Tuesday, June 7, 2011

ಡಾ|| ಎನ್. ಆರ್. ನಾಯಕರ ಕಾವ್ಯಾನುಸಂಧಾನ

ಸರ್ವಾಂಗೀಣ ಚಿಂತನೆಯ ಅಪ್ಪಟ ಮಾನವಿಕ ಆವರಣದಲ್ಲಿ ಬರೆವ ಹಿರಿಯ ಜಾನಪದ ಸಂಶೋಧಕ, ಕವಿ ಡಾ|| ಎನ್. ಆರ್. ನಾಯಕ.

ಅವರ ಸಮಗ್ರ ಕಾವ್ಯಗಳ ಅನುಸಂಧಾನ ತಾ: ೧೨-೬-೨೦೧೧ ರಂದು ಹೊನ್ನಾವರದಲ್ಲಿದೆ.

ಒಂದು ದಿನದ ಮಟ್ಟಿಗಾದರೂ ನಮ್ಮ ವಿಳಾಸದಿಂದ, ಬಯೋಡೆಟಾಗಳಿಂದ ಮುಕ್ತರಾಗಿ ಹಗುರಾಗೋಣ.

ಯಾರಿಗೆ ಗೊತ್ತು? ದಂಡೆಯ ಮೇಲೆ ನಿಂತು ಶರಾವತಿಯನ್ನು ನೋಡಿದ ಖುಷಿ ಈ ಕಾರ್ಯಕ್ರಮದಲ್ಲೂ ಸಿಗಬಹುದು.

ಹೊನ್ನಾವರಕ್ಕೆ ಬನ್ನಿ.

Monday, June 6, 2011

ನಾನುಹಗಲಾದರೆ ಸಾಕು
ರಕ್ತ ಮಾಂಸಕ್ಕೆಲ್ಲ
ಚರ್ಮ ಹೊದಿಸಿ ಜನ್ಮ
ತಾಳುವ ನಾನು

ಹಬೆಯಾಡು ಬಿಸಿ ಕಾಫಿಯೊಂದಿಗೆ
ದಿನಪತ್ರಿಕೆಯ ಸುದ್ದಿ
ಹೀರುವ ನಾನು

ಬಚ್ಚಲಿನಲ್ಲಿ ಮುಚ್ಚಿಟ್ಟ
ಸೋಪಿನಂತೆ ಘಮ್ಮೆಂದು
ಸಮೆಯುತ್ತಾ
ಇಸ್ತ್ರಿಯಂಗಿಯ ತೊಟ್ಟು
ಓಡಾಡುವ ನಾನು

ಬಟವಾಡೆಯಾಗದ ಪತ್ರಗಳಿಗೆ
ವಿಳಾಸವಾಗುವ ನಾನು

ಗಡಬಡಸಿಕೊಂಡು ಓಡಾಡುವಾಗಲೂ
ಕನ್ನಡಿ ಕಂಡಲ್ಲೊಮ್ಮೆ
ಕ್ರಾಪು ತೀಡುವ ನಾನು

ಅಳುವ ನಾನು - ನಗುವ ನಾನು
ಮನದಲ್ಲೆ ಮಂಡಿಗೆ ಮೆಲ್ಲುವ ನಾನು

ಬಡವ ನಾನು - ಧನಿಕ ನಾನು
ಕಾಸಿಗೆಂದು ಜೇಬಿಗಿಳಿವ ನಾನು

ಅಲ್ಲು ನಾನು - ಇಲ್ಲು ನಾನು
ಯಾರೊ ಕರೆದರೆಂದು
ತಿರುಗಿನೋಡುವ ನಾನು

ದ್ವೇಷಿ ನಾನು - ಪ್ರಿಯ ನಾನು
ಯಾರ ನೆನಪಿನಲ್ಲೊ
ಮೈ ಮರೆವ ನಾನು

ಹಠಮಾರಿ ನಾನು - ಸಿಡುಕ ನಾನು
ಟ್ರಾಫಿಕ್ಕು ಸಿಗ್ನಲ್ಲುಗಳಲ್ಲಿ ನಿಂತು
ಬಣ್ಣ ಬಣ್ಣದ ಆಜ್ಞೆಗಳ ಪಾಲಿಸುವ
ವಿಧೇಯ ನಾನು

ಸಂಜೆಯಾಯಿತೆಂದರೆ ಮನೆಗೆ
ಫೋನು ಮಾಡಿ
ಆರಾಂ ಇದ್ದೇನೆ ಎಂದು
ನಂಬಿಸುವ ನಾನು

ಕತ್ತಲಾದರೆ ಸಾಕು
ವೈಶಂಪಾಯನದ ಕರಿಯಾಳದಿಂದೆದ್ದ
ಗುಳು ಗುಳು ಗುಳ್ಳೆಯಂತೆ ಮಾಯವಾಗುವ
ಬೇವಾರಿಸಿ ನಾನು.