Saturday, June 9, 2012

ಭಾರತದ ಬಡತನ ಮತ್ತು ಯೋಜನಾ ಆಯೋಗದ ಶೌಚಾಲಯ : ಒಂದು ಸಾಮಾಜಿಕ ವ್ಯಂಗ್ಯ"ಎಲ್ಲಾರ ಜೀವದ ಗೂಡಿನಾಗೆ ಒಂದು ಹಸಕೊಂಡಿರೊ ಹಕ್ಕಿ ಕುಂತಿರತೈತೆ. ಅದಕ್ಕೆ ಕಾಳು ಹಾಕ್ತಾ ಇರಬೇಕು. ನ್ಯಾಯದ ಕಾಳು, ಸತ್ಯದ ಕಾಳು, ಕರುಣೆಯ ಕಾಳು, ನಿಯತ್ತಿನ ಕಾಳು..ನೀನು ಯಾವತ್ತು ಆ ಕಾಳು ಹಾಕಾದು ನಿಲ್ಲಸತೀಯೋ ಆವತ್ತು ಆ ಹಕ್ಕಿ ನಿನ್ನ ದೇಹ ಬಿಟ್ಟು ಹಾರಿ ಹೋಗತೈತೆ..." ಹೀಗೆ ಹೇಳುತ್ತಿರುವವನು ರಾಮಯ್ಯ ಎಂಬ ಬುಡಬುಡಿಕೆಯವನು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವೂ ಸಹ ಬುದ್ಧ, ಬಸವ, ಗಾಂಧಿ, ವಿವೇಕಾನಂದ, ಪರಮಹಂಸರ ನುಡಿಗಳನ್ನು ಮಾತು ಮಾತಿಗೆಲ್ಲಾ ಉಲ್ಲೇಖಿಸಿದ್ದೇವೆ. ಅವರಂತೆ ಚಿಂತಕನಲ್ಲದ, ದಾರ್ಶನಿಕನಲ್ಲದ ತನ್ನ ತುತ್ತಿನ ಚೀಲ ತುಂಬಿಕೊಳ್ಳಲು ಪ್ರತಿದಿನ ಹೋರಾಡುತ್ತಿರುವ ಬುಡುಬುಡಿಕೆ ರಾಮಯ್ಯನ ಬಾಯಲ್ಲಿ ಎಂಥಾ ಮಾತು! ಬಡತನ - ಹಸಿವು ಕಲಿಸುವ ಪಾಠವನ್ನು ನಾವು ಯಾವ ವಿಶ್ವವಿದ್ಯಾಲಯದಲ್ಲಿ ಕಲಿಯಲು ಸಾಧ್ಯ? ಹೀಗೆ ಬುಡಬುಡಿಕೆ ರಾಮಯ್ಯನಿಗೆ ಅರ್ಥವಾಗಿರುವ ಬಡತನದ ಪಾಠ ಆಳುವ ಸರ್ಕಾರಕ್ಕೆ ಮತ್ತು ಅಧಿಕಾರಿ ವರ್ಗಕ್ಕೆ ಅರ್ಥವಾಗದಿರುವುದು ನಮ್ಮ ಕಾಲದ ದುರಂತ ಮತ್ತು ವ್ಯಂಗ್ಯ. ಇದನ್ನು ತಿಳಿದೋ ಏನೋ ಭಾರತದ ಹಸಿವು ಮತ್ತು ಬಡತನದ ಬಗ್ಗೆ ಇನ್ನಿಲ್ಲದಂತೆ ಬರೆದ ನಮ್ಮ ಕಾಲದ ಧೀಮಂತ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಪುಸ್ತಕವೊಂದಕ್ಕೆ ’Everybody Loves A Good Draught' (ಎಲ್ಲರೂ ಬರಗಾಲವನ್ನು ಪ್ರೀತಿಸುತ್ತಾರೆ) ಎಂದು ಹೆಸರಿಟ್ಟರು. ಬುಡಬುಡಿಕೆ ರಾಮಯ್ಯ ಹೇಳುವ ನ್ಯಾಯದ ಕಾಳು, ನಿಯತ್ತಿನ ಕಾಳುಗಳೆಲ್ಲ ಭ್ರಷ್ಟ ಅಧಿಕಾರವರ್ಗದ ಬಳಿಯಂತೂ ಇರಲು ಸಾಧ್ಯವಿಲ್ಲ, ಬಡವರನ್ನು ತಲುಪುತ್ತಿಲ್ಲ.ನಿಮಗೆ ನೆನಪಿರಬಹುದು, ಕೆಲದಿನಗಳ ಹಿಂದೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಯೋಜನಾ ಆಯೋಗ ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣಪತ್ರವೊಂದನ್ನು ಸಲ್ಲಿಸಿತ್ತು. ಅದರಲ್ಲಿ ದಿನವೊಂದಕ್ಕೆ ನಗರದಲ್ಲಿ ೩೨ ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ ೨೬ ರೂ. ಗಿಂತ ಹೆಚ್ಚು ತಲಾ ವೆಚ್ಚ ಮಾಡುವ ಕುಟುಂಬವನ್ನು ಬಡತನ ರೇಖೆಗಿಂತ ಮೇಲಿನವರು ಎಂದು ಪರಿಗಣಿಸಲಾಗುವುದು ಎಂದಿತ್ತು! ಈ ಅರ್ಥದಲ್ಲಿ ೪ ಜನರಿರುವ ಕುಟುಂಬದ ದಿನದ ಆದಾಯ ೧೬೦ ರೂ. ಆಗಿದ್ದರೆ ಅದು ಬಡ ಕುಟುಂಬವಲ್ಲ!! ದೇಶದ ಅತಿ ಬುದ್ಧಿವಂತರೆನಿಸಿಕೊಂಡ ಅಧಿಕಾರಿವರ್ಗವನ್ನು ಹೊಂದಿದ ಯೋಜನಾ ಆಯೋಗ ಬಡತನವನ್ನು ನೋಡುತ್ತಿರುವ ಪರಿ ಇದು. ಇಂಗ್ಲೆಂಡಿನ ಲೇಖಕ ಜಾರ್ಜ ಆರ್ವೆಲ್ ೧೯೪೬ರಲ್ಲೇ "ನಮ್ಮ ಕಾಲದಲ್ಲಿ ರಾಜಕೀಯವನ್ನು ದೂರವಿಡುವುದು ಸಾಧ್ಯವೇ ಇಲ್ಲ. ನಮ್ಮ ಎಲ್ಲ ಸಮಸ್ಯೆಗಳೂ ರಾಜಕೀಯ ಸಮಸ್ಯೆಗಳೇ" ಎಂದಿದ್ದ. ಬಡತನ ನಿವಾರಣೆ ಮಾಡಲಿ ಎಂದು ನಾವು ಯೋಜನೆಗಳಿಗೆ ಹಾತೊರೆದರೆ, ಕೇವಲ ಅಂಕಿ-ಅಂಶಗಳಲ್ಲೆ ಆಟವಾಡಿ ನಮ್ಮ ಬಡತನವನ್ನು ಯೋಜನಾ ಆಯೋಗ ಕಡಿಮೆಮಾಡಿಬಿಟ್ಟಿದೆ. ಬಡತನ ಕಡಿಮೆ ಮಾಡಲು ಬಡತನ ರೇಖೆಯ ಮಟ್ಟವನ್ನೇ ಕೆಳಗಿಳಿಸಿದರಾಯಿತು. ಯೋಜನೆಗಳೇಕೆ ಬೇಕು ಅಲ್ಲವೇ? ಈ ಲೆಕ್ಕಾಚಾರದಲ್ಲೇ ನಾವು ಪ್ರಪಂಚದ ಬಲಿಷ್ಟ ರಾಷ್ಟ್ರವಾಗುವತ್ತ ದಾಪುಗಾಲು ಹಾಕುತ್ತಿದ್ದೇವೆ!

ನಾವು ಹೀಗೆ ಪರಿತಪಿಸುತ್ತಿರುವಾಗಲೇ ಮಂಟೆಕ್ ಸಿಂಗ್ ನೇತ್ರತ್ವದ ಚುನಾವಣಾ ಆಯೋಗ ಸದ್ದು ಗದ್ದಲವಿಲ್ಲದೆ ಯೋಜನೆಯೊಂದನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದೆ. ಯೋಜನಾ ಆಯೋಗ ತನ್ನ ಶೌಚಾಲಯಗಳನ್ನು ಅತ್ಯಾಧುನಿಕ ದರ್ಜೆಗೆ ಏರಿಸಲು ೩೫ ಲಕ್ಷ ರೂ. ಗಳನ್ನು ವೆಚ್ಛಮಾಡಿದೆ! ಶೌಚಾಲಯದ ಬಾಗಿಲುಗಳಿಗೆ ನಿಯಂತ್ರಣ ವ್ಯವಸ್ಥೆ ಅಳವಡಿಸಲು ಹೆಚ್ಚುವರಿ ೫.೧೯ ಲಕ್ಷ ರೂ. ಗಳನ್ನು ವ್ಯಯಿಸಲಾಗಿದೆ. ಆಯೋಗದ ಅಧಿಕಾರಿಗಳಿಗೆ ೬೦ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಕಳವು ಪ್ರಕರಣಗಳನ್ನು ತಪ್ಪಿಸಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಾಂಟೆಕ್ ಸಿಂಗ್ ರ ಕೆಲವು ವಿದೇಶ ಯಾತ್ರೆಗಳ ಒಂದು ದಿನದ ಖರ್ಚು ೨.೦೨ ಲಕ್ಷ ರೂ. ಅಂತೆ! ಇವೆಲ್ಲ ವಿವರಗಳು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದೆ. ಈ ಒಟ್ಟೂ ಘಟನೆ ಯಾವ ಪರಿಯಾಗಿ ಕಾಡುತ್ತಿದೆಯೆಂದರೆ ಯೋಜನಾ ಆಯೋಗ ಇಡೀ ಭಾರತವನ್ನು ಅವಮಾನಪಡಿಸುತ್ತಿರುವಂತೆಯೂ, ನಮ್ಮ ಬಡತನವನ್ನು ವ್ಯಂಗ್ಯಮಾಡಿ ನಗುತ್ತಿರುವಂತೆಯೂ ಭಾಸವಾಗುತ್ತಿದೆ. ಫ್ರೆಂಚ್ ಮಹಾಕ್ರಾಂತಿಯ ಸಂದರ್ಭದಲ್ಲಿ ರಾಣಿ ಮೇರಿ ಅಂಟೋನೆಟ್ "ಬ್ರೆಡ್ ಇಲ್ಲವಾದರೆ ಕೇಕ್ ತಿನ್ನಿ" ಎಂದು ಪ್ರಜೆಗಳನ್ನು ಅಣಕಿಸಿದ್ದಳೆಂದು ದಂತಕಥೆ ಇದೆ. ಬಡತನದ ಬಗ್ಗೆ ಕಳಕಳಿ ಇರಬೇಕಾಗಿದ್ದ ಯೋಜನಾ ಆಯೋಗ ಪ್ರದರ್ಶಿಸುತ್ತಿರುವುದು ಅಂತಹ ತಣ್ಣನೆಯ ಕ್ರೌರ್ಯವನ್ನು. ಜಾರ್ಜ್ ಆರ್ವೆಲ್ ನ ಪ್ರಸಿದ್ಧ ಪ್ರಬಂಧ "How the Poor Die" (ಬಡವನು ಹೇಗೆ ಸಾಯುತ್ತಾನೆ) ಎಂದಿದೆ. ಆರ್ವೆಲ್ ಈ ಶೀರ್ಷಿಕೆಯ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ (?) ಅಥವಾ ಆಶ್ಚರ್ಯ ಚಿಹ್ನೆ (!) ಎರಡರೊಳಗೆ ಯಾವುದನ್ನಾದರೂ ಬಳಸಬಹುದಿತ್ತು. ಆದರೆ ಬಳಸಿಲ್ಲ. ಕಾರಣ ಬಡವನೊಬ್ಬ ಸಾಯುವುದು ಪ್ರಶ್ನೆಯೂ ಅಲ್ಲ, ಆಶ್ಚರ್ಯವೂ ಅಲ್ಲ. ಇದು ಭಾರತದ ಪಾಲಿಗಂತೂ ಸತ್ಯ.

Sunday, June 3, 2012

ರಾಜಕೀಯಗೊಳ್ಳುತ್ತಿರುವ ಪಠ್ಯಕ್ರಮಗಳು"ರಾಮಾಯಣವೆಂದರೆ ಭಾರತದ ಎರಡನೆ ಭಾಷೆ" ಎಂಬ ಪ್ರಖ್ಯಾತ ಹೇಳಿಕೆಯನ್ನು ನೀಡಿದವರು ಎ. ಕೆ. ರಾಮಾನುಜನ್. ಇದು ಅವರ Three Hundres Ramayanas: Five Examples and Three Thoughts on Translations (ಮುನ್ನೂರು ರಾಮಾಯಣಗಳು) ಎಂಬ ಪ್ರಸಿದ್ಧ ಲೇಖನದಲ್ಲಿ ಬರುತ್ತದೆ. ತಮ್ಮ ಕಾಲದಲ್ಲಿ ಪ್ರಚಲಿತದಲ್ಲಿದ್ದ ರಾಮನ ಕಥೆಗಳನ್ನು ಆಧರಿಸಿ ವಾಲ್ಮೀಕಿ ಮುನಿಗಳು ಭಾರತದ ಈ ಆದಿಕಾವ್ಯವನ್ನು ರಚಿಸಿದರು. ಇಂದಿನವರೆಗೂ ಭಾರತ ಮತ್ತು ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳಲ್ಲೂ ರಾಮನ ಕಥೆಗಳು ಮತ್ತೆ ಮತ್ತೆ ಕಥಿಸಲ್ಪಟ್ಟಿವೆ. ವೈದಿಕ ಪರಂಪರೆಯ ರಾಮಾಯಣಗಳು, ಜೈನ ಪರಂಪರೆಯ ರಾಮಾಯಣಗಳು, ಆಗ್ನೇಯ ಏಷ್ಯಾದ ರಾಮಾಯಣಗಳು, ಮೌಖಿಕ ಪರಂಪರೆಯ ರಾಮಾಯಣಗಳು ಹೇಗೆ ಪಟ್ಟಿಮಾಡಿದರೆ ಸಂಖ್ಯೆ ಸಾವಿರವನ್ನು ದಾಟಬಹುದೇನೊ? ಈ ಪೈಕಿ ಭಾರತ ಮತ್ತೆ ಮತ್ತೆ ರಾಮಾಯಣಗಳು ಸೃಷ್ಠಿಯಾದ ಸಾಂಸ್ಕೃತಿಕ ಪ್ರದೇಶಗಳಲ್ಲಿ ಮುಖ್ಯವಾದದ್ದು ಎಂಬರ್ಥದಲ್ಲಿ ಮೇಲಿನ ಸಾಲನ್ನು ರಾಮಾನುಜನ್ ಹೇಳಿರಬಹುದು.
ಸಾಕಷ್ಟು ರಾಮಾಯಣಗಳಲ್ಲಿ ಕಥಾಹಂದರವು ಭಿನ್ನವಾಗಿದೆ. ಉದಾಹರಣೆಗೆ ಕನ್ನಡ-ತೆಲುಗು ಮೌಖಿಕ ರಾಮಾಯಣಗಳು, ಜೈನ ಪರಂಪರೆಯ ವಾಸುದೇವಹಿಂಡಿ ಎಂಬ ಕಥನ, ಥಾಯ್ ಭಾಷೆಯ ರಾಮಕೀನ್, ಅಭಿನಂದನನ ಸಂಸ್ಕೃತರಾಮಚರಿತ (೧೦ನೇ ಶತಮಾನ), ೧೨ನೇ ಶತಮಾನದ ಸಂಸ್ಕೃತ ಅದ್ಭುತ ರಾಮಾಯಣ, ಒರಿಯಾ ಭಾಷೆಯ ಸರಳದಾಸ ರಾಮಾಯಣ (೧೮ನೇ ಶತಮಾನ), ಕುಕಣಾ ರಾಮಾಯಣ, ಅವಧ್ ರಾಮಾಯಣ ಇತ್ಯಾದಿಗಳು ಸೀತೆಯನ್ನು ರಾವಣನ ಮಗಳೆಂದು ಹೇಳುತ್ತವೆ. ಇವುಗಳ ಪೈಕಿ ’ತಂಬೂರಿ ರಾಮಾಯಣ’ವನ್ನು ರಾಮಾನುಜನ್ ಚರ್ಚೆಗೆ ಆಯ್ದುಕೊಂಡಿದ್ದಾರೆ. ಅದರಲ್ಲಿ ಬರುವ ಕಥೆಯ ಸಂಕ್ಷಿಪ್ತ ಸಾರ ಹೀಗಿದೆ: ಮಕ್ಕಳಿಲ್ಲದ ರಾವಣನು ಮುನಿಗಳು ಆಶೀರ್ವಾದವಾಗಿ ನೀಡಿದ ಹಣ್ಣನ್ನು ಹೆಂಡತಿಗೆ ನೀಡದೆ ತಾನೇ ತಿಂದು, ಗರ್ಭಧರಿಸಿ, "ಸೀತಾಗ" ಹುಟ್ಟಿದ ಮಗಳು ಸೀತೆ. ಆದರೆ ಜ್ಯೋತಿಷಿಗಳು ಅವಳು ಮುಂದೆ ಕುಲವನ್ನೇ ನಾಶಮಾಡುತ್ತಾಳೆ ಎಂದಿದ್ದರಿಂದ ಮಗುವನ್ನು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿಬಿಡುತ್ತಾನೆ. ಆ ಮಗು ಜನಕನಿಗೆ ಸಿಕ್ಕಿ ಅವನು ತಂದು ಸೀತೆಯನ್ನು ಸಾಕುತ್ತಾನೆ...ಈ ಕಥೆಯಲ್ಲಿ ಅಸಹಜವಾಗಿ ಕಂಡುಬರುವ ರಾವಣನ ಗರ್ಭಧಾರಣೆ ಮತ್ತು ಪ್ರಸವಗಳನ್ನು ರಾಮಾನುಜನ್ ವಿಷ್ಲೇಶಿಸಿದ್ದಾರೆ. ಗರ್ಭಧಾರಣೆ ಮತ್ತು ಪ್ರಸವ ಸ್ತ್ರೀಯರಿಗೆ ಪ್ರಕೃತಿದತ್ತವಾಗಿ ಬಂದ ಪುರುಷರಿಗಿರದ ಸಾಮರ್ಥ್ಯಗಳು. ಈ ಕುರಿತು ಪುರುಷಸಮಾಜಕ್ಕಿರುವ ಅಸೂಯೆಯನ್ನು ರಾಮಾನುಜನ್ ಎತ್ತಿತೋರಿಸಿದ್ದಾರೆ. ಈ ಕಥೆಯ ಇನ್ನೊಂದು ಮುಖ್ಯ ಚರ್ಚೆ ರಾಮನು ಸೀತೆಯನ್ನು ಬಯಸುವುದು. ಅದು ತಂದೆ ತನ್ನ ಮಗಳನ್ನು ಬಯಸುವ ’ಅಗಮ್ಯ ಗಮನದ’ ಆಶಯವನ್ನು ವ್ಯಕ್ತಪಡಿಸುತ್ತದೆ. ವಿಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಇದನ್ನು ಈಡಿಪಸ್ ಕಾಂಪ್ಲೆಕ್ಸ್ ಎಂದು ಕರೆದಿದ್ದಾನೆ. ಇದರ ಕುರಿತು ಸಹ ರಾಮಾನುಜನ್ ಚರ್ಚಿಸಿದ್ದಾರೆ.

ಇಷ್ಟೆಲ್ಲ ವಿವರಗಳನ್ನು ಯಾಕೆ ಕೆದಕಬೇಕಾಯಿತೆಂದರೆ, ದೆಹಲಿ ವಿಶ್ವವಿದ್ಯಾನಿಲಯವು ೨೦೦೬ರಲ್ಲಿ ಕಲ್ಚರಲ್ ಹಿಸ್ಟರಿ ಪಠ್ಯಕರಮದಲ್ಲಿ ಎ. ಕೆ. ರಾಮಾನುಜನ್ ರ ಈ ಲೇಖನವನ್ನು ಸೇರಿಸಿಕೊಂಡಿತ್ತು. ಸಾಂಸ್ಕೃತಿಕ ತೌಲನಿಕ ಅಧ್ಯಯನಕ್ಕಾಗಿ ಅಂತರರಾಷ್ಟ್ರೀಯ ಮನ್ನಣೆ ಪಡೆದ ಈ ವಿಮರ್ಶಾ ಲೇಖನವನ್ನು ತೆಗೆದುಹಾಕುವಂತೆ ೨೦೦೮ರಲ್ಲಿ ಎ.ಬಿ.ವಿ.ಪಿ ಸಂಘಟನೆ ಗದ್ದಲವೆಬ್ಬಿಸಿತು. ದೆಹಲಿ ವಿ.ವಿ.ಯ ಪೀಠೋಪಕರಣಗಳು ಧ್ವಂಸಗೊಂಡವು. ಪತ್ರಿಕೆಯಲ್ಲಿ ಪ್ರಕಟವಾದಂತೆ ಎ.ಬಿ.ವಿ.ಪಿ ಮತ್ತು ಇತರ ಕೆಲವು ಬಲಪಂಥೀಯ ಸಂಘಟನೆಗಳು ಈ ಲೇಖನವನ್ನು ಪ್ರತಿಭಟಿಸಲು ಕಾರಣಗಳು ಮುಖ್ಯವಾಗಿ ಮೂರು: ೧) ಕೆಲವು ರಾಮಾಯಣಗಳು ಸೀತೆ ರಾವಣನ ಮಗಳೆಂದು ನಿರೂಪಿಸುತ್ತವೆ ೨) ಅವತಾರ ಪುರುಷನಾದ ರಾಮನನ್ನು ಮಾನವನೆಂದು ಕೆಲವು ರಾಮಾಯಣಗಳು ನಿರೂಪಿಸುತ್ತವೆ ೩) ಈ ಬಗೆಯ ಚರ್ಚೆಗಳು ಹಿಂದೂಗಳ ಭಾವನೆಗೆ ನೋವುಂಟುಮಾಡುತ್ತವೆ. ವಿಷಯ ಸುಪ್ರೀಂ ಕೋರ್ಟಿಗೆ ಹೋಗಿ ತನಿಖೆ ನಡೆಸಲು ನಾಲ್ವರು ತಜ್ಞರ ಸಮಿತಿ ನೇಮಕಗೊಂಡಿತು. ಈ ಪೈಕಿ ಮೂವರು ’ಇದು ಮೌಲಿಕ ಸಂಶೋಧನೆಯನ್ನು ಒಳಗೊಂಡಿದೆ’ ಎಂದು ಅಭಿಪ್ರಾಯಪಟ್ಟರು. ಒಬ್ಬರು ’ಈ ಲೇಖನವನ್ನು ಹಿಂದುಗಳಲ್ಲದವರು ಪಾಠಮಾಡಲು ಅಸಾಧ್ಯ. ಈ ಲೇಖನವನ್ನು ಪಠ್ಯಕ್ರಮದಿಂದ ತೆಗೆಯುವುದೇ ವಾಸಿ’ ಎಂದು ಅಬಿಪ್ರಾಯಪಟ್ಟರು. ಕೇವಲ ಒಬ್ಬರ ಅಭಿಪ್ರಾಯವನ್ನು ಆಧರಿಸಿ ಲೇಖನವನ್ನು ದೆಹಲಿ ವಿ.ವಿ.ಯ ಅಕಾಡೆಮಿಕ್ ಕೌನ್ಸಿಲ್ ಪಠ್ಯದಿಂದ ತೆಗೆದುಹಾಕಿದೆ!

ಸಿಗ್ಮಂಡ್ ಫ್ರಾಯ್ಡ್ ಕಾಮ ಮತ್ತು ಕ್ರೋಧ ಮನುಷ್ಯನ ಮೂಲಭೂತ ಗುಣಗಳೆಂದೂ, ಅವುಗಳ ಅನಿಯಂತ್ರಿತ ಅಭಿವ್ಯಕ್ತಿಗೆ ಮನುಷ್ಯನಿಗಿರುವ ಸಾಮಾಜಿಕ ಮತ್ತು ನೈತಿಕ ನಿರ್ಭಂಧಗಳ ಕುರಿತು ವಿವರಿಸುತ್ತಾ ಈಡಿಪಸ್ ಕಾಂಪ್ಲೆಕ್ಸ್ ಎಂಬ ಮನೋಲೈಂಗಿಕ ಅವಸ್ಥೆಯ ಬಗ್ಗೆ ಜಗತ್ತಿಗೆ ವಿವರಿಸಿದ್ದಾನೆ. ಕೇವಲ ಮೇಲೆ ತಿಳಿಸಿದ ರಾಮಾಯಣಗಳಲ್ಲಷ್ಟೆ ಅಲ್ಲ, ಪ್ರಪಂಚದಾದ್ಯಂತ ಕಲೆ ಸಾಹಿತ್ಯದಲ್ಲಿ ಅದರ ನೇರ ಅಥವಾ ಪರೋಕ್ಷ ಅಭಿವ್ಯಕ್ತಿಯನ್ನು ನಾವು ಕಾಣಬಹುದು. ಉದಾಹರಣೆಗೆ ಸಾಫೊಕ್ಲೀಸ್ ನಾಟಕ, ಹೆಮ್ಲೆಟ್ ನಾಟಕ, ಡೆನಿಸ್ ಡೀಡ್ರೋ (೧೭೧೩-೧೭೮೪), ಫ್ರೆಂಚ್ ಸಾಹಿತಿ ಸ್ಟಂಡಾಲ್ ನ ಬರವಣಿಗೆಗಳು, ಗ್ರೀಕ್ ಅಧಿದೈವ ಜ್ಯೂಸ್ (Zeus)ನ ಪುರಾಣ ಕಥೆ, ಯಹೂದ್ಯರ ಕಾವ್ಯದಲ್ಲಿ ಬರುವ ಲಾಟ್(Lot), ಭಾರತದ ಅಶೋಕ ಚಕ್ರವರ್ತಿಯ ಮಗ ಕುನಾಲನ ಕಥೆ, ಕನ್ನಡದಲ್ಲಿ ಕುಮಾರರಾಮ ಮತ್ತು ರತ್ನಾಜಿಯವರ ಕಥೆಗಳಲ್ಲೂ ಈಡಿಪಸ್ ಕಾಂಪ್ಲೆಕ್ಸ್ ನ ಪ್ರಕಟಣೆ ಇದೆ (ಈ ಕಥೆಗಳಲ್ಲಿ ನೇರವಾಗಿ ಮಗನ ಚಿತ್ರವನ್ನು ಉಪಯೋಗಿಸದೇ ಮಲಮಗನ ಚಿತ್ರವನ್ನು ಅಳವಡಿಸಿಕೊಂಡಿರುವುದನ್ನು ಗಮನಿಸಬೇಕು). ಪುರಾಣದಲ್ಲಿ ಬ್ರಹ್ಮನು ಮಗಳಾದ ಶಾರದೆಯನ್ನು ವರಿಸುವ ಕಥೆಯಿದೆ. ಸಾಹಿತ್ಯಕ್ಕೆ ಪ್ರೇರಕವಾಗುವ ಸುಪ್ತ ಲೈಂಗಿಕ ಬಯಕೆಗಳು ಬಹಳ ಇವೆ. ಲೈಂಗಿಕ ಬಯಕೆಗಳಲ್ಲಿ ನಮಗೆ ಆಸಕ್ತಿ ಇರುವಷ್ಟೇ ನಿಷೇಧಗಳೂ ಇವೆ. ನಾವು ಇತರ ಪ್ರಾಣಿಗಳಂತಲ್ಲ. ದ್ವಂದ್ವ, ಆಂತರಿಕ ಸಮರ, ತುಮುಲಗಳು ಮಾನವ ಜೀವನದ ಅನಿವಾರ್ಯಗಳು. ಸಾಹಿತ್ಯ ನಿರ್ಮಾಣ ಈ ಸಮಸ್ಯೆಗಳ ಪರಿಹಾರಕ್ಕೆ ಇರುವ ಸುಸಂಸ್ಕೃತ ಮಾರ್ಗ. ಇದನ್ನು ಕೆಲವು ಸಂಘಟನೆಗಳಿಗೆ ಹೇಗೆ ಅರ್ಥ ಮಾಡಿಸಬಹುದು?

ಎ. ಕೆ. ರಾಮಾನುಜನ್ ಭಾರತದ ಪ್ರಾಂತೀಯ ಭಾಷೆಗಳಲ್ಲಿ ನಿರ್ಮಿತವಾದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊರಜಗತ್ತಿಗೆ ಪರಿಚಯಿಸಿದ ಚಿಂತಕ. ಅವರ ಪ್ರಭುದ್ಧ ಲೇಖನವು ರಾಜಕೀಯ ಪಕ್ಷಗಳ ಗುಪ್ತ ಪ್ರಣಾಳಿಕೆಗೆ ಬಲಿಯಾಗಿರುವುದು ದುರದೃಷ್ಟಕರ. ಈ ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಮನಸ್ಸಿನಿಂದ ಅಳಿಸಿಲ್ಲ. ನೋಡನೋಡುತ್ತಿದ್ದಂತೆ ನಿನ್ನೆ ರಾಮಾನುಜನ್ ಗಾಗಿದ್ದು, ಇಂದು ವ್ಯಂಗ್ಯಚಿತ್ರಕಾರ ಕೇಶವ ಶಂಕರ ಪಿಳ್ಳೈ ಗಾಗಿದೆ (ಬಸವನ ಹುಳುವಿನ ಮೇಲೆ ಕೂತ ಅಂಬೇಡ್ಕರ್ ಚಿತ್ರವಿರುವ ಎನ್ ಸಿ ಇ ಆರ್ ಟಿಯ ೧೧ನೇ ತರಗತಿಯ ಪಠ್ಯ ನಿಷೇಧಕ್ಕೊಳಗಾಗಿದೆ). "ಹಿಂದೆಲ್ಲ ಕಾವ್ಯದ ಅರ್ಥವನ್ನು ಕವಿಗಳು ನಿರ್ಣಯಿಸುತ್ತಿದ್ದರು ಈಗ ಆ ಜಾಗವನ್ನು ರಾಜಕಾರಣಿಗಳು ಆಕ್ರಮಿಸಿದ್ದರೆ" ಎಂದು ಚಂದ್ರಶೇಖರ ಕಂಬಾರರು ಒಮ್ಮೆ ಹೇಳಿದ್ದು ಯಾಕೊ ನೆನಪಾಗುತ್ತಿದೆ. ಪಠ್ಯಪುಸ್ತಕಗಳಲ್ಲಿ ಏನಿರಬೇಕೆಂಬುದನ್ನು ಶಿಕ್ಷಣ ತಜ್ಞರು ನಿರ್ಧರಿಸುವ ಕಾಲ ಬೇಗ ಮರಳಿ ಬರಲಿ.