಸು ವ್ಯಂಗ್ಯ, ತುಸು ಉಡಾಫೆತನದಲ್ಲೇ ಚಿತ್ರಿಸುವ ಯೋಗರಾಜ್ ಒಬ್ಬ ಪೋಲಿ ವೇದಾಂತಿಯಂತೆ ಅನಿಸುತ್ತಾರೆ. ಮೇಲುನೋಟಕ್ಕೆ ಹೆಗ್ಗಣಕ್ಕೂ, ಇಂಟರ್ನೆಟ್ಟಿನ ದೊಣ್ಣೆಗು ಎಲ್ಲಿಯ ಸಂಬಂಧ ಎನ್ನಿಸಬಹುದು. ಆದರೆ ನಮ್ಮ ವಿಲಕ್ಷಣ ಬದುಕಿನ ’ಅವಾಸ್ತವ ಸತ್ಯ’ಗಳಿಗೆ ಈ ಸಾಲು ರೂಪಕದಂತಿದೆ. ಹೆಗ್ಗಣಗಳ ಬಗ್ಗೆ ನಾನೇನು ಹೇಳಬೇಕಾದದ್ದಿಲ್ಲ. ಅದು ಪುರಾಣ ಪ್ರಸಿದ್ಧ ಮೂಷಿಕ ವಾಹನ. ಆದರೆ ಇಂಟರ್ನೆಟ್? ಅಬ್ಬಬ್ಬಾ ಅಂದರೆ ಒಂದು ತಲೆಮಾರಿನ ಇತಿಹಾಸ ಅದಕ್ಕೆ.

ತೊಂಭತ್ತರ ದಶಕದ ಆದಿಯಲ್ಲಿ ಇಂಟರ್ನೆಟ್ ನ ಬಳಕೆ ವ್ಯಾಪಕವಾಗಿ ಶುರುವಾಯಿತು. ಮೊದಮೊದಲು ಇದನ್ನು ಬಳಸಿ ಇ-ಮೇಲ್ ಕಳುಹಿಸಬಹುದು ಎಂದುಕೊಂಡಿದ್ದೆವು. ಆದರೆ ಈಗ ಇಂಟರ್ನೆಟ್ ಲೋಕ ಬೆರಗು ಹುಟ್ಟಿಸುವಷ್ಟು ಬದಲಾಗಿದೆ. ಕಂಪ್ಯೂಟರ್ ಅಷ್ಟೆ ಅಲ್ಲ ಲ್ಯಾಪ್-ಟಾಪ್, ಟಿವಿ, ಐ-ಪ್ಯಾಡ್ ಕೊನೆಗೆ ಮೊಬೈಲ್ ಗಳಲ್ಲೂ ಇಂಟರ್ನೆಟ್ ಈಗ ಲಭ್ಯವಿದೆ. ಇದರ ಬಳಕೆಯೂ ಅಷ್ಟೇ ಸ್ಕ್ಯಾನಿಂಗ್, ಆಡಿಯೊ, ವೀಡಿಯೊ, ಚಾಟಿಂಗ್(ಹರಟೆ), ಕಾನ್ಫರೆನ್ಸಿಂಗ್, ಬ್ಲಾಗ್, ಬ್ಯಾಂಕಿಂಗ್, ಟಿಕೆಟ್ ಬುಕಿಂಗ್, ಆಸ್ತಿ-ಮನೆ ಹುಡುಕುವುದು, ಸಾಮಾನು ಖರೀಧಿಸುವುದು, ವಿವಾಹ ಸಂಬಂಧ ಕುದುರಿಸುವುದು, ಪಾಠ-ಪ್ರವಚನ ಎಲ್ಲವೂ ಇಂಟರ್ನೆಟ್ ಸೇವೆಯ ಹೆಸರಿನಲ್ಲಿ ಲಭ್ಯವಿವೆ. ಇಂಟರ್ನೆಟ್ ಈಗ ಆಧುನಿಕ ಮನುಷ್ಯನ ಜೀವನದ ಅನಿವಾರ್ಯ ಅಗತ್ಯ ಎಂಬಂತಾಗಿದೆ.

ಬದಲಾವಣೆ ಜಗದ ನಿಯಮ ಎನ್ನುತ್ತಾರೆ. ಹೌದು ಜಗತ್ತು ಬದಲಾಗುತ್ತಿದೆ. ಜೊತೆಗೆ ಎಲ್ಲವೂ ಅಂದರೆ ಮನುಷ್ಯರು, ವಸ್ತುಗಳು, ವಿಚಾರಗಳು, ವ್ಯವಸ್ಥೆಗಳು ಇತ್ಯಾದಿ. ಬದಲಾವಣೆಗಳು ಕ್ರಾಂತಿಯನ್ನೂ ತರುತ್ತವೆ. ಅಂದರೆ ಒಬ್ಬ ಮನುಷ್ಯ ತನ್ನ ಆಯುರ್ಮಾನದಲ್ಲಿ ಎಷ್ಟೊಂದು ಕ್ರಾಂತಿಗಳನ್ನು ನೋಡುತಾನೆ ಅಲ್ಲವೇ!? ಇಂಟರ್ನೆಟ್ಟನ್ನೇ ತೆಗೆದುಕೊಳ್ಳಿ ಎಲ್ಲೋ ಸಾಮಾನ್ಯ ಮನುಷ್ಯರಿಗೆ ಅರ್ಥವಾಗದ ಕಂಪ್ಯೂಟರ್ ನ ಭಾಷೆಗಳು ಸರಳೀಕರಣಗೊಂಡು ಸಾಮಾನ್ಯ ಜನರ ಜೀವನವನ್ನು ಹೊಕ್ಕವು. ಇಂಟರ್ನೆಟ್ಟು ಹೊಸ ಮಾಹಿತಿ ಯುಗವನ್ನು ಹುಟ್ಟುಹಾಕಿತು. ನೋಡನೋಡುತ್ತಿದ್ದಂತೆ ಮೊಬೈಲ್ ಲೋಕವನ್ನು ಸೃಷ್ಟಿಸಿತು. ಇದೆಲ್ಲವನ್ನು ನಾವು ಹುಬೇಹೂಬು ಅನುಭವಿಸಿದ್ದೇವೆ. ಪ್ರತಿ ಬದಲಾವಣೆಯನ್ನು ಹೇಳಲಾರದ ತಲ್ಲಣಗಳಿಂದ ಎದುರುಗೊಂಡಿದ್ದೇವೆ. ಬದಲಾವಣೆ ಜಗದ ನಿಯಮ ಎಂದೆನಷ್ಟೆ? ಆದರೆ ಪ್ರತೀ ಬದಲಾವಣೆಯನ್ನು ಒಳ್ಳೆಯ ಬದಲಾವಾಣೆಯಾಗಲಾರದು.ನಾನು ಹೇಳಹೊರಟಿರುವುದು ಈಗ ಇಂಟರ್ನೆಟ್ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿರುವ ಸೋಶಿಯಲ್ ನೆಟ್ವರ್ಕಿಂಗ್ ಎಂಬ ಸಾಮಾಜಿಕ ತಾಣಗಳ ಬಗ್ಗೆ. ಫೇಸ್ ಬುಕ್, ಆರ್ಕುಟ್ ಇತ್ಯಾದಿಗಳೆಲ್ಲ ಇಂತಹ ಜನಪ್ರೀಯ ತಾಣಗಳು. ಓದುಗರು ಇವುಗಳನ್ನು ಬಳಸುವವರಾಗಿದ್ದರೆ ಈ ಬಗ್ಗೆ ಹೆಚ್ಚಿಗೆ ವಿವರಿಸುವ ಅಗತ್ಯವಿಲ್ಲ. ಇವುಗಳ ಬಗ್ಗೆ ಸರಳೀಕರಿಸಿ ಹೇಳುವುದಾದರೆ - ಒಬ್ಬ ವ್ಯಕ್ತಿ ಏಕ ಕಾಲದಲ್ಲಿ ಹಲವು ಪರಂಪರೆಗೆ ಸೇರಿದವನಾಗಿರುತ್ತಾನೆ. ಉದಾಹರಣೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುವ ನಾನು ಇದೇ ಕ್ಷೇತ್ರದ ಹಲವರೊಂದಿಗೆ ಸ್ನೇಹ ಸಂಪಾದಿಸಿರುತ್ತೇನೆ. ಇದು ಒಂದು ವರ್ತುಲ. ನನ್ನ ಆಸಕ್ತಿ ಸಾಹಿತ್ಯ ಕ್ಷೇತ್ರದಲ್ಲಿಯೂ ಇರುವುದರಿಂದ ನಾನು ಕೆಲವು ಸಾಹಿತಿ ಮಿತ್ರರನ್ನೂ ಹೊಂದಿರುತ್ತೇನೆ. ಇಲ್ಲವೇ ಸಂಪರ್ಕದಲ್ಲಿರಿದ ಹಲವರನ್ನು ಓದಿಕೊಂಡಿರುತ್ತೇನೆ. ಇದು ಇನ್ನೊಂದು ವರ್ತುಲ. ಮನುಷ್ಯನಿಗೆ ಇಂತಹ ಹಲವು ವರ್ತುಲಗಳಿರುತ್ತವೆ. ನಿಜ ಜೀವನದಲ್ಲಿ ಇವೆಲ್ಲ ಅಮೂರ್ತವಾಗಿ ಕಾರ್ಯ ನಿರ್ವಹಿಸುವುದರಿಂದ ಎಲ್ಲವೂ ನಮ್ಮ ನೇರ ಅನುಭವಕ್ಕೆ ಬಾರದೆ ಹೋಗಬಹುದು. ಆದರೆ ಇದು ನಮ್ಮನ್ನು ಹಲವು ಪರಂಪರೆಗಳ ಭಾಗವಾಗಿಸುತ್ತದೆ. ನಾನು ಮೊದಲು ಪ್ರಸ್ತಾಪಿಸಿದ ಸೊಷಿಯಲ್ ನೆಟ್ವರ್ಕಿಂಗ್ ಎಂಬ ಸಾಮಾಜಿಕ ತಾಣಗಳು ಇದರ ಮೂರ್ತ ರೂಪದ ಅಣಕ ಅಥವಾ ಅವಾಸ್ತವ(Virtual) ಮಾದರಿ. ಇಂಟರ್ನೆಟ್ ಎನ್ನುವುದೇ ಒಂದು ಮಹಾ ಜಾಲ. ಇದರೊಳಗೆ ಸೊಶಿಯಲ್ ನೆಟ್ವರ್ಕಿಂಗ್ ಎನ್ನುವುದು ಇನ್ನೊಂದು ಜಾಲ. ಅಂದರೆ ಇದೊಂದು ಜಾಲದೊಳಗಿನ ಜಾಲ.

ಫೇಸ್ ಬುಕ್ ನಂತಹ ತಾಣಗಳು ನೊಂದಾಯಿತ ಜನರ ಗುಂಪುಗಳಿಂದ ಕೂಡಿರುತ್ತವೆ. ಆದರೆ ನೊಂದಾಯಿತ ಸದಸ್ಯ ತನ್ನ ಬಗ್ಗೆ ಇತರರಿಗೆ ನೀಡುವ ಮಾಹಿತಿಯನ್ನು ನೇರವಾಗಿ ಹೇಳಬೇಕೆಂದೇನೂ ಇಲ್ಲ. ಆತ ತಿರುಚಬಹುದು, ಮರೆಮಾಚಬಹುದು, ಉತ್ಪೇಕ್ಷೆ ಮಾಡಬಹುದು ಅಥವಾ ಸುಳ್ಳು ಹೇಳಬಹುದು. ತನಗಾಗುವವರ ಬೆನ್ನು ಚಪ್ಪರಿಸಬಹುದು ಅಥವಾ ತನಗಾಗದವರ ಮೂದಲಿಕೆ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ ಫೇಸ್ ಬುಕ್ಕಿನಂತಹ ತಾಣಗಳಲ್ಲಿ ಜನರ ಮಾತಿನ ಶೈಲಿ ಉಡಾಫೆಯದಾಗಿರುತ್ತದೆ. ಉದಾಹರಣೆಗೆ I lost my father ಎಂಬ ದುಃಖದ ಬರಹಕ್ಕೂ I lost my dog ಎಂಬ ದುಃಖದ ಬರಹಕ್ಕೂ ಒಂದೇ ತೆರನಾದ ಪ್ರತಿಕ್ರೀಯೆಗಳು ಬರುತ್ತವೆ. ನಾಯಿ ಸಾಯುವುದಕ್ಕೂ, ಅಪ್ಪ ಸಾಯುವುದಕ್ಕೂ ಒಂದೇ ಬಗೆಯ ವಿಷಾದ ಭಾವ! ಹೀಗೆ ಈ ತಾಣಗಳು ಒಂದು ಮಿಥ್ಯಾ ವಾಸ್ತವವನ್ನು (Virtual Reality) ಹುಟ್ಟುಹಾಕುತ್ತವೆ.

ನನ್ನ ತಲೆಮಾರಿನ ಯುವಕ ಯುವತಿಯರು ಫೇಸ್ ಬುಕ್ ನಂತಹ ತಾಣಗಳು ಒದಗಿಸುವ ಮಿಥ್ಯಾ ವಾಸ್ತವಕ್ಕೆ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸುವ ಸೌಲಭ್ಯಗಳು ಅಲ್ಲಿವೆ. ಉದಾಹರಣೆಗೆ ತನ್ನ ಅಥವಾ ತನಗೆ ಬೇಕಾದವರ ಫೋಟೊಗಳನ್ನು, ಸುದ್ದಿಗಳನ್ನು, ಮಾಹಿತಿಗಳನ್ನು ಅಥವಾ ಆಸೆಗಳನ್ನು ಅಲ್ಲಿ ಹಂಚಿಕೊಳ್ಳಬಹುದು. ತನಗೆ ತೋಚಿದ ಏನನ್ನಾದರೂ ಬರೆಯಬಹುದು. ಹರಟೆ, ಜಗಳ, ವಿವಾದಗಳಿಂದ ಇತರರ ಗಮನ ಸೆಳೆಯಬಹುದು. ಅಂದರೆ ವಾಸ್ತವ ಪ್ರಪಂಚದಲ್ಲಿ ಸಿಗದ್ದನ್ನು ಜನ ಅಲ್ಲಿ ಪಡೆದಂತೆ ಭಾವಿಸುತ್ತಾರೆ. ವಾಸ್ತವ ಬದುಕಿನಲ್ಲಿ ನಮಗೆ ಎಷ್ಟು ಜನ ಒಳ್ಳೆಯ ಗೆಳೆಯರು ಸಿಗುತ್ತಾರೆ? ಒಂದು? ಎರಡು? ನಾಲ್ಕು? ಅಂತಹ ಸ್ನೇಹಿತರನ್ನು ಪಡೆಯಲು ನಾವು ಪಟ್ಟ ಪಾಡೇನು? ನಮ್ಮ ಸತ್ವ ಹೇಗೆಲ್ಲ ಪರೀಕ್ಷೆಗೆ ಒಳಗಾಗುತ್ತದೆ? ನಮ್ಮ ಮೇಲೆ ಪ್ರತಿ ಸಂಬಂಧವೂ ಜವಾಬ್ದಾರಿಗಳನ್ನು ಹೇರುತ್ತದೆ. ಆದರೆ ಈ ಫೇಸ್ ಬುಕ್ ನಂತಹ ಮಿಥ್ಯಾ ಪ್ರಪಂಚದಲ್ಲಿ ಜವಾಬ್ದಾರಿಯ ಹೊರೆ ಇರುವುದಿಲ್ಲ. ಒಂದು ಗೆಳೆತನದ ಕೋರಿಕೆ (Friendship Request)ಕಳುಹಿಸಿದರೆ ಮುಗಿಯಿತು. ಒಂದು ಮಾತೂ ಆಡದೆ, ಒಂದು ಚೂರೂ ತಿಳಿಯದೆ ಸಾಮಾಜಿಕ ತಾಣಗಳಲ್ಲಿ ಸಾವಿರಾರು ಗೆಳೆಯರನ್ನು ಹೊಂದಲು ಸಾಧ್ಯವಿದೆ! ಇದೊಂದು ಬಗೆಯ ಸುಳ್ಳು ತೃಪ್ತಿ. ಅವಾಸ್ತವ! ಅಮಾನುಷ!!

ಮನುಷ್ಯನಿಗೆ ಎಲ್ಲವೂ ಬೇಕು: ಗೆಳೆತನ ಬೇಕು, ಸಾಮಾಜಿಕ ಅನುಬಂಧ ಬೇಕು, ಬೆಂಬಲ ಬೇಕು, ಮನ್ನಣೆ ಬೇಕು ಮತ್ತು ಬಹು ಮುಖ್ಯವಾಗಿ ಪ್ರೀತಿ ಬೇಕು. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?, ಅಲ್ಲವೆ? ಇದ್ಯಾವುದೂ ಅಲ್ಲಗಳೆಯುವ ವಿಷಯವಲ್ಲ. ಆದರೆ ವೈಚಾರಿಕತೆ ಇಲ್ಲದೆ, ಇದ್ಯಾವುದೂ ಇದ್ದೂ ಉಪಯೋಗವಿಲ್ಲ. ಇತ್ತೀಚೆಗೆ ಫೇಸ್ ಬುಕ್ ನಿಂದಾಗಿ ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಫೇಸ್ ಬುಕ್ ಪ್ರಮುಖ ಸಾಕ್ಷ್ಯವಾಗಿ ಬಳಕೆಯಾಗುತ್ತಿರುವ ಬಗ್ಗೆ ಅನೇಕ ಸಮೀಕ್ಷೆಗಳು ಪುಷ್ಟೀಕರಿಸುತ್ತಿವೆ. ಮನುಷ್ಯ ತಾನೇ ಜವಾಬ್ದಾರನಾಗಿ ಸೃಷ್ಟಿಸಿಕೊಂಡ ಸಂಬಂಧಗಳು ನೈಜ್ಯವಾಗಿರುತ್ತವೆ. ಸಂಬಂಧಗಳಿಗೆ ಯಂತ್ರಗಳ ಅವಲಂಬನೆ, ಅಥವಾ ಇನ್ಯಾವುದೇ ಮಾಧ್ಯಮದ ಬಳಕೆಯಾದಲ್ಲಿ ನಾವು ಹೊಣೆಗೇಡಿಗಳಾಗುತ್ತೇವೆ. ಜವಾಬ್ದಾರಿಗಳಿಂದ ವಂಚಿತರಾಗುತ್ತೇವೆ.

ಹಾಗಾದರೆ ಇಷ್ಟೊಂದು ಸಮಸ್ಯೆಗಳಿರುವ ಈ ಸಾಮಾಜಿಕ ತಾಣಗಳಿಂದ ಏನಾದರೂ ಲೋಕೋದ್ಧಾರದ ಕೆಲಸಗಳು ನಡೆದಿವೆಯೆ ಎಂಬ ಪ್ರಶ್ನೆಯೂ ಏಳುತ್ತದೆ. ಇದಕ್ಕೆ ಉತ್ತರವೂ ಇದೆ. ಅಂತರ್ಜಾಲ ಹಲವೆಡೆ ಪ್ರಜಾಪ್ರಭುತ್ವೀಕರಣಕ್ಕೆ ಸಹಾಯಕವಾಗಿದೆ. ಉದಾಹರಣೆಗೆ ಆಫ್ರೋ-ಅರಬ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಕ್ರಾಂತಿಗಳು ಇದಕ್ಕೆ ತಾಜಾ ಉದಾಹರಣೆಗಳು. ಗಡಾಫಿ, ಹೋಸ್ನಿ ಮುಬಾರಕ್ ರಂತಹ ಸರ್ವಾಧಿಕಾರಿಗಳನ್ನು ಕೆಡವಲು ಸಾಮಾಜಿಕ ತಾಣಗಳು ನಿರ್ಣಾಯಕ ಪಾತ್ರ ವಹಿಸಿದವು. ದಮನಕಾರಿ ಮತ್ತು ಭಯದ ವಾತಾವರಣ ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿ ಯಾವಾಗಲೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಅಭಿಪ್ರಾಯ ವಿನಿಮಯ, ಮಾಹಿತಿ ಸಂವಹನ ಮತ್ತು ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ನೆರವಾದವು. ನಾವು ಚರ್ಚಿಸುತ್ತಿರುವ ಸಾಮಾಜಿಕ ತಾಣಗಳು ಒಂದು ಕಡೆ ಮಿಥ್ಯಾ ವಾಸ್ತವವನ್ನು ಸೃಷ್ಟಿಸುತ್ತಿವೆ, ಇನ್ನೊಂದು ಕಡೆ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತಿವೆ. ಇದೊಂದು ಬಗೆಯ ಇಬ್ಬಂದಿತನ. ದ್ವಂದ್ವ, ಇಬ್ಬಂದಿತನಗಳೆಲ್ಲ ಮನುಷ್ಯನಲ್ಲಷ್ಟೆ ಅಲ್ಲ, ಅವನ ಆವಿಷ್ಕಾರಗಳಲ್ಲಿಯೂ ಕಂಡುಬರುತ್ತವೆ ಎಂದು ಅನಿಸಿವುದಿಲ್ಲವೆ?