Tuesday, July 12, 2011

ನಾವು ಧಾರ್ಮಿಕ ಕೇಂದ್ರಗಳನ್ನು ಪ್ರಶ್ನಿಸಬಹುದೆ?
ನಾವು ಮನುಷ್ಯರು ದೈನಿಕದ ಹುಲುತನದಿಂದ ಪಾರಾಗಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತೇವೆ. ದೇವರ ಕಲ್ಪನೆ ನಮ್ಮ ಈ ಪ್ರಯತ್ನದ ಒಂದು ಭಾಗವಾಗಿದೆ. ಆಧುನಿಕರಾದ ನಮ್ಮಲ್ಲಿ ದೇವರೆಂಬ ಈ ಅದೃಶ್ಯ ಶಕ್ತಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಪವಾಡಗಳು ಮುಖ್ಯವಾದವು. ನಾವು ನಿತ್ಯದ ನಮ್ಮ ಕೆಲಸಗಳಿಗೆ ನಮ್ಮನ್ನೇ ಜವಾಬ್ದಾರರಾಗಿಸಿಕೊಂಡು ಮುಂದುವರಿಯುತ್ತಿರುತ್ತೇವೆ. ಹಾಗೆ ಜೀವನ ನಡೆಸುತ್ತಿರುವಾಗ ಏನಾದರು ಅವಘಡಗಳೂ ಸಂಭವಿಸಬಹುದು. ಅದು ಕಾಯಿಲೆಯೊ, ಅಪಘಾತವೊ, ಕೆಲಸದಲ್ಲಿ ಹಿನ್ನಡೆಯೊ, ಇನ್ನೊಬ್ಬರ ಪಿತೂರಿಯೊ ಅಥವಾ ಇನ್ನಾವುದೊ ಸಂಕಷ್ಟವೊ ಆಗಿರಬಹುದು. ಈಗ ಉದಾಹರಣೆಗಾಗಿ ನನಗೊಂದು ಕಾಯಿಲೆ ಬಂದಿದೆ ಎಂದುಕೊಳ್ಳೋಣ. ಆಧುನಿಕನಾದ ನಾನು ಸಹಜವಾಗಿ ವೈದ್ಯರನ್ನು ಸಂಪರ್ಕಿಸುತ್ತೇನೆ. ವೈದ್ಯರ ಔಷಧಿ ನನ್ನನ್ನು ಗುಣಪಡಿಸಿದರೆ ನಾನು ನಿರುಮ್ಮಳನಾಗುತ್ತೇನೆ. ಅವರ ಬಗ್ಗೆ ನನಗೊಂದು ಸಹಜವಾದ ಗೌರವ ಮೂಡುತ್ತದೆ. ಅದೇ ನಾನು ಸ್ವಲ್ಪ ಭಾವುಕನಾಗಿದ್ದರೆ ಆ ವೈದ್ಯರಲ್ಲಿ ದೇವರನ್ನು ಕಾಣುತ್ತೇನೆ. ವೈದ್ಯೊ ನಾರಾಯಣೊ ಹರಿಹಿಃ ಎನ್ನುವುದು ಇದನ್ನೆ. ನಾನು ಹಾಗೆ ಭಾವಿಸಿದಾಗಲೂ ವೈದ್ಯ ಒಬ್ಬ ಮನುಷ್ಯನೇ ಆಗಿರುತ್ತಾನೆ. ಈ ಘಟನೆಯಲ್ಲಿ ಮನುಷ್ಯನೊಬ್ಬ ಮನುಷ್ಯನ ಸಮಸ್ಯೆಯನ್ನು ಪರಿಹರಿಸಿದಂತಾಯಿತು. ಪರಿಹಾರಕ್ಕೆ ವಿಜ್ಞಾನ ವೈದ್ಯನ ನೆರವಿಗೆ ಬಂತು ಎನ್ನಬಹುದು. ಈ ವಿಜ್ಞಾನಕ್ಕೆ ಪ್ರಶ್ನೆಗಳಿಗೆ ಉತ್ತರಿಸುವ ಗುಣವಿದೆ. ಹಾಗಾಗಿ ನನ್ನ ಖಾಯಿಲೆ, ಅದರ ಪರಿಹಾರಕ್ಕೆ ಬಳಸಿದ ವಿಧಾನ ಇತ್ಯಾದಿ ವಿಷಯಗಳ ಬಗ್ಗೆ ನನಗೆ ತೃಪ್ತಿಕರ ಉತ್ತರವೂ ದೊರೆಯುತ್ತದೆ ಮತ್ತು ಇದರಿಂದ ನನ್ನ ತಿಳುವಳಿಕೆಯೂ ಬೆಳೆಯುತ್ತದೆ.

ಆದರೆ ಮನುಷ್ಯನ ಜೀವನ ಆಕಸ್ಮಿಕಗಳ ಸಂಕೀರ್ಣ. ಹಾಗಾಗಿ ಇಲ್ಲಿ ನಾವು ಅಂದುಕೊಂಡಂತೆ ಎಲ್ಲವು ನಡೆಯದೆ ಹೋಗಬಹುದು. ಇದನ್ನು ಅರಿಯಲು ಮೇಲಿನ ಸಂದರ್ಭವನ್ನು ಸ್ವಲ್ಪ ತಿರುಚಿ ನೋಡೋಣ. ನನ್ನ ಖಾಯಿಲೆಗೆ ವೈದ್ಯರಿಂದ ಪರಿಹಾರ ಸಿಗಲಿಲ್ಲ ಎಂದಿಟ್ಟುಕೊಳ್ಳೋಣ. ಆಗ ನಾನು ಹತಾಶನಾಗುತ್ತೇನೆ. ಪರಿಣಾಮವಾಗಿ ನನ್ನ ಸಮಸ್ಯೆಗೆ ನನಗೆ ಪರಿಹಾರ ಮುಖ್ಯವಾಗುತ್ತದೆಯೆ ಹೊರತು ವಿಧಾನವಲ್ಲ! ಈಗ ನನ್ನ ಸಮಸ್ಯೆಗೆ ಒಂದು ಧರ್ಮ ಕ್ಷೇತ್ರದ ಸ್ವಾಮೀಜಿಯೊಬ್ಬರು ಒಂದು ಪವಾಡ ಸದೃಶ್ಯ ಪರಿಹಾರ ಸೂಚಿಸಿದರು ಎಂದಿಟ್ಟುಕೊಳ್ಳಿ. ಆಗಲೂ ನಾನು ನಿರುಮ್ಮಳನಾಗುತ್ತೇನೆ. ನಾನು ಆಸ್ತಿಕನಾದರು ಅಥವಾ ನಾಸ್ತಿಕನೇ ಆದರು ನನಗೆ ಸ್ವಾಮೀಜಿಗಳ ಬಗ್ಗೆ ಗೌರವ ಮೂಡುತ್ತದೆ. ದೈವೀ ಶಕ್ತಿಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿ ಸ್ವಾಮೀಜಿಯಾಗಿರುವುದರಿಂದ ನಾವವರಿಗೆ ಒಂದು ಅಸಾಮಾನ್ಯ ಪಟ್ಟವನ್ನು ನೀಡುತ್ತೇನೆ. ನಮ್ಮ ಪರಂಪರೆಯ ಋಷಿ ಮುನಿಗಳು ಲೋಕಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ನಿದರ್ಶನಗಳಿಂದ ನಾವು ಪ್ರಭಾವಿತರಾಗಿದ್ದೇವೆ ಮತ್ತು ಇಂದಿಗೂ ಹಾಗೆ ನಡೆದುಕೊಳ್ಳುತ್ತಿರುವ ಕೆಲವರು ಇರುವುದರಿಂದ ನನ್ನ ಈ ಯೋಚನೆ ತೀರಾ ಅಸಹಜ ಎಂದು ಹೇಳಲಾಗದು. ಸಮಸ್ಯೆಯ ಪರಿಹಾರಕ್ಕೆ ಸ್ವಾಮೀಜಿ ಸಹಾಯ ಪಡೆದಿರುವುದು ಒಂದು ದೈವೀ ಶಕ್ತಿಯನ್ನು. ಇದು ವಿಜ್ಞಾನ ಮತ್ತು ತರ್ಕ ಇತ್ಯಾದಿಗಳ ನಿಲುಕಿಗೆ ಸಿಗುವುದಿಲ್ಲ. ಹಾಗಾಗಿ ಸಮಸ್ಯೆ ಪರಿಹಾರವಾದರೂ ನನ್ನ ಪ್ರಶ್ನೆಗಳಿಗೆ ತ್ರಪ್ತಿಕರ ಉತ್ತರ ಸಿಗುವುದಿಲ್ಲ. ಉತ್ತರವಿಲ್ಲದ ಪರಿಹಾರಗಳು ನನ್ನಲ್ಲಿ ಹೊಸ ಭ್ರಮೆಗಳನ್ನು ಸೃಷ್ಟಿಸುತ್ತದೆಯೆ ಹೊರತು ತಿಳುವಳಿಕೆಯನ್ನಲ್ಲ.

ದೇವರನ್ನೂ ವಿಜ್ಞಾನವನ್ನೂ ನಾವೀಗ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಸ್ವೀಕರಿಸಬೇಕಾದ ಸವಾಲನ್ನು ಎದುರಿಸುತ್ತಿದ್ದೇವೆ ಅಲ್ಲವೆ? ದೇವರು ನಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ ಎಂದುಕೊಂಡರೆ, ನಮ್ಮ ಎಲ್ಲ ಪ್ರಶ್ನೆಗು ದೇವರೇ ಉತ್ತರವಾಗಿ ಕೊನೆಗೆ ಪ್ರಶ್ನೆಗಳೆ ಇಲ್ಲವಾಗುತ್ತವೆ. ಹಾಗೆಂದು ವಿಜ್ಞಾನವೊಂದನ್ನೆ ಪರಿಹಾರ ಎಂದು ಭಾವಿಸಿದರೆ ಅದೂ ತಪ್ಪು. ಏಕೆಂದರೆ ವಿಜ್ಞಾನಕ್ಕೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕೆಂಬ ಹುಚ್ಚಿದೆ. ಈ ವಿಜ್ಞಾನ ಪ್ರಸ್ತುತ ನಮ್ಮಲ್ಲಿರುವ ಉತ್ತಮ ಆಲೋಚನಾ ಕ್ರಮವೇ ಆದರು ಅದು ನಿಸರ್ಗದ ಎಲ್ಲ ಪ್ರಶ್ನೆಗಳಿಗು ಉತ್ತರ ನೀಡುವುದಿಲ್ಲ!! ಉದಾಹರಣೆಗೆ ಬೀಜ-ವೃಕ್ಷದ ಗುಟ್ಟು. ಬೀಜದಿಂದ ವೃಕ್ಷ ಹುಟ್ಟಿತೆ? ಅಥವಾ ವೃಕ್ಷದಿಂದ ಬೀಜ ಹುಟ್ಟಿತೆ? ಎಂದು ಕೇಳಿದರೆ ಪ್ರಶ್ನೆಯೇ ಉತ್ತರವಾಗಿ, ಉತ್ತರವೆ ಪ್ರಶ್ನೆಯಾಗಿ ಎಲ್ಲವೂ ಗೋಜಲಾಗುತ್ತದೆ. ಆದರೆ ದೇವರ ಲೋಕದಲ್ಲಿ ಹಾಗಿಲ್ಲ. ಉತ್ತರ ಬಹಳ ಸರಳ. ದೇವರು ಬೀಜವನ್ನು ಸೃಷ್ಟಿಸಿದ ಅಥವಾ ದೇವರು ವೃಕ್ಷವನ್ನು ಸೃಷ್ಟಿಸಿದ ಎನ್ನಬಹುದು.

ನಮ್ಮ ಧಾರ್ಮಿಕ ಕ್ಷೇತ್ರಗಳು ದೇವರೊಂದಿಗೆ ತಳುಕುಹಾಕಿಕೊಂಡಿವೆ. ಯಾರಾದರು ಸಾರ್ವಜನಿಕವಾಗಿ ಅವುಗಳನ್ನು ಪ್ರಶ್ನಿಸಿದಾಗ ಬೇರೆ ಬೇರೆ ರೀತಿಯ ಪ್ರತಿಕ್ರೀಯೆಗಳು ಬರುತ್ತವೆ. ಇದನ್ನು ನಮ್ಮೊಳಿಗಿನ ದೇವರು ಮತ್ತು ವಿಜ್ಞಾನ ನಿರ್ದೇಶಿಸುತ್ತವೆ. ಆದರೆ ಪ್ರಜಾಪ್ರಭುತ್ವದ ಆರೋಗ್ಯ ನಿಂತಿರುವುದು ಪಾರದರ್ಶಕತೆ ಮತ್ತು ಚರ್ಚೆಯ ಮೇಲೆ. ಚರ್ಚೆ ಮುಂದುವರಿಯಲು ಪ್ರಶ್ನೆ ಮುಖ್ಯ. ಆಗ ಕೇಳಲ್ಪಡುವ ಪ್ರಶ್ನೆಗಳು ಮತ್ತು ಉತ್ತರಗಳು ಆರೋಗ್ಯಕರವಾಗಿರಬೇಕು ಎಂದು ನಾವು ಆಶಿಸಬಹುದು ಅಷ್ಟೆ.