Wednesday, July 25, 2012

ಕುಸ್ಮಾಕರರು ಹೊಡೆದ ಅನೈತಿಕ ಚಪ್ಪಾಳೆ೧೯೪೯ರಲ್ಲಿ ಇಂಗ್ಲೆಂಡಿನ ಲೇಖಕ ಜಾರ್ಜ್ ಆರ್ವೆಲ್ ’೧೯೮೪’ ಎಂಬ ಹೆಸರಿನ ಕಾದಂಬರಿಯೊಂದನ್ನು ಬರೆದ. ಅದರಲ್ಲಿ ಜನರ ಗ್ರಹಿಕೆ ಮತ್ತು ಆಲೋಚನೆಗಳನ್ನು ಭಾಷೆಯ ಮೂಲಕ ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಚಿತ್ರಿಸಿದ್ದಾನೆ. ಈಗ ಭಾಷೆಯ ರಾಜಕೀಯ ಕಾದಂಬರಿಯ ಕಲ್ಪನೆಯಾಗಿ ಉಳಿದಿಲ್ಲ. ನಾವೀಗ ರಾಜಕೀಯಗೊಂಡ ಭಾಷೆಯನ್ನು ಬಳಸುತ್ತಿದ್ದೇವೆ ಎಂದು ಅನಿಸುತ್ತದೆ. ಉದಾಹರಣೆಗೆ ಮುಕ್ತ ಮಾರುಕಟ್ಟೆ ನೀತಿಯನ್ನು ಭಾರತ ಒಪ್ಪಿಕೊಂಡ ನಂತರ ರಾಜಕಾರಣ ನಮಗೆ ವ್ಯಾಪಾರ, ವಾಣಿಜ್ಯಕ್ಕೆ ತಕ್ಕ ಭಾಷೆಯನ್ನು ಕಲಿಸುತ್ತಿದೆಯೇ ಹೊರತು ಮನಸ್ಸು, ಬುದ್ಧಿ, ಆಲೋಚನೆಯನ್ನು ತಿದ್ದುವ ಭಾಷೆಯನ್ನಲ್ಲ. ಹೀಗೆ ರಾಜಕೀಯಗೊಂಡ ಭಾಷೆಯನ್ನು ಹೇರುವುದಕ್ಕೆ ಶಿಕ್ಷಣ ಕ್ಷೇತ್ರ ಬಳಕೆಯಾಗಿರುವುದು ನಮ್ಮ ಕಾಲದ ದುರಂತ. ಎಳೆಯ ತಲೆಮಾರಿನ ಆಲೋಚನೆಯನ್ನು ರಾಜಕೀಯಗೊಂಡ ಭಾಷೆಯ ಮೂಲಕ ತಿದ್ದುವುದು ಶಿಕ್ಷಣ ರಾಜಕಾರಣದ ಗುರಿಯಾದಂತಿದೆ.

ಸ್ವಲ್ಪ ಹಿಂದಕ್ಕೆ ಹೋಗಿ ಯೋಚಿಸಿ. ಆಗಸ್ಟ್ ೪, ೨೦೦೯ರಂದು ಕಡ್ಡಾಯ ಶಿಕ್ಷಣ ಕಾಯ್ದೆ (RTE - Right to Education) ಭಾರತದಲ್ಲಿ ಜಾರಿಗೆ ಬಂತು. ಇದರಂತೆ "೬ ರಿಂದ ೧೪ ವರ್ಷದ ಪ್ರತೀ ಭಾರತೀಯ ಮಗುವೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಅರ್ಹವಾಗುತ್ತದೆ. ಇದಕ್ಕೆ ಅನುಕೂಲವಾಗುವಂತೆ ಎಲ್ಲ ಖಾಸಗಿ ಶಾಲೆಗಳು ಸಹ ಬಡ ಮಕ್ಕಳಿಗೆಂದು ಶೇ. ೨೫ರಷ್ಟು ಸೀಟುಗಳನ್ನು ಮೀಸಲಿಡಬೇಕು. ಖಾಸಗಿ ಶಾಲೆಗಳು ದುಬಾರಿಯಾದ್ದರಿಂದ ಅವರ ಶುಲ್ಕವನ್ನು ರಾಜ್ಯ ಸರ್ಕಾರಗಳು ಭರಿಸಬೇಕು". ಈ ಕಾಯ್ದೆ ಎಪ್ರಿಲ್ ೧, ೨೦೧೦ರಂದು ಕಾರ್ಯರೂಪಕ್ಕೆ ಬಂದಿತಲ್ಲದೆ, ಶಿಕ್ಷಣವನ್ನು ಮೂಲಭೂತ ಹಕ್ಕೆಂದು ಪರಿಗಣಿಸುವ ವಿಶ್ವದ ೧೩೫ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿತು. ವಿಶ್ವಬ್ಯಾಂಕ್ ನ ಶಿಕ್ಷಣ ರಾಯಭಾರಿ ಸ್ಯಾಮ್ ಕಾರ್ಲ್ ಸನ್ ಹೇಳುವಂತೆ ಈ ಮಕ್ಕಳ ಶಿಕ್ಷಣ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತ ಏಕೈಕ ದೇಶ ಭಾರತ. ಭಾರತವಾಸಿಗಳಾದ ನಮಗಿದು ಅಭಿಮಾನದ ಸಂಗತಿ. ಆದರೆ ಈ ಹೆಮ್ಮೆಯನ್ನು ಮಂಕಾಗಿಸುವ ವಿದ್ಯಮಾನಗಳು ಇತ್ತೀಚೆಗೆ ನಡೆದಿವೆ.

ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಜುಲೈ ೧೬ ರಿಂದ ೨೨ರ ವರೆಗೆ ತನ್ನ ವ್ಯಾಪ್ತಿಗೆ ಬರುವ ಶಾಲೆಗಳನ್ನು ಮುಚ್ಚಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಖಾಸಗಿ ಶಾಲೆಗಳಲ್ಲಿ ಜಾರಿಗೆ ತರುವುದನ್ನು ಪ್ರತಿಭಟಿಸಿತು. ಪ್ರತಿಭಟನೆಗೆ ಮೊದಲು ಕುಸ್ಮಾದ ಅಧ್ಯಕ್ಷ ಜಿ. ಎಸ್. ಶರ್ಮಾ ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ಪ್ರತಿಭಟನೆಗೆ ಅಲ್ಪಸಂಖ್ಯಾತ ಶಾಲೆಗಳನ್ನು ಗುರುತಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದೇ ಮುಖ್ಯ ಕಾರಣ ಎಂದಿದ್ದರು. ಇದೇ ನಿಜವಾಗಿದ್ದರೆ ನಾವು ಪ್ರಜಾಪ್ರಭುತ್ವದಡಿಯಲ್ಲಿ ಕುಸ್ಮಾದ ಪ್ರತಿಭಟನೆಯನ್ನು ಸಹ್ಯವಾಗಿಸಿಕೊಳ್ಳಬಹುದಿತ್ತೇನೊ? ಆದರೆ ಪ್ರತಿಭಟನೆಯ ವೇಳೆ ಅದೇ ಜಿ. ಎಸ್. ಶರ್ಮಾರಿಂದ ತೂರಿಬಂದ ಹೇಳಿಕೆಗಳು ನಮ್ಮನ್ನು ಅಪಮಾನಕ್ಕೊಳಪಡಿಸಿವೆ. "ಸಮುದ್ರದ ನೀರಿಗೆ ಕೊಳಕು ಸೇರಬಾರದು. ಅದರಿಂದ ಇಡಿ ಸಮುದ್ರ ಕೊಳಕಾಗುತ್ತದೆ" ಎಂದು ಹೇಳಿ ಶರ್ಮಾ ಬಡಮಕ್ಕಳನ್ನು ಕುಸ್ಮಾದಡಿ ಬರುವ ಶಾಲೆಗಳಲ್ಲಿ ಕಲಿಯುವುದನ್ನು ನಿರಾಕರಿಸಲು ಇರುವ ನಿಜವಾದ ಕಾರಣವನ್ನು ಹೊರಗೆಡಹಿದ್ದಾರೆ. ಕುಸ್ಮಾಕರರು ಮಾಡಲು ಹೊರಟಿರುವ ಶುದ್ಧೀಕರಣ ಪ್ರಜಾಪ್ರಭುತ್ವದ ವಿರುದ್ಧ ನಡೆ. ಇದೊಂದು ದಮನಕಾರಿ ಸಂಸ್ಕೃತಿ. ಸಮಾನತೆ ಮತ್ತು ಆತ್ಮಗೌರವ ಶಿಕ್ಷಣ ನಮಗೆ ದಯಪಾಲಿಸಬೇಕಾದ ಕನಿಷ್ಠ ಗಳಿಕೆಗಳು. ಇದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯುತ ಸ್ಥಾನಗಳಲ್ಲಿ ಕುಳಿತಿರುವವರಿಗೆ ತಿಳಿಯದೆ ಹೋದದ್ದು ವ್ಯವಸ್ಥೆಯ ವ್ಯಂಗ್ಯ. ಆದರೆ ಇವರೇಕೆ ಸಮಾನತೆಯನ್ನು ಧಿಕ್ಕರಿಸಿ ಹೀಗಾಡುತ್ತಾರೆ ಎಂಬ ಒಳಸೂಕ್ಷ್ಮಗಳನ್ನು ನಾವು ಅರಿಯಬೇಕಿದೆ.

ಗ್ಲೋಬಲ್ ಕಲ್ಚರ್ ಅಥವಾ ಜಾಗತಿಕ ಸಂಸ್ಕೃತಿ ಎನ್ನುವುದು ಜಾಗತೀಕರಣದ ಒಂದು ಮುಖ. ವಿಶ್ವದಲ್ಲಿ ಏಕರೂಪದ ಸಂಸ್ಕೃತಿಯನ್ನು ರೂಪಿಸಬೇಕೆನ್ನುವುದು ಇದರ ಕಾರ್ಯಸೂಚಿ. ಹಾಗಾಗಿ ಬಹುತ್ವದಲ್ಲಿ ಇದಕ್ಕೆ ನಂಬಿಕೆಯಿಲ್ಲ. ಭಾರತವಾದರೋ ಬಹು ಭಾಷೆಯ, ಬಹು ಧರ್ಮದ, ಬಹು ಸಂಸ್ಕೃತಿಯ ಒಟ್ಟಿನಲ್ಲಿ ಬಹುತ್ವದಿಂದ ಸಮೃದ್ಧವಾಗಿರುವ ದೇಶ. ಗ್ಲೋಬಲ್ ಕಲ್ಚರ್ ಹೇರುತ್ತಿರುವ ಅತ್ಯಂತ ಅಪರಿಚಿತವಾದ ಭಾಷೆ. ವೇಷಭೂಷಣ, ಆಹಾರಕ್ರಮ, ದಿನಬಳಕೆಯ ವಸ್ತುಗಳು ಯಾವ ಅಡೆತಡೆ ಇಲ್ಲದೆ ಜಾಗತಿಕ ಮಾರುಕಟ್ಟೆಯ ಮೂಲಕ ನಮ್ಮನ್ನು ತಲುಪುತ್ತಿವೆ. ಅಷ್ಟೆ ಅಲ್ಲ ನಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಅಲೋಪತಿ ಆಕ್ರಮಿಸಿದೆ. ಸಾಂಪ್ರದಾಯಿಕ ಲಲಿತಕಲೆಗಳನ್ನು ಸಮೂಹಮಾಧ್ಯಮಗಳು ಕೊಲ್ಲುತ್ತಿವೆ. ಚಿತ್ರಕಲೆಯನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲೆಗುಂಪು ಮಾಡಿದೆ. ಪಾಪ್ ಸಂಗೀತ ಶಾಸ್ತೀಯ ಸಂಗೀತವನ್ನು ನುಂಗಿದೆ. ಸಾಹಿತ್ಯ ಕಲೆಗಳನ್ನು ಹ್ಯಾರಿ ಪಾಟರ್ ನಂತಹ ಕಾಮಿಕ್ಸ್ ಗಳು ಆಕ್ರಮಿಸಿವೆ. ಹೀಗೆ ನಮ್ಮ ದೇಸಿ ಸಂಸ್ಕೃತಿಯ ಪಾಠಗಳು ನಿರ್ಲಕ್ಷಕ್ಕೊಳಗಾಗಿವೆ. ಗ್ಲೋಬಲ್ ಕಲ್ಚರ್ ಸ್ಥಳೀಯವಾದದ್ದೆಲ್ಲವನ್ನು ದ್ವಿತೀಯ ದರ್ಜೆಯದ್ದಾಗಿ ನೋಡಬೇಕೆಂದು ನಮ್ಮನ್ನು ಉದ್ರೇಕಿಸುತ್ತದೆ. ನಮ್ಮ ಸಾಂಪ್ರದಾಯಿಕ ಶಿಕ್ಷಣಕ್ರಮವೂ ಇದಕ್ಕೆ ಹೊರತಲ್ಲ. ಸರ್ಕಾರಿ ಕನ್ನಡ ಮತ್ತು ಖಾಸಗಿ ಇಂಗ್ಲಿಷ್ ಶಾಲೆಗಳ ಗುದ್ದಾಟವನ್ನೇ ತೆಗೆದುಕೊಳ್ಳಿ. ಕನ್ನಡದ ವಿರುದ್ಧ ಇಂಗ್ಲಿಷ್ ಎನ್ನುವುದು ನಿಜವಾದ ಸಮಸ್ಯೆಯಲ್ಲ. ಇದೊಂದು ಸೋಗಿನ ಸಮಸ್ಯೆ. ಶಿಕ್ಷಣದಲ್ಲಿ ಸ್ಥರೀಕರಣ ಅಥವಾ ಅಸಮಾನತೆ ಖಾಯಂಗೊಳಿಸಲ್ಪಡುತ್ತಿರುವುದು ನಿಜವಾದ ಸಮಸ್ಯೆ. ಅಂದರೆ ಅಸಮಾನತೆ ಮೂಲ ಸಮಸ್ಯೆ ಎಂದಾಯಿತು. ಬಂಡವಾಳಶಾಹಿಯ ನಿಜವಾದ ಅಸ್ತ್ರವೆಂದರೆ ವಿಷಯಾಂತರ. ತನ್ನ ವಿರುದ್ಧ ನಡೆಯುವ ಎಲ್ಲಾ ಕಾರ್ಯಾಚರಣೆಗಳನ್ನು ಅದು ವಿಷಯಾಂತರದಿಂದ ಪರಿಹರಿಸಿಕೊಳ್ಳುತ್ತದೆ. ಶಿಕ್ಷಣವೀಗ ಮುಂಚಿನಂತೆ ’ವಿದ್ಯಾದಾನ’ವಲ್ಲ, ಬದಲಾಗಿ ’ಶಿಕ್ಷಣ ಉದ್ಯಮ’. ಉದ್ಯಮಗಳ ಪರಮಗುರಿ ಲಾಭ ಗಳಿಕೆ. ಜಾಗತಿಕ ಮಾರುಕಟ್ಟೆಯ ಭಾಷೆ ಕನ್ನಡವಲ್ಲ ಅದು ಇಂಗ್ಲಿಷ್. ಜಾಗತಿಕ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಇಂಗ್ಲಿಷ್ ಮಾತನಾಡುವ ಪದವೀಧರರನ್ನು ಉತ್ಪಾದಿಸುವ ಗುತ್ತಿಗೆಯನ್ನು ನಮ್ಮ ಶಿಕ್ಷಣ ಉದ್ಯಮ ಪಡೆದಿದೆ. ಅಂದರೆ ಇಂಗ್ಲಿಷ್ ಈಗ ಓಡುವ ಕುದುರೆ. ಹಾಗಾಗಿ ಮೊದಲೆ ಉಲ್ಲೇಖಿಸಿದಂತೆ ಸ್ಥಳೀಯವಾದ ಕನ್ನಡ ಆತಂಕಕ್ಕೀಡಾಂತೆ ಭಾಸವಾಗುತ್ತಿದೆ.ನಮ್ಮ ದೇಶಕ್ಕೀಗ ಶ್ರೀಮಂತಿಕೆಯ ಕನಸು ಬೀಳುತ್ತಿದೆ. ಜಾಗತೀಕರಣ ನಮ್ಮನ್ನು ಹಾಗೆ ಉದ್ರೇಕಿಸುತ್ತಿದೆ. ಬೆಂಗಳೂರು ಸಿಂಗಾಪುರವಾಗಬೇಕು ಎನ್ನುತ್ತೇವೆ, ಹಾಂಗ್ ಕಾಂಗ್ ಆಗಲಿ ಎಂದು ಕನವರಿಸುತ್ತೇವೆ, ಅಮೆರಿಕವಾಗಲಿ ಎಂದು ಹಪಹಪಿಸುತ್ತೇವೆ. ಒಂದು ದೇಶ ಬರೀ ಶ್ರೀಮಂತವಾಗಲು ಹೊರಟರೆ, ತನ್ನ ಬೇರುಗಳನ್ನು ಮರೆತರೆ, ಲಾಭವೊಂದೆ ಗುರಿಯಾದರೆ ಪರಮ ಸ್ವಾರ್ಥದಲ್ಲಿ ನೈತಿಕವಾಗಿ ಭ್ರಷ್ಟವಾಗುತ್ತದೆ. ನಮ್ಮ ಶಿಕ್ಷಣ ಉದ್ಯಮ ಬಹುರಾಷ್ಟ್ರೀಯ ಕಂಪನಿಗಳ ಹಿತ ಕಾಯುವ ’ಪ್ರೊಫೆಶನಲ್’ಗಳನ್ನು ಉತ್ಪಾದಿಸುತ್ತಿದೆ. ಆದರೆ ಪ್ರೊಫೆಶನಲಿಸಂ ಹೆಸರಿನಲ್ಲಿ ನಿರ್ದಯಿ ಮತ್ತು ನಿರ್ಭಾವುಕವಾಗುವುದನ್ನು ನಾವೀಗಲೆ ಸಿರಿವಂತ ದೇಶಗಳಲ್ಲಿ ಕಾಣಬಹುದಾಗಿದೆ. ಬಡ ಮಕ್ಕಳನ್ನು ಕೊಚ್ಚೆಗೆ ಹೋಲಿಸಿ ಶುದ್ಧೀಕರಣದ ಮಾತನಾಡುತ್ತಿರುವ ಕುಸ್ಮಾಕರರು ಹಳೆಯ ಸಮಸ್ಯೆಗಳಿಗೆ ಹೊಸ ರೂಪ ನೀಡುತ್ತಿದ್ದಾರೆ ಅಷ್ಟೆ.

ನಮಗೆಲ್ಲ ತಿಳಿದಿರುವ ದೃಷ್ಟಾಂತ ಕತೆಯೊಂದಿದೆ. ಆಡಿನ ವೇಷಧರಿಸಿ ಆಹಾರವಾಗಿ ಬರುವ ವಾತಾಪಿ ಎಂಬ ರಾಕ್ಷಸನನ್ನು ಅಗಸ್ತ್ಯ ಜೀರ್ಣಿಸಿಕೊಳ್ಳುವ ಕತೆ. ಸಮಸ್ಯೆಗಳು ವಾತಾಪಿಯಂತೆ ರೂಪಾಂತರಗೊಂಡು ಬರುತ್ತವೆ. ಅದನ್ನು ಪರಿಹರಿಸಿಕೊಳ್ಳುವ ಮಾರ್ಗಗಳೂ ವ್ಯವಸ್ಥೆಯೊಳಗಿನಿಂದ ಬರಬೇಕು. ಕನ್ನಡದ ವಿರುದ್ಧ ಇಂಗ್ಲಿಷ್ ಎಂಬ ಸೋಗಿನ ಸಮಸ್ಯೆ ಪರಿಹರಿಸಲಾರದ್ದೇನೂ ಅಲ್ಲ. ಈಗಾಗಲೇ ನಿರೂಪಿತವಾಗಿರುವಹಾಗೆ ಮಕ್ಕಳಲ್ಲಿ ’ಲಿಂಗ್ವಿಸ್ಟಿಕ್ ಪ್ಲಾಸ್ಟಿಸಿಟಿ’ ಅಂದರೆ ಭಾಷಾ ಕಲಿಕೆಯ ಸಾಮರ್ಥ್ಯ ನೈಸರ್ಗಿಕವಾಗಿ ಇರುತ್ತದೆ. ಇದರಿಂದಾಗಿ ಚಿಕ್ಕ ವಯಸ್ಸಿನ ಮಕ್ಕಳು ನಾಲ್ಕು ಭಾಷೆಗಳನ್ನು ಆರಾಮವಾಗಿ ಕಲಿಯಬಲ್ಲರು. ವಯಸ್ಸು ಮೀರಿದಂತೆ ಈ ಸಾಮರ್ಥ್ಯ ಅವರಲ್ಲಿ ಕುಂಠಿತವಾಗುತ್ತಾ ಹೋಗುತ್ತದೆ. ಮಕ್ಕಳ ಈ ನೈಸರ್ಗಿಕ ಸಾಮರ್ಥ್ಯವನ್ನು ಗುರಿಯಾಗಿಟ್ಟುಕೊಂಡು ಯೋಚಿಸಿದಾಗ ಪ್ರಾಥಮಿಕ ಶಿಕ್ಷಣದಲ್ಲಿ ’ದ್ವಿಮಾಧ್ಯಮ’ವನ್ನು ಜಾರಿಗೆ ತರಲು ಇದು ಸಕಾಲ ಎನಿಸುತ್ತದೆ. ಇದರಿಂದ ಒಂದು ಪಠ್ಯವನ್ನು ಮಗು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಕಲಿಯಬಲ್ಲದು. ಇದರಿಂದ ಇಂಗ್ಲಿಷನ್ನು ದಾಳವಾಗಿಸಿಕೊಂಡು ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಉದ್ಯಮವನ್ನು ಹೆಡೆಮುರಿ ಕಟ್ಟಬಹುದು. ಇಂಗ್ಲಿಷ್ ಈಗ ಕೇವಲ ಜಾಗತಿಕ ಮಾರುಕಟ್ಟೆಯ ಭಾಷೆಯಾಗಿ ಉಳಿದಿಲ್ಲ. ಅದು ಜ್ಞಾನದ ಭಾಷೆಯೂ ಹೌದು. ಪ್ರಪಂಚದಾದ್ಯಂತ ನಡೆವ ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳ ಅತ್ಯುತ್ತಮ ಲೇಖನಗಳು ಇಂದು ಇಂಗ್ಲಿಷಿನಲ್ಲಿ ಪ್ರಕಟಗೊಳ್ಳುತ್ತವೆ. ಇಂಗ್ಲಿಷನ್ನು ಪ್ರಾದೇಶಿಕ ಭಾಷೆಯಾಗಿ ಪರಿಗಣಿಸುವ ದೇಶಗಳ ಲೇಖಕರು ಅತ್ಯುತ್ತಮ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇದೆಲ್ಲದರ ಉಪಯೋಗ ಬಡ ಕನ್ನಡದ ಮಕ್ಕಳಿಗೂ ಲಭ್ಯವಾಗಲಿ. ಅನ್ಯ ಪ್ರಭಾವವನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಷ್ಟಿಸಿಕೊಂಡು ಬೆಳೆಯುವ ಗುಣ ಕನ್ನಡಕ್ಕಿದೆ. ಇದು ಇತಿಹಾಸದಿಂದ ನಿರೂಪಿತವಾಗಿದೆ. ಹಾಗಾಗಿ ಹುಸಿ ಬೆದರಿಕೆಗಳಿಂದ ಹೊರಬಂದು ನಾವು ನಿಜವಾದ ಸಮಸ್ಯೆಗಳತ್ತ ಗಮನಹರಿಸಬೇಕಿದೆ.

ಅಸಮಾನತೆ ಮತ್ತು ಪ್ರಜಾಪ್ರಭುತ್ವ ಜೊತೆಯಾಗಿ ಸಾಗಲಾರವು. ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಸಮಾನತೆಯ ಹೆಜ್ಜೆ ಇಡಲು ನಮಗಿರುವ ಸಂವಿಧಾನದತ್ತ, ಪ್ರಜಾಪ್ರಭುತ್ವೀಯ ಮಾರ್ಗ. ಈ ನಿಟ್ಟಿನಲ್ಲಿ ಯೋಚಿಸಿದಾಗ ಜಿ. ಎಸ್. ಶರ್ಮಾ ನೀಡಿದ, ಲಜ್ಜೆಗೇಡಿತನದ, ಶುದ್ಧೀಕರಣದ ಹೇಳಿಕೆಯಾಗಲಿ, ಕುಸ್ಮಾಕರರು ನಡೆಸುತ್ತಿರುವ ವಿರೋಧವಾಗಲಿ, ಪ್ರಜಾಪ್ರಭುತ್ವ ಗೌರವಿಸುವ ಪ್ರತಿಭಟನೆಯಲ್ಲ. ಇದೊಂದು ವ್ಯವಸ್ಥಿತ ಹುನ್ನಾರ. ಪ್ರತಿಭಟನೆಯ ಸೋಗು ಕಾನೂನಿನ ಕುಣಿಕೆಯಿಂದ ಪಾರಾಗಲಷ್ಟೆ? ನಾವು ಒಂದನ್ನು ಚೆನ್ನಾಗಿ ಅರಿಯಬೇಕು - ಜಾಗತೀಕರಣ, ಆರ್ಥಿಕ ಉದಾರೀಕರಣ, ಖಾಸಗೀಕರಣ ಇವಕ್ಕೆಲ್ಲ ಅಂತಃಕರಣ ಇರುವುದಿಲ್ಲ.