Monday, August 8, 2011

ಆತ್ಮದ ಬೆಳಕಿನಲ್ಲಿ ಜನಾಂದೋಲನ
ಇತಿಹಾಸ ಯಾವಾಗಲೂ ಮುಂದುವರಿಯಬಯಸುತ್ತದೆ. ಯಾವುದೇ ಕಾಲದಲ್ಲೂ ನಾಯಕ ಮತ್ತು ಜನರ ನಡುವೆ ಭಿನ್ನಾಭಿಪ್ರಾಯ ಬಂದಾಗ ನಾಯಕನನ್ನು ಬದಲಿಸಬೇಕು ಎನ್ನುತ್ತದೆ ಪ್ರಜಾಪ್ರಭುತ್ವ. ಆದರೆ ಜನರನ್ನೇ ಬದಲಿಸಬೇಕು ಎನ್ನುತ್ತದೆ ಸರ್ವಾಧಿಕಾರ!! ಈಗ ಆಗಿರುವುದನ್ನೆ ಗಮನಿಸಿ. ನಮ್ಮಿಂದ ಆರಿಸಿ ಬಂದ ಜನಪ್ರತಿನಿಧಿಗಳ ಭ್ರಷ್ಟಾಚಾರದಿಂದ ರೋಸಿಹೋದ ದೇಶದ ಪ್ರಜೆಗಳಲ್ಲಿ ಅಣ್ಣಾ ಹಜಾರೆ ತನ್ನ ಸಾತ್ವಿಕ ಹೋರಾಟದಿಂದ ಹೊಸ ಕನಸನ್ನು ಹುಟ್ಟಿಸಿದ್ದಾರೆ. ಸಧೃಢ ಲೋಕಪಾಲ ಮಸೂದೆಯ ಕರಡನ್ನು ಅವರು ಮತ್ತು ಸಂಗಡಿಗರು ರೂಪಿಸಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ದುರ್ಭಲ ಮಾದರಿಯನ್ನು ಜನರ ಮೇಲೆ ಹೇರಲು ಹೊರಟಿದೆ. ಇದು ಜನತೆಯ ಅಭಿಪ್ರಾಯದ ಮೇಲೆ ಆಳುವ ವರ್ಗದ ದಾಳಿಯಲ್ಲದೆ ಮತ್ತೇನು?

ಜನಾಂದೋಲನಗಳ ಬಗ್ಗೆ ನಮ್ಮಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅವುಗಳನ್ನು ತೊಲಗಿಸುವ ಅಗತ್ಯ ಈಗ ಮುಂಚಿಗಿಂತ ಹೆಚ್ಚಿದೆ. ಲೋಕಪಾಲ ವಿಧೇಯಕದ ಅನುಷ್ಠಾನಕಾಗಿ ನಡೆದ ಹೋರಾಟ ಇಡಿ ಜನತೆ ಕೈಗೊಂಡ ಆಂದೋಲನವಲ್ಲ. ಕಲವೇ ಕೆಲವು ಅತೃಪ್ತರು ನಡೆಸುತ್ತಿರುವ ಗದ್ದಲ ಎಂಬ ಆಪಾದನೆಯಿದೆ. ಆದರೆ ಯಾವುದೆ ಕ್ರಾಂತಿಯಲ್ಲಿ ಎಲ್ಲಾ ಜನರೂ ಮನೆ ಬಿಟ್ಟು ಬೀದಿಗೆ ಬರುವುದಿಲ್ಲ. ಪ್ರತಿಭಟನಕಾರರ ಸಂಖ್ಯೆ ಮುಖ್ಯವಲ್ಲ; ಅವರ ಕೋರಿಕೆ ಮುಖ್ಯ; ಅವರ ಕೋರಿಕೆ ನ್ಯಾಯಯುತವೋ ಅಲ್ಲವೋ ಎಂಬುದು ಮುಖ್ಯ. ಬಹಳಷ್ಟು ಬಾರಿ ಜನರು ನಾಯಕರಿಗೆ ಮತ್ತು ಅವರ ಭಯಂಕರ ವರ್ಚಸ್ಸಿಗೆ ಹೆದರಿ ಪ್ರತಿಭಟಿಸುವುದಿಲ್ಲ. ಮುಂದೆ ತೋರಿಸಿಕೊಳ್ಳುವುದೂ ಇಲ್ಲ. ಇದರ ಅರ್ಥ ಅವರು ಭ್ರಷ್ಟ ನಾಯಕರ ಪರವಾಗಿದ್ದಾರೆ ಎಂದಲ್ಲ. ತಮ್ಮ ಮನಸ್ಸಿನಲ್ಲಿ ಇರುವುದನ್ನು ನೇರವಾಗಿ ಹೇಳಲು ಹೆದರುವ Silent Mejority ಪ್ರಜಾ ಸಮೂಹ ಎಲ್ಲಾ ಪ್ರಭುತ್ವಗಳಲ್ಲೂ ಇರುತ್ತದೆ. ಬೆಂಬಲಿಸುವುದಕ್ಕೆ ಮಾತ್ರ ಬಹುಮತ ಬೇಕು. ವಿರೋಧಿಸುವುದಕ್ಕೆ ಬಹುಮತ ಬೇಡ, ಅಲ್ಪಮತವಿದ್ದರೂ ಸಾಕು ಎನ್ನುವುದನ್ನು ಎಲ್ಲರು ಅರ್ಥಮಾಡಿಕೊಳ್ಳಬೇಕಿದೆ.

ಭ್ರಷ್ಟಾಚಾರದ ವಿರುದ್ಧದ ಆಂದೋಲನದ ನೇತೃತ್ವ ವಹಿಸಿದ್ದ ಅಣ್ಣಾ ಹಜಾರೆ ಮತ್ತು ಅವರ ಅನುಯಾಯಿಗಳು ದೆಹಲಿಯ ಜಂತರ್ ಮಂತರ್ ನಲ್ಲಿ ನಿರ್ಮಿಸಿದ್ದ ವೇದಿಕೆಯ ಮೇಲೆ ರಾಜಕಾರಣಿಗಳು ಕಾಣಿಸಿಕೊಳ್ಳುವುದನ್ನು ನಿರಾಕರಿಸಿ ಒಳ್ಳೆಯ ಪಾಠ ಕಲಿಸಿದ್ದಾರೆ. ರಾಜಕಾರಣಿಗಳು ಸದಾಕಾಲ ವೇದಿಕೆಯನ್ನು ಅಲಂಕರಿಸುವ ಅಗತ್ಯವೇನಿದೆ? ಆಂದೋಲನಕಾರರು ಇಂತಹ ನಿಲುವು ತಳೆದಿರುವುದಕ್ಕೆ ರಾಜಕಾರಣಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವುದನ್ನೇ ಪ್ರಶ್ನಿಸುವ ಉದ್ದೇಶವೇನು ಇರಲಿಲ್ಲ. ಜನಪ್ರತಿನಿಧಿಯಾಗಿರುವ ಒಂದೇ ಕಾರಣಕ್ಕೆ ಅವರು ಎಲ್ಲೆಂದರಲ್ಲಿ ನುಗ್ಗುವ, ಉನ್ನತ ಸ್ಥಾನ ಅಲಂಕರಿಸುವ ಹಕ್ಕು ಪಡೆದಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಇತ್ತೀಚೆಗೆ ಬಾಬಾ ರಾಮ್ ದೇವ್ ಅವರನ್ನು ಮತ್ತು ಅಣ್ಣಾ ಹಜಾರೆಯವರನ್ನು ಹೋಲಿಸಿ ನೋಡುವ ಕೆಲಸಗಳು ನಡೆದವು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡಿಸಿದರೆಂಬ ಏಕೈಕ ಕಾರಣಕ್ಕೆ ಒಂದೇ ತಕ್ಕಡಿಯಲ್ಲಿಟ್ಟು ತೂಗಿ ನೋಡುವ ಐನಾತಿ ಕೆಲಸವನ್ನು ದೇಶದ ಬಹುಪಾಲು ಮಾಧ್ಯಮಗಳು ಮಾಡಿದವು. ಇದು ಬಹಳ ದಿಗಿಲಿನ ಸಂಗತಿ. ರಾಮದೇವ ಬಾಬಾರ ಮಾತು, ಧ್ವನಿ, ಅವರ ಚೀತ್ಕಾರ, ಅವರ ಅಹಂಕಾರ, ಅವರು ತಮ್ಮ ಅನುಯಾಯಿಗಳನ್ನು ಹೋರಾಟಕ್ಕೆ ಬಳಸಿಕೊಳ್ಳುತ್ತಿರುವ ಮತ್ತು ಬೆಳೆಸಿಕೊಳ್ಳುತ್ತಿರುವ ಉಪಾಯಗಳನ್ನು ನೋಡಿದರೆ ಅವರು ಸಾಚಾ ಎಂಬ ಕುರಿತು ಅನುಮಾನಗಳು ಏಳುತ್ತವೆ. ಉಪವಾಸದ ಕುರಿತು ಗಾಧೀಜಿ ಹೇಳಿದ ಮಾತು ನೆನಪಾಗುತ್ತಿದೆ - "ಉಪವಾಸ ಮುಂತಾದ ನಿಯಮಗಳು ಸಂಯಮಕ್ಕೆ ಒಂದು ಸಾಧನವೇ ಹೊರತು ಅದೇ ಎಲ್ಲವು ಅಲ್ಲ. ದೈಹಿಕ ಉಪವಾಸದೊಂದಿಗೆ ಮಾನಸಿಕ ಉಪವಾಸವೂ ಬೆರೆಯದಿದ್ದರೆ ಅದು ಡಾಂಭಿಕತನವಾಗಿ ಅನಿಷ್ಟದಲ್ಲಿ ಕೊನೆಯಾಗುತ್ತದೆ. ನಾವು ಉಪವಾಸವನ್ನು ಮುಖ್ಯವಾಗಿ ಆಚರಿಸಬೇಕಾಗಿರುವುದು ಆತ್ಮ ಸಂಯಮಕ್ಕಾಗಿ". ಸತ್ಯಾಗ್ರಹವನ್ನು ಉಪವಾಸವೆಂದು ಬಿಂಬಿಸಿ ಮಾರುಕಟ್ಟೆಯ ಸರಕಾಗಿಸಿದ ಕೀರ್ತಿ ಇದೇ ರಾಮದೇವ್ ಬಾಬಾಗೆ ಸಲ್ಲುತ್ತದೆ. ಈ ವಿದ್ಯಮಾನಗಳಿಂದ ಅಣ್ಣಾ ಮತ್ತು ಸಂಗಡಿಗರು ಕಲಿಯುವುದು ಬಹಳಷ್ಟಿದೆ. ಸಾಮಾನ್ಯವಾಗಿ ಹೋರಾಟಗಾರರು ತಮ್ಮ ಶತ್ರುಗಳನ್ನು ಸರಿಯಾಗಿಯೇ ಗುರುತಿಸಿಕೊಂಡಿರುತ್ತಾರೆ. ಯಾವಾಗಲು ಹೋರಾಟ ಮುಗ್ಗರಿಸಿ ಬೀಳುವುದು ಅದರ ನಾಯಕರು ಆರಿಸಿಕೊಳ್ಳುವ ಮಿತ್ರರಿಂದ!!

ಜೀವನದ ಬೇರೆ ಬೇರೆ ಮಜಲುಗಳಲ್ಲಿ, ತಿರುವುಗಳಲ್ಲಿ ಅನೈತಿಕರು, ಭ್ರಷ್ಟರು ಕೇವಲ ರಾಜಕಾರಣಿಗಳು ಅಥವಾ ಅಧಿಕಾರಿಗಳಷ್ಟೆ ಆಗಿರುವುದಿಲ್ಲ, ನಾವೂ ಆಗಿರುತ್ತೇವೆ!! ಅಷ್ಟಕ್ಕು ಸಮಾಜ ಜೀವಿಯಾದ ಮನುಷ್ಯನಲ್ಲಿ ಮಾತ್ರ ಭ್ರಷ್ಟತೆ ಸಾಧ್ಯ. ಈ ಭ್ರಷ್ಟತೆಯಿಂದ ಪಾರಾಗಿ ತ್ರಿಕರಣ ಶುದ್ಧಿಯನ್ನು ಬಯಸುವುದು ಮನುಷ್ಯನಿಗೆ ಮಾತ್ರ ಅಗತ್ಯ, ಹೊರತು ಪ್ರಾಣಿಗಳಿಗಲ್ಲ. ನಾವು ಈಗ ಐತಿಹಾಸಿಕವಾಗಿ ಅತಿ ಮುಖ್ಯವಾದ ಕಾಲಘಟ್ಟದಲ್ಲಿದ್ದೇವೆ. ಭ್ರಷ್ಟಾಚಾರ ಅನಿವಾರ್ಯವಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಆಸೆ ಈಗ ಪ್ರಪಂಚದಾದ್ಯಂತ ಹೆಚ್ಚಿದೆ. ಆಫ್ರೋ- ಅರೇಬಿಕ್ ರಾಷ್ಟ್ರಗಳಲ್ಲಿ ಇತ್ತೀಚೆಗೆ ನಡೆದ ಜನಾಂದೋಲನಗಳೆ ಇದಕ್ಕೆ ಸಾಕ್ಷಿ. ಇದು ಗಾಯಗೊಂಡಿರುವ ಭಾರತೀಯ ಪ್ರಜಾಪ್ರಭುತ್ವದ ಸಂಧರ್ಭದಲ್ಲಿಯೂ ಅನ್ವಯಿಸುತ್ತದೆ. ಪ್ರೇಮದಂತೆ ಸಾರ್ವಜನಿಕ ನೈತಿಕತೆಯೂ ಪ್ರತಿನಿತ್ಯ ಹೊಸ ಹುಟ್ಟು ಪಡೆಯುತ್ತಲೆ ಇರಬೇಕು. ಭ್ರಷ್ಟಾಚಾರದ ವಿರುದ್ಧ ಮೊದಲು ಹೋರಾಟ ನಡೆಯಬೇಕಿರುವುದು ನಮ್ಮ ಎದೆಗೂಡಿನ ಮೌನದಲ್ಲಿ. ಈ ಪಿಡುಗಿನ ಬಗ್ಗೆ ನಮ್ಮೊಳಗೆ ಪ್ರಶ್ನೆಗಳೆದ್ದು, ಅಂತರಂಗದಲ್ಲಿ ಚಾರಿತ್ರಿಕ ತಳಮಳಗಳಾದಾಗ ಮಾತ್ರ ನಮ್ಮ ಬಾಹ್ಯ ಹೋರಾಟಗಳು ಅರ್ಥಪೂರ್ಣವಾಗುತ್ತವೆ. ಇಲ್ಲದಿದ್ದರೆ ಅದು ಬರಿಯ ಡೌಲಿನ ಪ್ರದರ್ಶನ!!

ಬನ್ನಿ ಆಗಸ್ಟ್ ೧೬ ರಿಂದ ಅಣ್ಣಾ ಹಜಾರೆ ಮುಂದುವರಿಸುತ್ತಿರುವ ಜನಾಂದೋಲನದಲ್ಲಿ ನಿಮ್ಮ ಪ್ರಾಮಾಣಿಕ ಹೃದಯದೊಂದಿಗೆ ಪಾಲ್ಗೊಳ್ಳಿ.