Saturday, June 12, 2010

ಗೂಡು ಕಟ್ಟಲಿ ಜೇನು
ನಾವು ಹುಟ್ಟುವ ಮೊದಲೇ ನಮ್ಮ ಪರಕೀಯತೆಗಳು ನಿರ್ಧಾರವಾಗಿಬಿಡುತ್ತವೆ. ನಾವು ’ನಮ್ಮವರು’ ಎಂದುಕೊಂಡವರ ಜೊತೆಗೆ ಬಾಳದೇ ಹೋಗಬಹುದು. ನನ್ನೂರು ಎಂದುಕೊಂಡಲ್ಲಿ ಉಳಿಯದೇ ಹೋಗಬಹುದು. ಅಲ್ಲಿಂದಲೇ ಒಂದು ದೂರ ಸರಿಯುವಿಕೆ ಗೊತ್ತಾಗದಂತೆ ಆರಂಭವಾಗಿರುತ್ತದೆ. ಕಿಸೆಯ ತಳದಲ್ಲಿ ಎಂದೋ ಸಿಗುವ ಒಣಗಿದ ಊರ ದೇವರ ಪ್ರಸಾದ, ಕೆಲವೇ ಘಂಟೆಗಳ ಅಥಿತಿಯಂತೆ ಅಜ್ಜಿ - ತಾತನನ್ನು ಭೆಟ್ಟಿಯಾಗಿ ಬಂದದ್ದನ್ನು ನೆನಪಿಸಬಹುದು. ನಮ್ಮೂರಿನ ಜಾತ್ರೆಗಳು ನಡೆಯುವುದು, ಕಳಸಗಳು ಏಳುವುದು ನಮ್ಮ ಗೈರಿನಲ್ಲಿಯೇ ನಡೆಯುತ್ತದೆ. ನಮ್ಮ ಹೆಸರಿನ ಕಾಯಿಯೊಂದು ಒಡೆಯದೇ ಹಾಗೆ ಬಾಕಿ ಉಳಿಯುತ್ತದೆ.

ದೂರಸರಿಯುವಿಕೆ ಇಲ್ಲಿಗೇ ನಿಲ್ಲುವುದಿಲ್ಲ. ವಿಧ್ಯಾಭ್ಯಾಸಕ್ಕಾಗಿಯೋ, ಉದ್ಯೋಗಕ್ಕಾಗಿಯೋ ಹೆತ್ತವರಿಂದಲೂ ದೂರಸರಿಯುತ್ತೇವೆ. ಗೊತ್ತಿಲ್ಲದ ಜನರ ನಡುವೆ ಬಾಳುತ್ತೇವೆ. ಗೊತ್ತಿಲ್ಲದ ವ್ಯಕ್ತಿಗಳ ನಡುವೆ ಕುಳಿತು, ಗೊತ್ತಿಲ್ಲದವನಿಂದ ಊಟ ಬಡಿಸಿಕೊಂಡು ಹೊಟೇಲಿನಲ್ಲಿ ಊಟ ಮಾಡುತ್ತೇವೆ; ಯಾರ ಪ್ರ‍ೀತಿಯ ಒತ್ತಾಯವೂ ಇಲ್ಲದೆ. ಬರುವಾಗ ಯಾರಿಗೂ ’ಬರುತ್ತೇನೆ’ ಎಂದು ಹೇಳದೆ ಬರುತ್ತೇವೆ. ನಾವು ಬದುಕುವುದು ಬರಿಯ ಅನ್ನದಿಂದಲ್ಲ, ಅದರ ಹಿಂದಿನ ಪ್ರೀತಿಯಿಂದಲೂ ಎಂದು ಹೃದಯ ಚುಚ್ಚಿ ಹೇಳುವಾಗಲೂ ಯಾವುದೋ ಕೆಲಸವನ್ನು ನೆನಪಿಸಿಕೊಂಡು, ಅದೇ ಮುಖ್ಯವೆಂಬ ಸೋಗಿನೊಂದಿಗೆ ಗಡಬಡಿಸುತ್ತೇವೆ.

ಜಪಾನಿನ ಒಬ್ಬ ಪ್ರಸಿದ್ಧ ಓಟಗಾರ ೧೯೬೮ ರಲ್ಲಿ ಹೊಟೇಲಿನ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ತನ್ನ ಅಂತಿಮ ಪತ್ರದ ಒಕ್ಕಣೆಯಲ್ಲಿ "ನನ್ನ ಪ್ರೀತಿಯ ಅಪ್ಪ ಅಮ್ಮ, ನೀವು ನೀಡಿದ ಟ್ಯೊಟೆರೋ ಅನ್ನವನ್ನು ನಾನು ಬಹಳ ಖುಷಿಯಿಂದ ಉಂಡಿದ್ದೇನೆ" ಎಂದು ಆರಂಭಿಸಿದ್ದ. ಜಪಾನಿನ ಅತಿ ವಿಶಿಷ್ಟ ಸಾಹಿತಿಯಾದ ಯನುಸಾರಿ ಕವಬಾಟನನ್ನು ಇದು ಯಾವ ಮಟ್ಟಿಗೆ ತಟ್ಟಿತೆಂದರೆ, ಅವನು ಹೀಗೆ ಪ್ರತಿಕ್ರೀಯಿಸುತ್ತಾನೆ: "ಈ ಅತಿಭಾವುಕ ಎಂದೆನಿಸುವ ಪತ್ರದಲ್ಲಿ ಈತ ತೀರ ಸರಳವಾಗಿ ’ನಾನು ಖುಷಿಪಟ್ಟಿದ್ದೇನೆ’ ಎಂದು ಹೇಳಿಕೊಳ್ಳುವ ಈ ಪದಗಳು ಈತ ಬದುಕಿದ ಅಪ್ಪಟ ಬದುಕನ್ನು ಉಸಿರುತ್ತದೆ. ಆತ್ಮಹತ್ಯಾ ಒಕ್ಕಣೆಯ ಅರ್ಥವನ್ನು ಮೀರಿಸುವ ಒಂದು ತಾಳ ಈ ಪದಗಳಿಗಿದೆ. ಎಷ್ಟು ಸುಂದರ, ಘಾಢ ಮತ್ತು ವಿಷಾದಕರ.."

ನಾವು ಮನುಷ್ಯರು ನಿರೀಕ್ಷಿಸಿರದ ರೀತಿಯಲ್ಲಿ ಪ್ರೇಮಕ್ಕಾಗಿ, ಜೀವಂತ ಕ್ಷಣಗಳಿಗಾಗಿ ಹಸಿದಿರುತ್ತೇವೆ. ಆದರೆ ಬಹಳ ಬಾರಿ ಹೀಗಾಗುತ್ತದೆ. ನಾವು ತೀವ್ರವಾಗಿ ಅನುಭವಿಸಲೇಬೇಕಾದ ಕ್ಷಣಗಳನ್ನು ಯಾವುದೋ ಅವಸರದಲ್ಲಿ ಕಳೆದುಕೊಂಡು ಬಿಡುತ್ತೇವೆ. ಕನಸನ್ನು ಮಹತ್ವಾಕಾಂಕ್ಷೆಯನ್ನು ಬೆನ್ನಮೇಲೆ ಹೊತ್ತುಕೊಂಡು ಓಡಾಡುವ ನಾವು ಏನನ್ನೋ ಕಳೆದುಕೊಂಡವರಂತೆ ಕಂಗಾಲಾಗುತ್ತೇವೆ. ಇದೊಂದು ಬಾಯಿಯಲ್ಲಿ ಚಮಚೆಯನ್ನು ಹಿಡಿದು ಅದರಮೇಲೆ ಗೋಲಿಯನ್ನಿಟ್ಟು ವೇಗವಾಗಿ ಗುರಿ ತಲುಪುವ ಬಾಲ್ಯದ ಆಟದಂತೆ. ವೇಗವಾಗಿ ಗುರಿ ಸಾಗುವಾಗ ಗೋಲಿ ಕೆಳಗೆ ಬಿದ್ದರೆ, ಗುರಿ ಮುಟ್ಟಿಯೂ ಅದಕ್ಕೊಂದು ಅರ್ಥವಿಲ್ಲ.

ಸಾವಿಗಿಂತ ಬದುಕು ಮುಖ್ಯ ಎಂಬುದು ಒಪ್ಪತಕ್ಕ ವಿಚಾರ. ಬದುಕಬೇಕೆಂಬ ಪ್ರಜ್ಞಾಪೂರ್ವಕ ಹಠದಲ್ಲಿ ಏನೆಲ್ಲಾ ಜರುಗುತ್ತದೆ? ಎಲ್ಲೋ ಹುಟ್ಟಿ ಎಲ್ಲೋ ಬೆಳೆವ ನಾವು ಮತ್ತೆಲ್ಲೋ ಮನೆ ಕಟ್ಟುತ್ತೇವೆ. ಇನ್ನೆಲ್ಲೋ ನೆಲೆಸುತ್ತೇವೆ. ಹೊಟ್ಟೆ ಹೊರೆಯಲು ಇನ್ನೆಲ್ಲಿಗೋ ಹೋಗುತ್ತೇವೆ. ಹೀಗೆ ತನ್ನ ಊರು, ಭಾಷೆ, ಜಾತ್ರೆ, ಹಬ್ಬ, ನೆಂಟರಿಷ್ಟರನ್ನು ಕಳೆದುಕೊಂಡ ಒಂದು ತಲೆಮಾರೇ ಸೃಷ್ಟಿಯಾಗಿ ಹೋಗಿದೆ.

ಮನುಷ್ಯನ ವಿಕಾಸದಲ್ಲಿ ಪಾತ್ರ ವಹಿಸಿದ ಎರಡು ಮುಖ್ಯ ವಿಧಾನಗಳನ್ನು ಗಮನಿಸಬಹುದು. ಒಂದು ಸಾಮಾಜಿಕ ವಿಧಾನ. ಇನ್ನೊಂದು ಸಮುದಾಯ ವಿಧಾನ. ಸಮುದಾಯ ವಿಧಾನ ಪುರಾತನವಾದದ್ದು, ಆದರೆ ಸಾಮಾಜಿಕ ವಿಧಾನ ನಂತರ ಆವಿಷ್ಕಾರಗೊಂಡದ್ದು. ಈಗ ನಮ್ಮ ಬಳಿ ಹೊಸ ವರಸೆಗಳಿವೆ. ಜಾಗತೀಕರಣ ಜಗತ್ತನ್ನೆಲ್ಲ ಆವರಿಸಿದೆ. ನಾವು ಗ್ಲೋಬಲ್ ಇಕಾನಮಿಯ ಬಗ್ಗೆ ಮಾತನಾಡುತ್ತೇವೆ. ಇವೆಲ್ಲ ಸಾಮಾಜಿಕ ವಿಧಾನದ ಅವಕಾಶವನ್ನು ಹಿಗ್ಗಿಸಿವೆ. ಸಾಮಾಜಿಕ ಹಾಗು ಸಮುದಾಯ ಜೀವನಗಳು ಮನುಷ್ಯನ ಅಗತ್ಯಗಳಾಗಿರುವಾಗ ಅವು ಪರಸ್ಪರ ಪೂರಕವಾಗಿರುವುದೂ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಅವು ಹಾಗಿವೆಯೇ? ಇಲ್ಲ. ಸಾಮಾಜಿಕ ವಿಧಾನ, ಸಮುದಾಯ ವಿಧಾನವನ್ನು ಅಸ್ಥಿರಗೊಳಿಸುತ್ತಿದೆ. ದೊಡ್ಡ ಘಟಕಗಳಾಗಿ ಸ್ಥಾಪನೆಗೊಳ್ಳುವ ಸಾಮಾಜಿಕ ವಿಧಾನಗಳು ಒಂದೆಡೆಯಾದರೆ ಸಮುದಾಯಗಳು ತೀರಾ ಸಣ್ಣವು. ಆದರೆ ಅಸ್ಥಿತ್ವದಲ್ಲಿ ಸಂದಿಗ್ಧತೆ ಎದುರಾದರೆ ಆಘಾತವನ್ನು ತಾಳಿಕೊಳ್ಳಲು ಪ್ರಜ್ಞಾವಂತನೂ, ಒಬ್ಬಂಟಿಯೂ ಆದ ಮನುಷ್ಯ ಸಮುದಾಯವನ್ನು ಆಶ್ರಯಿಸುತ್ತಾನೆ.

ಕೈಗಾರಿಕಾ ಕ್ರಾಂತಿ ನಡೆಯುವ ಮೊದಲು ಪ್ರತಿಯೊಂದು ಸಮುದಾಯವೂ ಒಂದು ಉತ್ಪಾದನಾ ಘಟಕವೂ ಆಗಿತ್ತು. ಪ್ರತಿ ಘಟಕವು ಇನ್ನೊಂದರೊಂದಿಗೆ ಪೂರಕ ಸಂಬಂಧವನ್ನು ಹೊಂದಿತ್ತು. ಯಂತ್ರಯುಗ ಈ ಎಲ್ಲವನ್ನು ನಾಶಮಾಡಿತು. ಇಂದು ನಮ್ಮ ಜೀವನವನ್ನು ನಿಯಂತ್ರಿಸುವುದು ಸ್ಥಳೀಯ ಸಂಗತಿಗಳಲ್ಲ, ಬದಲಾಗಿ ಜಾಗತಿಕ ವಿದ್ಯಮಾನಗಳು. ತಾಂತ್ರಿಕ ಬೆಳವಣಿಗೆ ಜ್ಯಾಮಿತಿ ವೇಗದಲ್ಲಿದೆ. ಸೈಬರ್ ಕ್ರಾಂತಿ ಎಂದು ನಾನು ಕರೆಯುವ ಘಟನೆ ಮಿದುಳು, ಮಾಹಿತಿ, ಸಂವಹನ ಮುಂತಾದ ವಿಷಯಗಳನ್ನೊಳಗೊಂಡು ಸಾಕಷ್ಟು ಸಂಕೀರ್ಣವಾಗಿದೆ. ಈ ವೇಗಕ್ಕೆ ಹೊಂದಿಕೊಳ್ಳುವುದು ಕಷ್ಟದ ಕೆಲಸವೂ ಆಗಿದೆ. ನಮ್ಮದು ಒಂದು ರೀತಿಯಲ್ಲಿ ಚಂದ್ರಗ್ರಹಕ್ಕೆ ಹೊರಟ ನಾಯಿಯಂಥ ಪರಿಸ್ಥಿತಿ. ಸುತ್ತಲೂ ಉನ್ನತವಾದದ್ದೂ, ತಾಂತ್ರಿಕವಾದದ್ದೂ ಜರುಗುವಾಗ ತಾನು ಮೇಲಕ್ಕೇರುತ್ತಿದ್ದೇನೆ ಎಂಬುದನ್ನು ಜೀರ್ಣಿಸಿಕೊಳ್ಳಲು ಬೇಕಾದ ಕಲ್ಪನಾಶಕ್ತಿ, ಮನೋವೇಗ, ಯೋಚನೆಗಳೆಲ್ಲ ಇನ್ನಷ್ಟೇ ಸಿದ್ಧಿಸಬೇಕಿದೆ.

ಊರ ಬಸ್ಸು ಹತ್ತಿ ಮನೆಗೆ ಹೊರಟಾಗ, ಊರು ಸಮೀಪಿಸುತ್ತಿದ್ದಂತೆ ಗಿಡ, ಮರ, ಗುಡ್ಡ, ಗದ್ದೆಗಳನ್ನು, ಬದಲಾದ ಅಥವಾ ಬದಲಾಗದ ಪರಿಸರವನ್ನು ಹಳೆಯ ನೆನಪುಗಳೊಂದಿಗೆ ಮೆಲುಕುವುದು ಒಂದು ಹಿತವಾದ ಅನುಭವ. ಗದ್ದೆಗಳ ನಡುವೆ ಮೇಯುತ್ತಿರುವ ದನಗಳ ಸಂಗ ಮಾಡುವ ಕೊಕ್ಕರೆಗಳನ್ನು ಬಾಲ್ಯದ ಬೆರಗುಗಣ್ಣಿನಿಂದ ನೋಡಿದ್ದೆ. ಆ ದೃಶ್ಯವೇ ಮತ್ತೆ ಕಣ್ಣಮುಂದೆ ಬಂದಾಗ ಇನ್ನೂ ಮಾಸಿರದ ಆ ಸ್ನೇಹವನ್ನು ನೋಡಿ ಜಾಗತೀಕರಣ ಮುಟ್ಟಲಾಗದ ಎಷ್ಟೊಂದು ವಿಷಯಗಳು ಈ ಪ್ರಪಂಚದಲ್ಲಿವೆ ಎಂದೆನಿಸಿತು. ಇದೊಂದು ಸ್ಮೃತಿ ವ್ಯಸನ ಎಂದು ಯಾರಾದರೂ ಅಂದುಕೊಂಡರೂ ಅಡ್ಡಿಯಿಲ್ಲ.

ನಾವು ಕನಸು ಕಾಣಬೇಕು. ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಸಾಧ್ಯವೇ? ನಾವು ಬದುಕಬೇಕೆಂದರೆ ಆ ಕನಸುಗಳೊಳಗಿಷ್ಟು ಸಿಹಿ ಇರಬೇಕು, ಜೇನಿನಂತೆ. ಜೇನುಗಳು ಹಾರುತ್ತವೆ ಹೂವಿಂದ ಹೂವಿಗೆ; ವನದಿಂದ ವನಕ್ಕೆ. ಹೀರಿ ಮಕರಂದವನ್ನು, ಮರಳುತ್ತವೆ ಗೂಡಿಗೆ. ತನ್ನ ಪುಟ್ಟ ಕೋಶದೊಳಗಿದ್ದೂ ಇಡೀ ಗೂಡಿಗೂ ಸಲ್ಲುತ್ತವೆ. ಅಂಥ ಮಾಂತ್ರಿಕ ಶಕ್ತಿ ನಮಗೂ ಸಿದ್ಧಿಸಲಿ. ಗೂಡು ಕಟ್ಟಲಿ ಜೇನು. ನಾವು ಈ ಭಯಂಕರ, ಅರ್ಥಹೀನ ವ್ಯವಸ್ಥೆಯ ವಿರುದ್ಧ ಕನಸು ಕಾಣುವುದು ತಪ್ಪೇನು?