Saturday, September 24, 2011

ನವ ಮಧ್ಯಮವರ್ಗದ ಆತ್ಮವಂಚನೆಗಳುಚಂದ್ರಶೇಖರ ಕಂಬಾರರ ಕವಿತೆಗಳ ಪೈಕಿ ಕಾಡುವ ಪದ್ಯವೊಂದಿದೆ. ನಮ್ಮ ಮೇಲ್ಮೈ ತೋರಿಕೆಯ ತತ್ವಿಕತೆಯನ್ನು, ಆಳಕ್ಕಿಳಿಯಲಾರದ ಸೋಗಲಾಡಿತನವನ್ನು, ತಪ್ಪಿಸಿಕೊಂಡೋಡುವ ನಮ್ಮ ಪುಕ್ಕಲುತನವನ್ನು ಈ ಕವಿತೆ ತಿವಿ ತಿವಿದು ತೋರಿಸುತ್ತದೆ.

ಹೊಂಡದ ದಂಡೆಯ ಮೇಲೆ ಒಂದು ಮರ
ಹೊಂಡದಲ್ಲಿ ಒಂದು ಮರ
ಮೇಲೆ ನಿಜವಾದ ಮರ
ಕೆಳಗೆ ಬಿಂಬಿಸಿದ ಮರ

ಈ ಸಾಲುಗಳು ಕೊಳದ ದಡದಲ್ಲಿರುವ ಮರ ಮತ್ತು ನೀರಿನಲ್ಲಿ ಮೂಡಿರುವ ಅದರ ಪ್ರತಿಬಿಂಬವನ್ನು ಪ್ರತಿನಿಧಿಸುತ್ತವೆ ಎನ್ನುವುದು ಮೇಲ್ಮೈಯ ಅರ್ಥ.

ತೆರೆ ಎದ್ದಾಗ ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ

ಈ ಸಾಲುಗಳು ಬಹಳ ನಿರ್ಣಾಯಕ. ಏಕೆಂದರೆ ತೆರೆ ಎದ್ದಿದ್ದರಿಂದ ನಿಜವಾದ ಮರ ಮತ್ತು ಬಿಂಬಿಸಲ್ಪಟ್ಟ ಮರಗಳ ನಡುವಿನ ವ್ಯತ್ಯಾಸ ಅನಾವರಣಗೊಂಡಿತು. ತೆರೆ ಏಳಬೇಕಾಗಿರುವುದು ನಮ್ಮ ಮನಸ್ಸೆಂಬ ಕೋಳದಲ್ಲಿ. ಹಾಗೆ ತೆರೆಗಳು ಎದ್ದಾಗಲೆ ನಮ್ಮ ಸತ್ವ ನಮಗೆ ಗೊತ್ತಾಗುವುದು...

ಕೆಲ ದಿನಗಳ ಹಿಂದೆಯಷ್ಟೇ ದೇಶದಲ್ಲೆಲ್ಲ ಅಣ್ಣಾ ಹಜಾರೆಯವರು ತಮ್ಮ ಭೃಷ್ಟಾಚಾರ ವಿರೋಧಿ ಆಂದೋಲನದಿಂದ ದೇಶದೆಲ್ಲೆಡೆ ಹೊಸ ಸಂಚಲನ ಸೃಷ್ಟಿಸಿದ್ದರು. ಚಳುವಳಿಯ ಫಲಶೃತಿ ಏನೆಂದು ಈಗಲೆ ಹೇಳಲಾಗದಾದರೂ ಇದು ಸಾರ್ವತ್ರಿಕ ಜಾಗೃತಿಗೆ ದಾರಿಮಾಡಿಕೊಟ್ಟಿತೆಂದು ಹೇಳಲಾಗುತ್ತಿದೆ. ಈ ಚಳುವಳಿಗೆ ಜಾತಿ-ಅಂತಸ್ತಿನ ಹಂಗಿಲ್ಲದೆ ದೇಶದ ಎಲ್ಲ ವರ್ಗಗಳ ಜನರೂ ಭಾಗವಹಿದ್ದಾರೆಂದು ಹೇಳುತ್ತಿರುವಾಗಲೆ, ಇದನ್ನೊಂದು ’ಮಧ್ಯಮವರ್ಗದ ಚಳುವಳಿ’ ಎಂದು brand ಮಾಡಲಾಗುತ್ತಿದೆ. ಯಾವುದೇ ಸಾಮಾಜಿಕ ವಿಷಯಗಳಿಗೆ ಸ್ಪಂದಿಸದ, ಸ್ವತಂತ್ರ ಅಭಿಪ್ರಾಯವಿರದ, ಗಾಳಿಬಂದತ್ತ ತೂರಿಕೊಳ್ಳುವ ಸ್ವಾರ್ಥಿಗಳು, ಸಿನಿಕರು, ಹೇಡಿಗಳು ಎಂದು ಎಡ ವಿಚಾರವಾದಿಗಳು ಮಧ್ಯಮವರ್ಗವನ್ನು ಜರಿದಿದ್ದರು. ಕಮ್ಯುನಿಸ್ಟರು ಈ ವರ್ಗವನ್ನು ಭೂರ್ಜ್ವಾಗಳೆಂದು ಕರೆದರು. ಭಾರತದಲ್ಲಿ ಕ್ರಾಂತಿಯನ್ನು ತಡೆದವರೇ ಈ ಭೂರ್ಜ್ವಾಗಳು ಎಂದು ಆರೋಪಿಸಿದ್ದರು. ಇಷ್ಟೆಲ್ಲ ಕಳಂಕಗಳನ್ನು ಹೊತ್ತಿದ್ದ ಮಧ್ಯಮ ವರ್ಗ ಹಿಂದೆಂದೂ ತೋರಿಸದ ಬದ್ಧತೆ, ಕ್ರೀಯಾಶೀಲತೆ, ದೇಶಪ್ರೇಮ, ಜಾಗೃತಿಯನ್ನು ಹೀಗೆ ಹಠಾತ್ತನೆ ಮೆರೆದದ್ದು ಹೇಗೆ ಎಂಬುದು ಈಗ ಚರ್ಚಿತವಾಗುತ್ತಿರುವ ವಿಷಯ.

ಮಧ್ಯಮವರ್ಗವನ್ನು ವಿಶ್ಲೇಷಣೆಯ ಒರೆಗೆ ಹಚ್ಚುವ ಮೊದಲು ನಾವು ಕೆಲವು ಸಾಮಾಜಿಕ ಅಂಶಗಳನ್ನು ಪರಿಗಣಿಸಬೇಕು. ಭೃಷ್ಟಾಚಾರ ಮೂಲ ಕಾಯಿಲೆಯಲ್ಲ, ಬದಲಾಗಿ ಸಾಮಾಜಿಕ ಅಸಮಾನತೆಯ ಉಪ-ಉತ್ಪನ್ನ ಎನ್ನುವ ಅರಿವು ತುಂಬ ಮುಖ್ಯ. ಅಸಮಾನತೆ ಇಲ್ಲದ ಸಮಾಜವೆಂಬುದು ಒಂದಿ ಆದರ್ಶ ಮಾತ್ರ. ಈ ಸಂಗತಿ ಸಮತಾವಾದವನ್ನು ರೂಪಿಸಿದ ಏಂಗೆಲ್ಸ್ ಕೂಡ ಮನಗಂಡಿದ್ದ. ಸ್ವಲ್ಪ ಮಟ್ಟಿನ ಅಸಮಾನತೆ ಎಲ್ಲ ಸಮಾಜಗಳಲ್ಲು ಇರುತ್ತದೆ ಎಂಬ ಸಂಗತಿಯನ್ನು ಒಪ್ಪಿಕೊಳ್ಳೋಣ. ಆದರೆ ನಾವೀಗ ಆರ್ಥಿಕ ಉದಾರೀಕರಣದ ಕಾಲದಲ್ಲಿದ್ದೇವೆ. ಸಮಾನತೆ ಎಂಬ ಪದವನ್ನು ತೆಗೆದುಹಾಕಿ ಆ ಜಾಗದಲ್ಲಿ ’ಆರ್ಥಿಕ ಪ್ರಗತಿ’ ಎಂಬ ಎಡಬಿಡಂಗಿ ಪದವನ್ನು ತಂದು ಕೂರಿಸಿದ್ದೇವೆ. ಇದು ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರವನ್ನು ವಿಪರೀತಕ್ಕೆ ಕೊಂಡೊಯ್ಯಲು ಕಾರಣವಾಯಿತು. ಉದಾಹರಣೆಗೆ ಅಂತರಗಳನ್ನು ನೋಡುವುದಾದರೆ ದುಡಿಯುವವರು-ಇಲ್ಲದವರು, ಇಂಗ್ಲಿಷ್ ಬರುವವರು-ಬಾರದವರು, ರಾಜಕೀಯ ಶಕ್ತಿ ಇರುವವರು-ಇಲ್ಲದವರು, ಜಾತಿಯ ಬಲ ಇರುವವರು-ಇಲ್ಲದವರು ಇತ್ಯಾದಿ. ದಿಗಿಲಿನ ಸಂಗತಿಯೆಂದರೆ ನಾವು ಈ ವ್ಯತ್ಯಾಸವನ್ನು ನಮ್ಮ ಹೆಮ್ಮೆಯ ಸಂಕೇತ ಎಂಬಂತೆ ಬಿಂಬಿಸಿಕೊಂಡಿದ್ದೇವೆ.

ನಾವು ಅಪ್ಪಿ ಮುದ್ದಾಡುತ್ತಿರುವ ನವ ಆರ್ಥಿಕ ನೀತಿಯ ಹರಿಕಾರ ಅಮೇರಿಕಾ ಎಂಬ ದೊಡ್ಡಣ್ಣ. ನಾವೀಗ ಅನುಭವಿಸುತ್ತಿರುವ ಮಧ್ಯವರ್ತಿಯುಗ ಈ ಬಂಡವಾಳಶಾಹಿಯ ಕೊಡುಗೆ. ಮಧ್ಯವರ್ತಿಗಳು ಕೆಲಸ ಮಾಡುವುದು ಲಂಚದ ಆಧಾರದ ಮೇಲೆ ಎಂದು ಬೇರೆ ಹೇಳಬೇಕಿಲ್ಲ ತಾನೆ? ನಾವು ಆದರ್ಶವಾಗಿ ಕಾಣುತ್ತಿರುವ ಅಮೇರಿಕ ಭ್ರಷ್ಟಾಚಾರದ ನಿರ್ಮೂಲನೆಗೆ ಹೊರಟಿರುವುದು ಮಧ್ಯವರ್ತಿ ಸಂಸ್ಥೆಗಳ ಮೂಲಕ! ಅಂದರೆ ಭೃಷ್ಟಾಚಾರವನ್ನು ಕಾನೂನುಬದ್ಧವಾಗಿಸುವ ಮೂಲಕ. ಇದಕ್ಕೆ ಯಾವ ಬೆಲೆ ತೆತ್ತಾದರೂ ವ್ಯವಸ್ಥೆಯ ಬಳಕೆಯಾಗಬೇಕು ಎಂದು ಅದು ಬಯಸುತ್ತದೆ. ಈಗ ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಭಾರತದಲ್ಲಿ ಬಹುರಾಷ್ಟೀಯ ಕಂಪನಿಗಳು ಬೆಳೆದಿರುವುದು ಕೇವಲ ಸ್ವಂತ ಸಾಮರ್ತ್ಯದಿಂದ ಅಲ್ಲ. ಅಥವಾ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳ ಜೊತೆ ನಡೆಸಿರುವ ಆರೋಗ್ಯಕರ ಪೈಪೋಟಿಯಿಂದಲೂ ಅಲ್ಲ. ಬದಲಾಗಿ ಅವು ಬಳಸಿದ್ದು ಅಡ್ಡಹಾದಿ. ಈ ಅಡ್ಡಹಾದಿಗೆ ಬಳಕೆಯಾದ ಮಂತ್ರಿ ಮಹೋದಯರು ಈಗ ಜೈಲು ಹಾದಿಯಲ್ಲಿದ್ದಾರೆ. Corporate corruption ಎಂಬ ಮಹಾಮಾರಿ ಭಾರತವನ್ನು ನಲುಗಿಸಿದ್ದು ಹೀಗೆ.

ಇಷ್ಟು ಹಿನ್ನೆಲೆಯ ಚರ್ಚೆಯೊಂದಿಗೆ ಮಧ್ಯಮವರ್ಗದ ವಿಷಯಕ್ಕೆ ಬರೋಣ. ಅಣ್ಣಾ ಚಳುವಳಿಯಲ್ಲಿ ಬೀದಿಗಿಳಿದು ಬೆಂಬಲಿಸಿದ ಮಧ್ಯಮವರ್ಗ ಮತ್ತು ಇಪ್ಪತ್ತು ವರ್ಷ ಹಿಂದೆ ಭಾರತದಲ್ಲಿ ಇದ್ದ ಮಧ್ಯಮವರ್ಗ ಒಂದೇ ತೆರನಾದದ್ದಲ್ಲ. ಹಿಂದಿನ ಮಧ್ಯಮವರ್ಗದಲ್ಲಿದ್ದವರು ಬಹುಪಾಲು ಮಾಸ್ತರರು, ಬ್ಯಾಂಕ್ ಉದ್ಯೋಗಿಗಳು, ಸರ್ಕಾರಿ ಇಲಾಖೆಯ ಗುಮಾಸ್ತರು, ಆಸ್ಪತ್ರೆಯ ನೌಕರರು ಇತ್ಯಾದಿ. ಇವರೆಲ್ಲ ಸಾಮೂಹಿಕ ಹೋರಾಟದಲ್ಲಿ ಭಾಗಿಯಾಗಿದ್ದು ಬಹಳ ಕಡಿಮೆ. ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ಹೊಸಬಗೆಯ ಮಧ್ಯಮವರ್ಗ ಸೃಷ್ಟಿಯಾಗಿದೆ. ಹಿನ್ನೆಲೆ ಮತ್ತು ಮನೋಭಾವದಿಂದಲೂ ಇದು ಹಿಂದಿನ ಮಧ್ಯಮವರ್ಗಕ್ಕಿಂತ ಭಿನ್ನವಾದದ್ದು. ಆರ್ಥಿಕ ಉದಾರೀಕರಣದಿಂದ ಹುಟ್ಟಿಕೊಂಡಿರುವ ಹೊಸ ಪೀಳಿಗೆಯಿದು. ಇವರೆಲ್ಲ ಸರಕಾರಿ ನೌಕರರಲ್ಲ, ಬದಲಿಗೆ ಖಾಸಗಿ ಬಹುರಾಷ್ಟೀಯ ಕಂಪನಿಗಳಲ್ಲಿ ದುಡಿಯುವವರು. ತಮ್ಮ ಅವಶ್ಯಕತೆಗಳನ್ನು ಸರಕಾರಿ ಸವಲತ್ತುಗಳಿಲ್ಲದೆ ಪೂರೈಸಿಕೊಳ್ಳುವವರು, ಆರ್ಥಿಕವಾಗಿ ಸಬಲರು, ಉನ್ನತ ಶಿಕ್ಷಣ ಪಡೆದವರು, ಜಾಣರೂ ಇರಬಹುದು. ಆದರೆ ಇವರ ಜೀವನ ನಡೆಯುತ್ತಿರುವುದು ಅಸಮಾನತೆಯನ್ನು ವಿಜೃಂಭಿಸುವ ಸಿದ್ಧಾಂತಗಳಡಿಯಲ್ಲಿ. ಬಹುರಾಷ್ಟೀಯ ಕಂಪನಿಯ ಹೆಚ್ಚಿಗೆ ಸಂಬಳದ ಉದ್ಯೋಗದಲ್ಲಿರುವ ಇವರೆಲ್ಲ ಗಾಂಧೀಜಿಯ ಸರಳ ಜೀವನ ತತ್ವಕ್ಕೆ ಬದ್ಧರಲ್ಲದವರು. ಕಾನೂನಿನ ಚೌಕಟ್ಟಿನೊಳಗೆ ಸಾಧ್ಯವಾದಷ್ಟು ಸಂಪತ್ತನ್ನು ಶೇಖರಿಸಲು ಹಪಹಪಿಸುತ್ತಿರುವವರು. ಇಂತಹ ಅರಾಜಕ ಮನಸ್ಥಿತಿಯ ಜನಾಂಗವೊಂದು ಬೀದಿ ಬದಿಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ನಿಂತರೆ, ವಾರಾಂತ್ಯಕ್ಕೆ ಫ್ರೀಡಂ ಪಾರ್ಕ್ ಗೆ ತೆರಳಿ I AM ANNA ಎಂದು ಬರೆದ ಗಾಂಧಿಟೋಪಿ ತೊಟ್ಟು ಫೋಟೊ ತೆಗೆಸಿಕೊಂಡರೆ, ರಾತ್ರಿ ಮೊಂಬತ್ತಿ ಹಿಡಿದು ಮೆರವಣಿಗೆ ಹೊರಟರೆ ಭೃಷ್ಟಾಚಾರ ನಿರ್ಮೂಲನೆಯಗುತ್ತದೆಯೇ? ಅಷ್ಟಕ್ಕೂ ಲೋಕಪಾಲ ಆಗಲಿ, ಮತ್ಯಾವುದೆ ಕಾನೂನಾಗಲಿ ಭೃಷ್ಟತೆಯನ್ನು ಸಂಪೂರ್ಣವಾಗಿ ತಡೆಗಟ್ಟಲಾರದು. ಭೃಷ್ಟತೆಯ ವಿರುದ್ಧ ಹೋರಾಡುವುದು ಸಾಮೂಹಿಕ ಹೋರಾಟವಾದಾಗ ಅರ್ಥ ಕಳೆದುಕೊಳ್ಳುತ್ತದಲ್ಲವೆ? ಆಳದಲ್ಲಿ ಅತಿಯೆನಿಸುವಷ್ಟು ಭೌತಿಕವಾದಿಗಳು, ಆತ್ಮವಂಚಕರು ಆದವರಿಗೆ ವೈಯಕ್ತಿಕ ಮಟ್ಟದಲ್ಲಿ ಜಾಗೃತಿ ಮೂಡುವುದು ಯಾವಾಗ? ಹೊಟ್ಟೆಪಾಡನ್ನು, ಸ್ವಾರ್ಥವನ್ನು ಮೀರಿದ ಕನಸುಗಳು ಅವರ ಕಣ್ಣುತುಂಬುವುದು ಯಾವಾಗ? ಎಲ್ಲ ಕ್ರಾಂತಿಗಳು ಸ್ವಂತ ಆಚರಣೆಯಿಂದಲೇ ಮೊದಲಾಗಬೇಕು ಎಂಬರ್ಥದಲ್ಲಿ ಹೀಗೆ ಪ್ರಶ್ನಿಸಬೇಕಾಗಿದೆ.

ಈ ನವ ಮಧ್ಯಮ ವರ್ಗದವರು ತಮ್ಮನ್ನು ಪರಿಶುದ್ಧವೆಂದು ತಿಳಿದುಕೊಂಡಿರುವುದು ಏಕೆಂದರೆ ಅವರು ಉದ್ದೇಶಪೂರ್ವಕವಾಗಿಯೋ, ಪ್ರತ್ಯಕ್ಷವಾಗಿಯೋ ಪಾಪಗಳನ್ನು ಮಾಡುತ್ತಿಲ್ಲ. ಅವರು ಕೆಲಸಮಾಡುವ ಬಹುರಾಷ್ಟ್ರೀಯ ಕಂಪನಿಗಳ ತಾತ್ವಿಕ ನೆಲೆ ಶುದ್ಧವಿಲ್ಲ ಎಂಬ ಅರಿವು ಅವರಿಗಿಲ್ಲ. ಚಾಲ್ತಿಯಲ್ಲಿರುವ ವ್ಯವಸ್ಥೆಯೊಳಗಿನ ಅರಿವಾಗದ ಅನೈತಿಕತೆಗಳಲ್ಲೆ ಅವರ ಬೇಳೆ ಬೇಯುತ್ತಿದೆ. ಇಂತಹ ನವ ಮಧ್ಯಮ ವರ್ಗದ ಭಾಗವಾಗಿಯೇ ನಾನಿದೆಲ್ಲವನ್ನು ಬರೆಯುತ್ತಿದ್ದೇನೆ. ಕಂಬಾರರ ಒಂದು ಕವಿತೆಯ ನಾಲ್ಕು ಸಾಲುಗಳು ನಾನು ಬದುಕುತ್ತಿರುವ ರೀತಿಯನ್ನು ಪ್ರಶ್ನಿಸುತ್ತಿವೆ.