Sunday, April 25, 2010

Happily Un-Married(?)


ಇಪ್ಪತ್ತೊಂದನೆ ಶತಮಾನದ ಭಾರತದಲ್ಲಿ ಸಮಸ್ಯೆಯಾಗಿರುವುದು ವಿಚ್ಛೇದನ ಅಲ್ಲ; ವಿವಾಹ. ಯಾವುದು ನಮ್ಮ ಕೌಟುಂಬಿಕ ಮೌಲ್ಯಗಳನ್ನು ಇಷ್ಟು ಕಾಲ ಪೋಷಿಸಿತೋ ನಾವದರ ನಿರಾಕರಣ ಸ್ಥಿತಿಗೆ ತಲುಪ್ಪಿದ್ದೇವೆಯೆ? ಹೀಗೊಂದು ಪ್ರಶ್ನೆ ಗಂಭೀರವಾಗಿ ಕಾಡಲು ಶುರುವಾಗಿದ್ದು ಮಾರ್ಚ್ ೨೩, ೨೦೧೦ ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕ್ರ‍ಷ್ಣನ್, ನ್ಯಾಯಮೂರ್ತಿಗಳಾದ ದೀಪಕ್ ವರ್ಮಾ, ಬಿ. ಎಸ್. ಚೌಹಾಣ್ ಅವರನ್ನೊಳಗೊಂಡ ಪೀಠ, ಚಿತ್ರನಟಿ ಖುಷ್ಬು ಪ್ರಕರಣವೊಂದರ ಕುರಿತಾಗಿ ತೀರ್ಪು ನೀಡುವಾಗ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಪ್ರಾಪ್ತ ವಯಸ್ಕರಿಬ್ಬರು ’ಕೂಡಿ’ ಬಾಳಲು ಬಯಸಿದರೆ ತಪ್ಪೇನು? ಅದೇನು ಅಪರಾಧವೇ? ಪುರಾಣಗಳ ಪ್ರಕಾರ ಕ್ರ‍ಷ್ಣ - ರಾಧೆ ಒಟ್ಟಿಗೆ ಬಾಳ್ವೆ ನಡೆಸುತ್ತಿದ್ದರು. ಒಟ್ಟಿಗೆ ಬಾಳುವುದು ಅಪರಾಧವಲ್ಲ ಮತ್ತು ಅಪರಾಧವಾಗುವುದಕ್ಕೂ ಸಾಧ್ಯವಿಲ್ಲ. ಕೂಡಿ ಬಾಳುವುದನ್ನು ಮತ್ತು ವಿವಾಹ ಪೂರ್ವ ಲೈಂಗಿಕ ಸಂಭಂಧವನ್ನು ಯಾವ ಕಾನೂನೂ ತಡೆಯುವುದಿಲ್ಲ. ನಮ್ಮ ಸಂವಿಧಾನದ ೨೧ನೇ ವಿಧಿ ಎಲ್ಲರಿಗೂ ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನೀಡಿದೆ. ದಯವಿಟ್ಟು ಹೇಳಿ, ಯಾವ ಕಾನೂನಿನಡಿಯಲ್ಲಿ ಖುಷ್ಬು ಹೇಳಿಕೆ ಅಪರಾಧವೆನುಸತ್ತದೆ? ಇತ್ಯಾದಿ.

ಒಂದೆಡೆ ಪ್ರಾಪ್ತ ವಯಸ್ಕ ಗಂಡು-ಹೆಣ್ಣು ವಿವಾಹ ಪೂರ್ವದಲ್ಲೇ ಲೈಂಗಿಕತೆಯಲ್ಲಿ ತೊಡಗುವುದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೆ ಇನ್ನೊಂದೆಡೆ ಗಂಡು-ಹೆಣ್ಣು ಇಚ್ಛಿಸಿ ಕೂಡಿಕೊಳ್ಳುವ ವಯೋಮಾನವನ್ನು ಸರಕಾರ ೧೮ ರಿಂದ ೧೬ಕ್ಕೆ ಇಳಿಸಿದೆ. ವಿವಾಹಪೂರ್ವ ಲೈಂಗಿಕತೆಯ ವಿಷಯಕ್ಕೆ ಬಂದರೆ, ಮಹಾ ನಗರಗಳಲ್ಲಿ, ಸಣ್ಣ ನಗರಗಳಲ್ಲಿ ಹಾಗು ಹಳ್ಳಿಗಳಲ್ಲಿ ಇದರ ಸ್ವೀಕರಣ ಸ್ಥಿತಿ ಭಿನ್ನ-ಭಿನ್ನವಾಗಿದೆ. ಮಹಾ ನಗರಗಳಲ್ಲಿ ರಾಜಾರೋಷವೆನಿಸುವ ಇದು, ಇತರೆಡೆ ಕಳ್ಳ ಪ್ರಣಯದ ಮಟ್ಟದಲ್ಲಿದೆ. ಇದನ್ನು ಪರವಹಿಸುವ, ವಿರೋಧಿಸುವ ತರಹೇವಾರಿ ಮಾಧ್ಯಮಗಳು, ಸ್ವಯಂ ಘೋಷಿತ ಬುದ್ಧಿಜೀವಿಗಳು, ನೈತಿಕ ಪೊಲೀಸರು ಸುದ್ದಿಯಲ್ಲಿ ಇದ್ದಾರೆ. ಈಗೇನಿದ್ದರು ಮೌಲ್ಯಗಳ ಸವಕಳಿ ಮಾತ್ರ (Values are fast eroding) ಎಂದು ಗೋಗರೆಯುವವರಿದ್ದಾರೆ. ಶಾಸ್ತ್ರ-ಧರ್ಮಗಳೆಂದರೆ ನಗುವವರಿದ್ದಾರೆ.ವಿವಾಹ, ಕೌಟುಂಬಿಕ ವ್ಯವಸ್ಥೆ ಇತ್ಯಾದಿಗಳನ್ನು ಸಮುದ್ರ ತೀರದ ಕಸದಂತೆ ನೋಡುವವರಿದ್ದಾರೆ. ಆಗೆಲ್ಲ ಗೆಳೆಯ ಕಳುಹಿಸಿದ ಇ-ಮೇಲ್ ನ ಚಿತ್ರವೊಂದು ನೆನಪಾಗುತ್ತದೆ. ಅದು ನದಿಯೊಂದು ಸಮುದ್ರವನ್ನು ಸೇರುವ ಚಿತ್ರ. ಉಪ್ಪಿನ ಸಮುದ್ರ ನದಿಯನ್ನು ಕೆಣಕುವಂತೆ ಕೇಳುತ್ತದೆ "ಓ ಸಿಹಿನೀರೆ ನೀನೆಲ್ಲಿಯವರೆಗೆ ನನ್ನನ್ನು ಸೇರುತ್ತಿರುವೆ?" ಅದಕ್ಕೆ ನದಿ ಉತ್ತರಿಸುತ್ತದೆ "ಎಲ್ಲಿಯವರೆಗೆ ನಿನ್ನ ಉಪ್ಪುತನ ಕಳೆಯುವುದಿಲ್ಲವೋ ಅಲ್ಲಿಯವರೆಗೆ."

ವಿವಾಹೇತರ, ವಿವಾಹಪೂರ್ವ, ವಿವಾಹ ಬಾಹಿರ ಇತ್ಯಾದಿ ಶಬ್ದಗಳನ್ನು ಗಮನಿಸಿದಾಗ ಸಂಬಂಧಗಳನ್ನು ವಿವಾಹದ ಮಾನದಂಡದ ಮೇಲೆ ವಿಂಗಡಿಸಲ್ಪಟ್ಟಿರುವುದು ಸ್ಪಷ್ಟವಾಗುತ್ತದೆ. ತೀರ ಹಿಂದಕ್ಕೆ ಅಂದರೆ ಮನುಷ್ಯನ ವಿಕಾಸದ ಆದಿಯಲ್ಲಿ ವಿವಾಹವೆಂಬ ಒಂದು ಸಂಬಂಧ ಇರದಂಥ ಕಾಲವೊಂದು ಇದ್ದಿರಬಹುದು. ಆದರೆ ಇತಿಹಾಸದ ಆರಂಭದಿಂದಲೇ ವಿವಾಹದ ಬಗ್ಗೆ ಒಂದಿಲ್ಲೊಂದು ಮಾಹಿತಿ ಇರುವುದನ್ನು ಕಾಣುತ್ತೇವೆ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಇದರ ಬೇರೆ ಬೇರೆ ಆಚರಣೆಗಳನ್ನು ಕಾಣುತ್ತೇವೆ. ಎಲ್ಲಾ ಜೀವಂತ/ಮ್ರ‍ತ ಭಾಷೆಗಳಲ್ಲಿ ಕೌಟುಂಬಿಕ ಸಂಬಂಧಗಳನ್ನು ಸೂಚಿಸುವ ಪದಗಳನ್ನು ಕಾಣುತ್ತೇವೆ. ಎಲ್ಲಾ ಸಮಾಜಗಳಲ್ಲೂ ವಿವಾಹಕ್ಕೆ ಸಂಬಂಧಿಸಿದ ಕಟ್ಟು ಕಟ್ಟಳೆಗಳಿವೆ. ಕೆಲವೆಡೆ ಏಕಪತ್ನಿತ್ವ ಮಾತ್ರವಾದರೆ ಕೆಲವೆಡೆ ಬಹುಪತ್ನಿತ್ವವೂ ಸಾಧ್ಯ. ಕೆಲವೆಡೆ ವಿಧವಾ ವಿವಾಹ ಸಮಾಜಿಕ ಕ್ರಾಂತಿಯನ್ನು ಮಾಡಿದರೆ ಕೆಲವೆಡೆ ಸಗೋತ್ರ ವಿವಾಹ ಅಪರಾಧ. ಆದರೆ ಈಜಿಫ್ಟಿನ ಫೆರೋಗಳು ಒದಹುಟ್ಟಿದವರನ್ನು ವಿವಾಹವಾಗುತ್ತಿದ್ದರು. ಫೆರೋ ನಂತರ ಬಂದ ಕ್ಲಿಯೋಪಾತ್ರ ತನ್ನ ಸೋದರರನ್ನು ಮದುವೆಯಾಗಿದ್ದಳು. ಇವೆಲ್ಲ ರಾಜಕೀಯ ಕಾರಣಕ್ಕಾಗಿ ಇದ್ದಿರಬಹುದು. ನಾವು ಪುರಾಮಾನವ ಶಾತ್ರಜ್ಞ ಲೆವಿ ಸ್ಟ್ರೌಸ್ ನ ಹೇಳಿಕೆಯನ್ನು ಗಮನಿಸಿದರೆ ಇದೊಂದು ಹೆಣ್ಣುಗಳ ಚಲಾವಣಾ ಪದ್ಧತಿ ಎನಿಸುತ್ತದೆ. ಅವನ ಪ್ರಕಾರ ಹೆಣ್ಣುಗಳ ’ಚಲಾವಣೆ’ಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಒಂದು ’ಆರ್ಥಿಕ ವ್ಯವಸ್ಥೆ’ಯೇ ವಿವಾಹ. ಏಕೆಂದರೆ ಸಗೋತ್ರದೊಳಗೇ ವಿವಾಹವಗುವುದಾದರೆ ಹೆಣ್ಣುಗಳು ಕೆಲವೊಮ್ಮೆ ಸಿಗಬಹುದು ಅಥವಾ ಸಿಗದೇ ಹೋಗಬಹುದು. ವಿಗೋತ್ರದಲ್ಲಿ ವಿವಾಹವಾಗುವಾಗ ಈ ಸಮಸ್ಯೆ ಇಲ್ಲ. ಇವೆಲ್ಲವುಗಳನ್ನು ಮೀರಿ ಭಾರತೀಯ ಸಂಸ್ಕ್ರತಿ ವಿವಾಹಕ್ಕೊಂದು ಪವಿತ್ರ ಆಚರಣೆಯ ಸ್ಥಾನ ನೀಡಿದೆ. ನಮ್ಮ ಕುಟುಂಬ ಪದ್ಧತಿ ವಿವಾಹದ ಆಧಾರದ ಮೇಲೆ ನಿಂತಿದೆ.

ವಿವಾಹದ ಇನ್ನೊಂದು ಮುಖವೇ ವಿಚ್ಛೇದನ. ಇದೂ ಕೂಡಾ ನಮ್ಮ ಸಾಂಪ್ರದಾಯಿಕ ಸಮಾಜದ ಕೆಂಗಣ್ಣಿಗೆ ಗುರಿಯಾದದ್ದೇ. ಇಂದು ಶೇಕಡ ೫೦ ಕ್ಕಿಂತಲೂ ಹೆಚ್ಚು ಮಧ್ಯವಯಸ್ಕ ಪಾಶ್ಚಾತ್ಯರು ಒಂದಿಲ್ಲೊಂದು ಕಾರಣಕ್ಕೆ ವಿಚ್ಛೆದಿತರೇ ಆಗಿದ್ದಾರೆ. ಆದರೆ ಕ್ರಿಶ್ಚಿಯಾನಿಟಿ ಒಂದು ಕಾಲಕ್ಕೆ ವಿಚ್ಛೇದನವನ್ನು ವಿರೋಧಿಸಿದ್ದೇ ಅದು ಬೇರೆ ಬೇರೆ ಪಂಗಡಗಳಾಗಿ ಭಾಗವಾಗುವುದಕ್ಕೂ ಕಾರಣವಾಯಿತು. ೧೬ ನೇ ಶತಮಾನದ ಇಂಗ್ಲೆಂಡ್ ನ ದೊರೆ ಎಂಟನೇ ಹೆನ್ರಿಗೆ ಅಣ್ಣನ ವಿಧವೆ ಕ್ಯಾಥರೀನ್ ಜೊತೆ ವಿವಾಹವಾಗಿತ್ತು. ಆದರೆ ಆನ್ ಬೋಲಿನ್ ಎಂಬವಳಲ್ಲಿ ಅನುರಕ್ತನಾಗಿದ್ದ ದೊರೆಗೆ, ವಿಚ್ಛೇದನ ಪಡೆಯಲು ಪೋಪ್ ಸಮ್ಮತಿಸಲಿಲ್ಲ. ಮುಂದೆ ಪೋಪ್ ನ್ನು ಧಿಕ್ಕರಿಸಿ ವಿಚ್ಛೇದನ ಪಡೆದ ಹೆನ್ರಿ ಆಂಗ್ಲಿಕನ್ ಚರ್ಚ್ ಹುಟ್ಟು ಹಾಕಿದನಲ್ಲದೆ ಅದಕ್ಕೆ ರಾಜನೇ ಪರಮಾಧಿಕಾರಿ ಎಂದು ಸಾರಿದ. ಇದು ಪಾಶ್ಚಾತ್ಯರ ಕತೆಯಾದರೆ, ಭಾರತವೂ ಈಗ ಮೊದಲಿನ ಹಿಂಜರಿಕೆಗಳನ್ನು ಬಿಟ್ಟು ವಿಚ್ಛೇದನವನ್ನು ಸಹಜವೆಂಬಂತೆ ಸ್ವೀಕರಿಸತೊಡಗಿದೆ.

Live-in Relationship ವಿಷಯಕ್ಕೆ ಬಂದರೆ ಇದು ಭಾರತೀಯ ಸಾಮಾಜಿಕ ಜೀವನವನ್ನು ಪ್ರವೇಶಿಸಿರುವುದು ಯಾವಾಗ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಆದರೆ ಹೆಚ್ಚಾಗಿ ಕಣಿಸಿಕೊಳ್ಳುತ್ತಿರುವುದು ಜಾಗತೀಕರಣದ ನಂತರವೇ. ನಮ್ಮ ಸಮಾಜದಲ್ಲಿ ಇಂಥ ಸಂಬಂಧದ ಕಲ್ಪನೆ ಹಿಂದೆ ಇಲ್ಲದಿರುವುದು, ಕನ್ನಡದಲ್ಲಿ ಇದಕ್ಕೊಂದು ಸಮಾನಾಂತರ ಪದ ಬಳಕೆಯಲ್ಲಿರದಿರುವುದಕ್ಕೆ ಕಾರಣವಾಗಿರಬಹುದು. ಬಹುಶಃ ಸಹ ಬಾಳುವೆ ಇದಕ್ಕೆ ಹತ್ತಿರವಾದ ಪದ ಎನ್ನಬಹುದು. ಇದೂ ಒಂದು ಲಗ್ನೇತರ ಸಂಬಂಧವಾಗಿರುವುದರಿಂದ ವಿವಾಹ ಬಾಹಿರ ಸಂಬಂಧಕ್ಕೂ ಇದಕ್ಕೂ ಇರುವ ವ್ಯತ್ಯಾಸವೂ ನಮಗೆ ಸ್ಪಷ್ಟವಾಗಿ ಗೊತ್ತಿರಬೇಕು. ವಿವಾಹ ಬಾಹಿರ ಸಂಬಂಧ ವ್ಯಕ್ತಿ ತನ್ನ ಪತಿ/ಪತ್ನಿಯ ಹೊರತಾಗಿ ಇರಿಸಿಕೊಂಡ ಸಂಬಂಧವಾಗುತ್ತದೆ. ಆದರೆ Live-in Relationship ಎಂದರೆ ವಿವಾಹದ ನಿರಾಕರಣೆ. ವಿವಾಹವಾಗದೇ ಪತಿ ಪತ್ನಿಯಂತೆ ಬಳ್ವೆ ಮಾಡುವಿಕೆ. ಸಧ್ಯಕ್ಕೆ ದೊಡ್ಡ ನಗರಗಳಲ್ಲಿ ಮೇಲ್ ಸ್ಥರದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿದ್ದರೂ ಇದು ಕ್ರಮೇಣ ಮೇಲ್ ಮಧ್ಯಮ ವರ್ಗವನ್ನೂ ವ್ಯಾಪಿಸುತ್ತಿದೆ. ಪಶ್ಚಿಮದಲ್ಲಿ ಇದರ ಕಲ್ಪನೆ ಎಂದು ಆರಂಭವಾಗಿರಬಹುದು ಎಂಬ ಜಾಡು ಹಿದಿದು ಹೊರಟರೆ, ವಿಷಯ ಇನ್ನಷ್ಟು ರೋಚಕವಾಗಿರುವುದನ್ನು ಕಾಣುತ್ತೇವೆ. ಪಾಶ್ಚಾತ್ಯರಲ್ಲಿ ಈ ಕಲ್ಪನೆ ಹುಟ್ಟುವ ಮೊದಲೇ ಅಂದರೆ ಕಡು ಸಾಂಪ್ರದಾಯಿಕ ವಿಕ್ಟೋರಿಯನ್ ಯುಗದ
ಕೊನೆಯ ಘಟ್ಟದಲ್ಲಿ(೧೮೯೫) ಆ ಯುಗದ ಪ್ರಸಿದ್ಧ ಕಾದಂಬರಿಕಾರ ಥಾಮಸ್ ಹಾರ್ಡಿ Jude the Obscure (ಅಜ್ಞಾತ ಜ್ಯೂಡ್)ಎಂಬ ಕಾದಂಬರಿ ಬರೆದ. ಸ್ವತಃ ವಿವಾಹ ಜೀವನದಲ್ಲಿ ಅತ್ರ‍ಪ್ತನಾಗಿದ್ದ ಈತ ಲಗ್ನೇತರ ದಂಪತಿಗಳ ಕಲ್ಪನೆಯನ್ನು ಈ ಕಾದಂಬರಿಯ ಮೂಲಕ ಜಗತ್ತಿಗೆ ಕೊಟ್ಟ. ಕಥಾನಾಯಕ ಜ್ಯೂಡ್ ಬಾಲ್ಯವನ್ನು ಅನಾಥನಂತೆ ಕಷ್ಟದಲ್ಲಿ ಕಳೆಯುತ್ತಾನೆ. ಉನ್ನತ ಶಿಕ್ಷಣ ಪಡೆದು ದೊಡ್ಡ ವಿಧ್ವಾಂಸನಾಗಿ ಚರ್ಚಿನಲ್ಲಿ ದೊಡ್ಡ ಸ್ಥಾನ ಪಡೆಯಬೇಕೆಂಬ ಹಂಬಲದಿಂದ ಯುನಿವರ್ಸಿಟಿ ನಗರಕ್ಕೆ ಬರುತ್ತಾನೆ. ಅಲ್ಲಿ ಹಳೆ ಚರ್ಚುಗಳ ರಿಪೇರಿ ಕೆಲಸದಲ್ಲಿ ತೊಡಗಿರುವಾಗ ಅವನಿಗೆ ಸ್ಯೂ(ಸೂಸನ್ನಾ)ಳ ಪರಿಚಯವಾಗುತ್ತದೆ. ಸ್ಯೂ ಒಂದರ್ಥದಲ್ಲಿ ಜ್ಯೂಡ್ ನ ವಿರುದ್ಧವಾದ ಚಿಂತನೆಗಳನ್ನು ಬೆಳೆಸಿಕೊಂಡವಳು. ಚರ್ಚಿನಲ್ಲಾಗಲೀ ಅದಕ್ಕೆ ಸಂಬಂಧಿಸಿದ ಸಾಹಿತ್ಯದಲ್ಲಾಗಲೀ ಅವಳಿಗೆ ಆಸಕ್ತಿ ಇಲ್ಲ. ಅವಳ ಆಸಕ್ತಿ ಏನಿದ್ದರೂ ಕ್ರಿಸ್ತಪೂರ್ವ ಗ್ರೀಕ್, ಲ್ಯಾಟಿನ್ ಸಾಹಿತ್ಯದಲ್ಲಿ. ಪ್ಲೆಟೋ, ವಾಲ್ಟೇರ್, ಹಾಬ್ಸ್ ಮೊದಲಾದ ಚಿಂತಕರ ತತ್ವಗಳನ್ನು ಓದಿ ಮೆಚ್ಚಿಕೊಂಡವಳು. ಆದರೂ ಇಬ್ಬರೂ ಭಾವನೆಯಿಂದ ಹತ್ತಿರವಾಗುತ್ತಾರೆ. ಪ್ರೀತಿಯ ಕುರಿತಾಗಿ ಸ್ಯೂ ಎಷ್ಟು ಸೂಕ್ಷ್ಮ ಮನಸ್ಸಿನವಳೆಂದರೆ ಜ್ಯೂಡ್ ನ ಕುರಿತಾದ ತನ್ನ ಒಲುಮೆಯನ್ನು ಮದುವೆಯಂಥ ಬಂಧನದಲ್ಲಿ ’ಕಲುಷಿತ’ಗೊಳಿಸುವುದಕ್ಕೆ ಅವಳು ತಯಾರಿರುವುದಿಲ್ಲ. ಇಲ್ಲಿಂದ ಮುಂದೆ ಕಥೆಯನ್ನು ವಿಷಮ ವಿವಾಹಗಳ ಸುಳಿಗೆ ಸಿಲುಕಿಸಿ, ವಿವಾಹ ಪದ್ಧತಿಯ ವಿರುದ್ಧ ಶಂಕೆ ಏಳುವಂತೆ ಮಾಡುತ್ತಾನೆ ಹಾರ್ಡಿ. ಬಂಧವಾಗಿರಬೇಕಾದ ವಿವಾಹ ಬಂಧನವಾಗುವುದನ್ನು ಅವನು ಪ್ರತಿಭಟಿಸುತ್ತಾನೆ. ಇಷ್ಟೇ ಅಲ್ಲ ಕಾದಂಬರಿಯಲ್ಲಿ ಬೆರಗುಗೊಳಿಸುವ ಇನ್ನೊಂದು ಮಾತೂ ಬರುತ್ತದೆ. ತನ್ನ ಮಕ್ಕಳ ತಂದೆ ಯಾರಾಗಬೇಕು ಎನ್ನುವುದು ಹುಡುಗಿ ತನ್ನ ಲಂಗದ ಜರಿ ಹೇಗಿರಬೇಕೆಂದು ನಿರ್ಧರಿಸುವಷ್ಟೇ ಖಾಸಗಿ ಎನ್ನುತ್ತಾನೆ. ಇದು ಭಾರತೀಯ ಸಂಧರ್ಭದಲ್ಲಿ Live-in Relationship ಗಳ ಹೊಸ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ಈ ಸಂಬಂಧಗಳ ವ್ಯಾಪ್ತಿ, ಅಧಿಕಾರ, ಮಕ್ಕಳ ಮೇಲಿನ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳು ಇನ್ನಷ್ಟೇ ಕಾನೂನಿನ ವ್ಯಾಪ್ತಿಯಲ್ಲಿ ಸ್ಪಷ್ಟವಾಗಿ ನಿರ್ಧಾರಗೊಳ್ಳಬೇಕಿದೆ. ಪ್ರಶ್ನೆಗೆ ಉತ್ತರ ಒಂದೇ ಪರಿಹಾರವಲ್ಲ ಎಂಬುದನ್ನು ನಾವು ಒಪ್ಪಬೇಕು. ರಾಧಾ - ಕ್ರಷ್ಣರು ಒಟ್ಟಿಗೆ ಬಾಳ್ವೆ ಮಾಡುತ್ತಿದ್ದರು ಎಂದು ಪುರಾಣವನ್ನು ಉದಾಹರಿಸಿ ನ್ಯಾಯಾಲಯ ತೀರ್ಪು ನೀಡಿದೆ. ಅದು Live-in Relationship ಹೌದೆ ಅಥವಾ ಅಲ್ಲವೇ ಎಂಬ ಚರ್ಚೆ ಬದಿಗಿರಿಸಿ, ಪುರಾಣವನ್ನೇ ಪರಿಶೀಲಿಸಿದರೆ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸುವ ಉದಾಹರಣೆಯಾಗಿ ಕಾಣಿಸುವವಳು ರಾಮಾಯಣದ ಸೀತೆ. ರಾಮಾಯಣದಲ್ಲಿ ಮಹಿಳಾ ಶೋಷಣೆ ಇತ್ತು. ಆದರೆ ಸೀತೆ ಘರ್ಷಣೆಗಿಳಿಯಲಿಲ್ಲ. ತನ್ನ ಅಂತರಂಗ ಶುದ್ಧಿಯಿಂದ ಸಾತ್ವಿಕತೆ, ಪಾವಿತ್ರ್ಯಗಳನ್ನು ಬೆಳೆಸಿಕೊಂದರೆ ಯಾರೂ ತನ್ನನ್ನು ಮುಟ್ಟಲಾರರು ಎಂಬ ಆತ್ಮವಿಶ್ವಾಸ ಬೆಳೆಸಿಕೊಂಡಳು; ಸಫಲಳಾದಳು. ಅಶೋಕವನದಲ್ಲಿ ಸೀತೆಯನ್ನು ರಕ್ಷಿಸಿದ್ದು ರಾಮ ಲಕ್ಷ್ಮಣರೂ ಅಲ್ಲ, ಹನುಮಂತನೂ ಅಲ್ಲ. ಆಕೆಯನ್ನು ರಕ್ಷಿಸಿದ್ದು ನೈತಿಕತೆ (charecter).

Idealism ಮತ್ತು Fact ಗಳ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ನಮ್ಮ ಹಿಂದಿನ ತಲೆಮಾರಿನ ವಿವಾಹ ವಯೋಮಾನ ೧೮ ರ ಆಸುಪಾಸಿನದ್ದಾಗಿರುತ್ತಿತ್ತು. ತನ್ನ ಸಂಗಾತಿಯ ಬಗ್ಗೆ ಕನಸು ಕಾಣುವ ಮೊದಲೇ ವಿವಾಹವು ನಡೆದುಹೋಗುತ್ತಿತ್ತು. ಈಗ ವಿವಾಹದ ವಯೋಮಾನ ೨೫-೨೬ ಕ್ಕೆ ತಲುಪಿದೆ; ಅಥವಾ ಇನ್ನೂ ಹೆಚ್ಚಾಗಿದೆ. ಅಂದರೆ ಮುಂಚಿಗಿಂತ ೮-೧೦ ವರ್ಷದ ಅಂತರವಿದೆ. ಈ ಹಂತದಲ್ಲೇ ಶಿಕ್ಷಣದ ಪ್ರಮುಖ ಘಟ್ಟಗಳನ್ನು ದಾಟಬೇಕು. ಉದ್ಯೋಗ, ಸ್ವಾವಲಂಬನೆಯ ಹೆಸರಿನಲ್ಲಿ ಊರೂರು ಅಲೆದಾಟಗಳೂ ಆಗಬಹುದು. ಇದಲ್ಲ ಸರಿ; ಆದರೆ ಭಾವನಾತ್ಮಕ ಅಗತ್ಯ, ದೈಹಿಕ ಅಗತ್ಯ, companionship ಗಳ ಕಥೆ ಏನು? ಇದಲ್ಲದೆ ಬಾಹ್ಯ ಪ್ರಪಂಚದಿಂದ, ಮಾಧ್ಯಮಗಳಿಂದ, ಅಂತರ್ಜಾಲದಿಂದ, ಸಂಪರ್ಕ ಕ್ರಾಂತಿಯಿಂದ ನಾವೆಂಥ ಒತ್ತಡದಲ್ಲಿದ್ದೇವೆ? ಇಂಥ ಸಂದರ್ಭದಲ್ಲಿ ’ಸಂಯಮ’ ವಹಿಸಿ ಎಂಬ ’ನೀತಿ ಬೋಧೆ’ ಎಷ್ಟು ಪ್ರಸ್ತುತ?

ವಿವಾಹ, ಲೈಂಗಿಕತೆ, ವಿಚ್ಛೇದನ ಮುಂತಾದ ವಿಷಯಗಳು ವ್ಯಕ್ತಿಗತವೂ ಹೌದು, ಸಾಮಾಜಿಕವೂ ಹೌದು. ಒಂದು ಕಾಲದಲ್ಲಿ ಧರ್ಮ ತನ್ನ ತಿಳಿವಿಗೆ ತಕ್ಕಂತೆ ಅದನ್ನು ನಿಯಂತ್ರಿಸುತ್ತಿತ್ತು. ಆದರೆ ನಾವೀಗ ಇರುವುದೆಲ್ಲಿ? ಭಯಂಕರ, ಆಧುನಿಕೋತ್ತರ ಅಸ್ಥಿರ ಲೋಕದಲ್ಲಿ! ನಮಗೆ ಕೇಂದ್ರವೆಂಬುದು ಮಿಥ್ಯ. ನಿರಾಕರಣೆ ನಮ್ಮ ಯುಗಧರ್ಮ. ನ್ಯಾಯ, ನೀತಿಗಳೆಂಬ ಕಲ್ಪನೆಗಳು ಖಂಡಿತವಾಗಿಯೂ ಬದುಕಿಗೆ ಅಗತ್ಯವೇ. ಆದರೆ ಇವು ಸ್ವಯಂಪೂರ್ಣ ಹಾಗೂ ನಿರಪೇಕ್ಷ ಎಂಬುದನ್ನು ನಾವು ಒಪ್ಪದ ಕಾಲದಲ್ಲಿದೇವೆ. ಇಂತಹ ಸಂದರ್ಭದಲ್ಲಿ ನಾಗರಿಕ ನೀತಿ ಸಂಹಿತೆಗಳನ್ನು ಹೊತ್ತ ನ್ಯಾಯಾಲಯಗಳು ನಮ್ಮನ್ನು ನಿಯಂತ್ರಿಸಲು ಹೊರಟಿವೆ. ನಾವು ಯಾವುದನ್ನು ಕಾನೂನು ಎಂದು ತಿಳಿಯುತ್ತೇವೆಯೋ ಅದನ್ನು ಒಂದು ವ್ಯವಸ್ಥೆಯಲ್ಲಿ ಜಾರಿಗೆ ತರಲು ಸಾಧ್ಯವಾಗುವುದು ನಮ್ಮ ಸಾಮಾಜಿಕ ಅಥವಾ ಬಾಹ್ಯ ವರ್ತನೆಗೆ ಸಂಬಂಧಿಸಿದಂತೆ ಮಾತ್ರ. ಆಳುವ ವ್ಯವಸ್ಥೆಗೆ ಅಂತರಂಗದ ನಿಯಂತ್ರಣ ಸಾಧ್ಯವೇ?

ಸಮಾಜದಲ್ಲಿರುವ ನಾವು ಕೆಲವು ಸ್ವೀಕ್ರತ, ಸ್ಥಾಪಿತ ಗ್ರಹಿಕೆಗಳೊಂದಿಗೆ ಬದುಕುತ್ತೇವೆ. ಕೆಲವೊಮ್ಮೆ ಅಂಥಾ ಗ್ರಹಿಕೆಗಳ ತಳ ಅಲುಗಿದಾಗ ಕಂಗಾಲಾಗುತ್ತೇವೆ. ಪ್ರೀತಿ ಇಲ್ಲದ ದಾಂಪತ್ಯ ವ್ಯಭಿಚಾರಕ್ಕೆ ಸಮ ಎನ್ನುತಾನೆ ಥಾಮಸ್ ಹಾರ್ಡಿ. ವೈವಾಹಿಕ ಕಟ್ಟು ಕಟ್ಟಳೆಗಳಿಲ್ಲದ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಶುದ್ಧ ಪ್ರೀತಿಯ ಆದರ್ಶ ಸಮಾಜವನ್ನು ಅವನು ಕನಸುತ್ತಾನೆ. ಆದರೆ ವ್ಯಾವಹಾರಿಕ ಸಮಾಜದಲ್ಲಿ ಇದು ಸಾಧ್ಯವೇ? ಆದ್ದರಿಂದ ಕನಸುಗಳಂತೆ ಅಸಹಾಯಕತೆ, ದ್ವಂದ್ವಗಳನ್ನು ನಮ್ಮ ವಿಕಾಸದ ಭಾಗಗಳಾಗಿ ಸ್ವೀಕರಿಸಬಹುದಲ್ಲವೆ?