Tuesday, March 6, 2012

ನಂಬಿಕೆ ಮತ್ತು ನಿಷೇಧಗಳು’ನಂಬಿಕೆ ಮತ್ತು ನಿಷೇಧಗಳು’ ಇದು ಎನ್. ಆರ್. ನಾಯಕರ ಮಾರ್ಗದರ್ಶೀ ಕೃತಿ. ಈ ಪುಸ್ತಕ ಪ್ರಕಟಗೊಂಡಿರುವ ಸಂದರ್ಭ ಇದರ ಮಹತ್ವವನ್ನು ಇನ್ನಷ್ಟು ಎತ್ತಿ ಹಿಡಿಯುತ್ತದೆ. ನಾವೀಗ ಜಾಗತೀಕರಣಕ್ಕೊಳಪಟ್ಟಿರುವ ಆಧುನಿಕ ಭಾರತದ ಪ್ರಜೆಗಳು. ಆದರೆ ವಿಪರ್ಯಾಸವೆಂದರೆ ನಾವು ಯಾಂತ್ರೀಕರಣ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ಜೈವಿಕ ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಲ್ಲಿ ಸಾಧಿಸಿದ ಅತಿಶಯ ಪ್ರಗತಿಯ ಹೊರತಾಗಿಯೂ ಮಾಟ-ಮಂತ್ರ, ಜೋತಿಷ್ಯ, ಬೆತ್ತಲೆ ಸೇವೆ, ಮಡೆಸ್ನಾನ ಇತ್ಯಾದಿ ಆಚರಣೆಗಳ ಇರುವಿಕೆಯನ್ನು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಹೀಗೆ ಮಾನವ ಸಹಜವಾದ ನಂಬಿಕೆಗಳ, ಅವುಗಳ ಸಾಧಕ-ಬಾಧಕಗಳ, ರೂಪಾಂತರಗಳ, ಸಾಮಾಜಿಕ ಪರಿಣಾಮಗಳ ಕುರಿತಾದ ತಿಳುವಳಿಕೆಗಳ ಅಗತ್ಯವಿರುವಾಗ ಈ ಹಿರಿಯ ವಿಧ್ವಾಂಸರು ತಮ್ಮ ಜವಾಬ್ದಾರಿಯನ್ನು ತೋರಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸೋಣ.

Man is a Social Animal ಎಂಬ ಪ್ರಜ್ಞೆ ಮತ್ತು Man is a Political Animal ಎಂಬ ಎಚ್ಚರ ಅವರ ಈ ಲೇಖನದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದನ್ನು ನಾವು ಗಮನಿಸಬಹುದು. ಈ ಕಿರು ಹೊತ್ತಿಗೆ ಕೇವಲ ೪೨ ಪುಟಗಳನ್ನು ಹೊಂದಿದ್ದರು, ಇದನ್ನು ಸಿದ್ಧಪಡಿಸಲು ೧೭ ಆಕರ ಗ್ರಂಥಗಳನ್ನು ಡಾ|| ಎನ್. ಆರ್. ನಾಯಕರು ಬಳಸಿಕೊಂಡಿದ್ದಾರೆ. ಇದು ಅವರ ಅಧ್ಯಯನಶೀಲತೆಯ ಪ್ರತೀಕ.

ಡಾ|| ಎನ್. ಆರ್. ನಾಯಕರು ತಮ್ಮ ಹೊರತಾಗಿ ನಂಬಿಕೆಗಳ ಕುರಿತು ಕ್ಷೇತ್ರಕಾರ್ಯ ಮಾಡಿದವರನ್ನೂ ಹೆಮ್ಮೆಯಿಂದ ಸ್ಮರಿಸುತ್ತಾರೆ. ರಾ. ಗೌ., ಮಳಲಿ ವಸಂತ ಕುಮಾರ, ಜಿ. ವಿ. ದಾಸೇಗೌಡ, ಡಾ|| ಎಮ್. ಎಸ್. ಲಟ್ಟೆ, ಡಾ|| ಜಿ. ಶಂ. ಪ., ಡಾ|| ಎಲ್. ಆರ್. ಹೆಗಡೆ, ಡಾ|| ಬಿ. ಎ. ವಿವೇಕ ರೈ, ಶಾಂತಿ ನಾಯಕ, ಅಮೃತ ಸೋಮೇಶ್ವರ ಹೀಗೆ ಗೃಂಥಕರ್ತರ ಪಟ್ಟಿ ಬಹಳ ದೊಡ್ಡದಿದೆ.

ಡಾ|| ಎನ್. ಆರ್. ನಾಯಕರು ಈ ಪ್ರಭಂಧವನ್ನು ೧೯೯೧ರಲ್ಲಿ ಮದ್ರಾಸಿನ Institute of Asion Studies ನ ಕೋರಿಕೆಯ ಮೇರೆಗೆ ಸಿದ್ಧಪಡಿಸಿದ್ದರು. Folk Beliefs and Taboos ಎಂದು ಇಂಗ್ಲೀಷಿನಲ್ಲಿ ಅವರ ಈ ಲೇಖನವನ್ನು Encylopaedia of Folk Culture of Karnataka ಎಂಬ ವಿಶ್ವಕೋಶದಲ್ಲಿ ಪ್ರಕಟಿಸಲಾಗಿದೆ.

ಈ ಹಿರಿಯ ವಿಧ್ವಾಂಸರು ನಂಬಿಕೆ ಮತ್ತು ನಿಷೇಧಗಳನ್ನು ವಿಶ್ಲೇಶಿಸಿರುವ ರೀತಿಯಲ್ಲಿ ಮನಃಶ್ಯಾಸ್ತ್ರ, ತತ್ವಜ್ಞಾನ ಮತ್ತು ಸಮಾಜ ಶಾಸ್ತ್ರದಂತಹ ಜ್ಞಾನಶಿಸ್ತುಗಳನ್ನು ಸಂದರ್ಭೋಚಿತವಾಗಿ ಬಳಸಿರುವುದನ್ನು ಕಾಣುತ್ತೇವೆ. ಅವರ ಕೆಲವು ತಿಪ್ಪಣಿಗಳನ್ನು ಗಮನಿಸಿ:
* ನಂಬಿಕೆಯು ಮಾನಸಿಕ ವಿನ್ಯಾಸದ ಒಂದು ಸ್ಥಿತಿ
* ನಂಬಿಕೆಯು ನಂಬುವವನ ಮನೋಭೂಮಿಕೆಯನ್ನು ಪ್ರಕಟಿಸುತ್ತದೆ.
* ನಂಬಿಕೆಯು ಭಯ, ಭಕ್ತಿ, ಆಶೆ, ಭಾವುಕತೆ, ಬೌದ್ಧಿಕತೆಗಳ ಸಮ್ಮಿಶ್ರ ಕ್ರೀಯೆಯಿಂದ ಹುಟ್ಟಿಕೊಳ್ಳುವ ಮಾನಸಿಕ ಅನಿಸಿಕೆ - ತಿಳಿವು.
* ನಂಬಿಕೆಗಳು ಕಾರ್ಯ-ಕಾರಣ ಸಂಬಂಧ, ಕಾಲಮಾನ ಪರಿಸ್ಥಿತಿ ಸಂಬಂಧ ಸಂಗತಿಗಳನ್ನು ಒಳಗೊಂಡಿರುತ್ತದೆ.

ಓದುಗರ ವೈಚಾರಿಕ ಗೊಂದಲಗಳನ್ನು ಎನ್. ಆರ್. ನಾಯಕರು ಸುಲಭವಾಗಿ ನಿಭಾಯಿಸಿದ್ದಾರೆ. ಅದಕ್ಕೆ ಅವರು ತೌಲನಿಕ ಅಧ್ಯಯನದ ಶೈಲಿಯ ನಿರೂಪಣೆಯ ಮೊರೆಹೋಗಿದ್ದಾರೆ. ನಂಬಿಕೆ ಮತ್ತು ಸಂದೇಹ, ನಂಬಿಕೆ ಮತ್ತು ಜ್ಞಾನ, ಮಾಟ ಮತ್ತು ನಿಷೇಧ, ನಂಬಿಕೆ ಮತ್ತು ಕ್ರೀಯೆ, ನಂಬಿಕೆ ಮತ್ತು ಸಂಪ್ರದಾಯ ಇತ್ಯಾದಿಗಳ ನಡುವಿನ ಸಂಬಂಧ ಅಥವಾ ವ್ಯತ್ಯಾಸವನ್ನು ನಿಭಾಯಿಸಿರುವ ರೀತಿ ಇದನ್ನು ಪುಷ್ಟೀಕರಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ’ಸಂದೇಹ’ದ ಕುರಿತ ಅವರ ಟಿಪ್ಪಣಿಯನ್ನು ಗಮನಿಸಿ - "ನಂಬಿಕೆಗೆ ವಿರುದ್ಧ ಸ್ಥಿತಿ ಸಂದೇಹ. ಅಸ್ಪಷ್ಟತೆಯು ಸಂದೇಹದ ಪ್ರಧಾನ ಲಕ್ಷಣ. ಅಸ್ಪಷ್ಟ ಸ್ಥಿತಿಯಲ್ಲಿ ತೀರ್ಮಾನ ಅಸಾಧ್ಯ. ಆದರೆ ನಂಬಿಕೆಯು ಸಂದೇಹ ಜ್ಞಾನಕ್ಕಿಂತ ಮೇಲ್ಮಟ್ಟದ್ದಾಗಿದೆ. ಮತ್ತು ಸತ್ಯಜ್ಞಾನಕ್ಕಿಂತ ಕೆಳಮಟ್ಟದ್ದಾಗಿದೆ". ಅವರ ಈ ವಿಶ್ಲೇಷಣೆಯನ್ನು ಪುಷ್ಟೀಕರಿಸುವ ಮಾಹಿತಿಗಳನ್ನು ನಾನು ಅಂತರ್ಜಾಲದಲ್ಲಿ ಕಂಡಿದ್ದೇನೆ. ಮುಖ್ಯವಾಗಿ Epistemology ಎಂಬ ಜ್ಞಾನಶಾಖೆ ನಂಬಿಕೆ ಮತ್ತು ಜ್ಞಾನದ ತಾತ್ವಿಕ ಅಧ್ಯಯನಕ್ಕಾಗಿಯೇ ಇದೆ. ಈ ಅಂಶಗಳನ್ನು ಎನ್. ಆರ್. ನಾಯಕರ ಈ ಲೇಖನದಲ್ಲೂ ನಾವು ಕಾಣಬಹುದಾಗಿದೆ.

ನಾನು ಇತ್ತೀಚೆಗೆ ಓದಿದ Dispositional and Occurrent belief ಎಂಬ ಪ್ರಭಂದದ ಒಂದು ಸಾಲು ಹೀಗಿದೆ: "the term Dispositional belief refers to a belief that is not currently being considered by the mind, but is stored in the memory of other concepts and will be recalled to conclude in occurent belief. the term occurent belief refers to a belief that is currently being considered by the mind." ಈಗ ಡಾ|| ಎನ್. ಆರ್. ನಾಯಕರು ಹೇಳುವ ಒಂದು ಸಾಲನ್ನು ಗಮನಿಸಿ - "ನಂಬಿಕೆಯಲ್ಲಿರುವ ಅಭಿಲಾಷೆಯು ಅಪೇಕ್ಷಿತ ಗುರಿಯನ್ನು ತಲುಪುವ ಸಂತಸದ ನಿರೀಕ್ಷೆಯಿಂದ ಬಲಿತಿರುತ್ತದೆ." ಈ ಸಾಲು ತುಸು ಕಾವ್ಯಾತ್ಮಕವಾಗಿ ಕಂಡರೂ ಆಳದಲ್ಲಿ Dispositional Belief ಗೆ ಬರೆದ ಟಿಪ್ಪಣಿಯಂತಿದೆ.

ಆದರೆ ಒಂದುಕಡೆ ತದ್ವಿರುದ್ಧ ಅರ್ಥ ಬರುವ ಹೇಳಿಕೆಗಳನ್ನು ನೀಡಿ ಗೊಂದಲಗೊಳಿಸಿದ್ದೂ ಕಾಣಬಹುದು. ಆ ಹೇಳಿಕೆಗಳನ್ನು ಗಮನಿಸಿ :
* ಬೌದ್ಧಿಕ ಸ್ಥರದಲ್ಲಿಯ ಭಯ, ಕಳವಳ, ಹಿಂಜರಿಕೆ ಹಾಗೂ ಸಂದೇಹ ಭಾವನೆಗಳನ್ನು ದೂರಮಾಡಿ, ಆತ್ಮವಿಶ್ವಾಸವನ್ನು ಕುದುರಿಸಲು ನೆರವೀವ ತಿಳುವಳಿಕೆಗಳು ’ನಂಬಿಕೆ’ ಎನ್ನುತ್ತಾರೆ. ಇನ್ನೊಂದುಕಡೆ ’ಯಾವುದೋ ದುರ್ಬಲ ಸ್ಥಿತಿಯಲ್ಲಿಯೇ ನಂಬಿಕೆಗಳ ಜನನವೆಂದೂ ಹೇಳಬೇಕಾಗುತ್ತೆದೆ’ ಎನ್ನುತ್ತಾರೆ.

ಜಾನಪದ ನಂಬಿಕೆಗಳಲ್ಲಿ ಮೂಢನಂಬಿಕೆಗಳೇ ಹೆಚ್ಚು ಎಂದು ಈ ಹಿರಿಯ ಜಾನಪದ ವಿಧ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಯಾವ ಪರಿಶೀಲನೆಗೂ ಒಳಪಡದೆ ಅಸಮರ್ಪಕ ಜ್ಞಾನ, ದೋಷಪೂರಿತ ನಿರೀಕ್ಷಣೆ, ಅವಸರದ ನಿರ್ಣಯ, ಕುತರ್ಕ, ಇಂದ್ರಿಯಾನುಭವಗಳ ನ್ಯೂನ್ಯತೆ ಇತ್ಯಾದಿಗಳು ಇದಕ್ಕೆ ಕಾರಣವೆನ್ನುತ್ತಾರೆ.

ಇತರ ವಿಧ್ವಾಂಸರು ಮಾಡಿರುವ ಕೆಲವು ತಪ್ಪು ವಿಷ್ಲೇಷಣೆಗಳ ಕುರಿತು ಸೂಕ್ಷ್ಮವಾಗಿ ತಿದ್ದುಪಡಿಗಳನ್ನೂ ಬರೆದಿದ್ದಾರೆ. ಒಂದು ಉದಾಹರಣೆಗಳನ್ನು ಬೇಕಾದರೆ ಗಮನಿಸಬಹುದು:
* ನಂಬಿಕೆಯು ವಾಸ್ತವಿಕತೆಯ ತಳಹದಿಯ ಮೇಲೆಯೇ ನಿಂತಿದೆ ಎನ್ನುತ್ತಾರೆ. ಆದರೆ ಇದು ಅರ್ಧಸತ್ಯ. ವಾಸ್ತವದಲ್ಲಿ ನಂಬಿಗೆ ಅವಕಾಶ ಕಡಿಮೆ. ನಂಬಿಕೆಗೆ ಅವಕಾಶವಿರುವುದು ಕಾಲ್ಪನಿಕ ವಿಷಯಗಳಲ್ಲಿ ಮಾತ್ರ.

ನಂಬಿಕೆಗಳ ವರ್ಗೀಕರಣದ ಕುರಿತು ಡಾ|| ಎನ್. ಆರ್. ನಾಯಕರ ಅಭಿಪ್ರಾಯಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಅವರೇ ಹೇಳಿರುವಂತೆ - "ನಂಬಿಕೆಗಳನ್ನು ಹಲವಾರು ವಿದ್ಧ್ವಾಂಸರು ಹಲವಾರು ವಿಧದಲ್ಲಿ ವಿಭಜಿಸಿದ್ದಾರೆ. ಆದರೆ ಯಾವ ವರ್ಗೀಕರಣವೂ ಸರ್ವಸಮ್ಮತವಲ್ಲ. ಬೇರೆ ಬೇರೆ ವಿಧ್ವಾಂಸರು ತಮ್ಮ ಅನುಕೂಲಕ್ಕೆ ಬೇರೆ ಬೇರೆ ವಿಧಾನಗಳನ್ನೇ ಅನುಸರಿಸಿದ್ದಾರೆ. ಅವುಗಳ ಚರ್ಚೆಗೆ ನಾನು ಹೋಗುವುದಿಲ್ಲ ಎನ್ನುತ್ತಾರೆ.". ಇದರ ಹೊರತಾಗಿ ತಮ್ಮ ವರ್ಗೀಕರಣ ಮಾದರಿಯೊಂದನ್ನು ಅವರು ಓದುಗರಿಗೆ ನೀಡಿದ್ದಾರೆ!! ಡಾ|| ಎನ್. ಆರ್. ನಾಯಕರು ಮಾಡಿರುವ ವರ್ಗೀಕರಣವೂ ಸರ್ವಸಮ್ಮತವೆನ್ನಲು ಸಾಧ್ಯವಿಲ್ಲ. ಇದರ ಕುರಿತು ವಿಸ್ತೃತ ಚರ್ಚೆಗೆ ಈಗ ಸಮಯದ ಅಭಾವವಿರುವುದರಿಂದ ಕೆಲವು ಮುಖ್ಯ ಕಾರಣಗಳನ್ನಷ್ಟೆ ಹೇಳುತ್ತೇನೆ:
ಕಾರಣ ೧) ಸುಮಾರು ೨೧ ವರ್ಷಗಳ ಹಿಂದೆ ಬರೆದಿರುವ ಈ ಪ್ರಭಂದ, ಗಣನೀಯ ಪರಿಷ್ಕರನೆಗೊಳಪಡದೆ ಪ್ರಕಟಗೊಂಡಿದೆ. ಅಂದರೆ ಕಳೆದ ೨೧ ವರ್ಷಗಳಲ್ಲಿ ಆದ ಬದಲಾವಣೆಗಳು ವರ್ಗೀಕರಣದಿಂದ ಹೊರಗುಳಿಯುತ್ತವೆ.
ಕಾರಣ ೨) ಈಗ ನಂಬಿಕೆಗಳ ಕುರಿತ ಅಧ್ಯಯನವನ್ನು ಕೇವಲ ಭಾರತ ಅಥವಾ ಕರ್ನಾಟಕದ ಮಟ್ಟಕ್ಕೆ ಇಳಿಸಿ ನೋಡುವುದು ಕಷ್ಟದ ಕೆಲಸ. ಏಕೆಂದರೆ ಕಳೆದೆರಡು ದಶಕಗಳಲ್ಲಿ ನಮ್ಮ ದೇಶ ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದ ನೇರ ಪ್ರಭಾವಕ್ಕೊಳಪಟ್ಟಿದೆ. ಪಾಶ್ಚಾತ್ಯ ರೀತಿ-ರಿವಾಜು, ನಂಬಿಕೆಗಳು ನಮ್ಮನ್ನು ಈ ಎರಡು ದಶಕಗಳಲ್ಲಿ ವ್ಯಾಪಕವಾಗಿ ಪ್ರಭಾವಿಸಿದೆ.
ಕಾರಣ ೩) ಯಂತ್ರಗಳ ಮೇಲೆ ನಮ್ಮ ಅವಲಂಬನೆ ದಿನೇ ದಿನೇ ಹೆಚ್ಚುತ್ತಿದೆ. ಕೆಲವೊಮ್ಮೆ ಮನುಷ್ಯರು ಯಂತ್ರಗಳ ಜೊತೆ ಪೈಪೋಟಿಗಿಳಿದಂತೆಯೂ ಅನ್ನಿಸುತ್ತದೆ. ಕಂಪ್ಯೂಟರ್ ನಂತಹ Intelligent Machine ಗಳಿಗೆ ಕೆಲಸ ಮಾಡಲು ನಂಬಿಕೆಗಳನ್ನು ಹೇರಲಾಗುತ್ತದೆ. ಹಾಗಾಗಿ ನಂಬಿಕೆಗಳ ಪರಿಧಿಗೆ ಮನುಷ್ಯರಂತೆ ಯಂತ್ರಗಳೂ ಬರುತ್ತವೆ.
ಕಾರಣ ೪) ನಂಬಿಕೆಗಳನ್ನು ಮನಃಶ್ಯಾಸ್ತ್ರ, ತತ್ವಶಾಸ್ತ್ರ, ನರವಿಜ್ಞಾನ, ತಂತ್ರಜ್ಞಾನ ಇತ್ಯಾದಿ ಜ್ಞಾನಶಿಸ್ತುಗಳು ತಮ್ಮದೇ ಆದ ರೀತಿಯಲ್ಲಿ ವ್ಯಾಖಾನಿಸುತ್ತವೆ. ಇಂಥಾ ಸಂದರ್ಭದಲ್ಲಿ ಸರ್ವಸಮ್ಮತ ವರ್ಗೀಕರಣ ಸಾಧ್ಯವಾಗುವುದಿಲ್ಲ.
ಹಾಗಾಗಿ ನನ್ನ ವೈಯಕ್ತಿಕ ಅಭಿಪ್ರಾಯದಂತೆ ವರ್ಗೀಕರಣ ಸಂಶೋಧನೆಯ ಸ್ವಾತಂತ್ರ್ಯದ ಮೇಲೆ ಪರೀಣಾಮ ಬೀರಿ, ಅದರ ಸಾಧ್ಯತೆಗಳನ್ನು ನಿಯಂತ್ರಿಸಬಹುದು. ನಮ್ಮ ಸಂಶೋಧಕರುಗಳು ವರ್ಗೀಕರಣ ತೋರಿಸುವ ಆಮಿಷಗಳ ಜೊತೆಗೆ ಜಾಗರೂಕತೆಯಿಂದ ವ್ಯವಹರಿಸಬೇಕಿದೆ. ಈ ಪುಸ್ತಕದಲ್ಲೇ ವರ್ಗೀಕರಣದ ಭಾರವಿಲ್ಲದೆ ’ನಿಷೇಧ’ಗಳನ್ನು ವಿಷ್ಲೇಶಿಸಿದ್ದಾರೆ. ವೇದ-ಪುರಾಣಗಳಿಂದ ಹಿಡಿದು ಅಮೇರಿಕಾದ ಬುಡಕಟ್ಟುಗಳ ವರೆಗೆ ಬಳಷ್ಟು ಸಂಗತಿಗಳನ್ನು ಸ್ವಚ್ಛಂಧವಾಗಿ ಬಳಸಿಕೊಂಡಿರುವುದನ್ನು ನಾವೇ ಕಾಣಬಹುದು.

ನಾನು ಮೊದಲೇ ಉಲ್ಲೇಖಿಸಿದಂತೆ ಇದು ಡಾ|| ಎನ್. ಆರ್. ನಾಯಕರ ಮಾರ್ಗದರ್ಶೀ ಕೃತಿ. ಹೀಗೆ ಹೇಳಲು ಕಾರಣವಿದೆ. ನಮ್ಮಲ್ಲಿ ಅಪೂರ್ಣವಾಗಿ ಉಳಿದಿರುವ ನಂಬಿಕೆಗಳನ್ನು ಸಮಗ್ರವಾಗಿ ಸಂಗ್ರಹಿಸುವ ಕೆಲಸವನ್ನು ಇಂದಿನ ತಲೆಮಾರಿನ ಯುವ ವಿಧ್ವಾಂಸರು ಮಾಡಬೇಕೆನ್ನುವುದು ಅವರ ಅಭಿಲಾಷೆ. ಅದು ಬೇಗನೆ ಕೈಗೂಡಲಿ.

No comments:

Post a Comment