Sunday, February 21, 2010

ನಮ್ಮನ್ನೂ ಕಾಡುತ್ತಿದೆ The Fall of Icarus
ಸ್ವಚ್ಛವಾದ ಹುಚ್ಚೊಂದು ತೇಲುತ್ತಿತ್ತು
ತಿಳಿನೀರ ಕೊಳದಲ್ಲಿ ಹಳೆ
ಸರಸ್ವತಿ ಕ್ಯಾಲೆಂಡರಿನ ಹಂಸದಂತೆ...
(ಆಕರ: ಜಯಂತ ಕಾಯ್ಕಿಣಿಯವರ ’ರುದ್ರಪಾದದಲ್ಲಿ ಬಿಟ್ಟ ಹೆಜ್ಜೆ’)

ದಿನಾಲು ತುಸು ಅಸಡ್ಡೆಯಿಂದಲೇ ನೋಡುವ ಕ್ಯಾಲೆಂಡರಿನ ಚಿತ್ರವೊಂದು, ಇಂಥ ಸಾಲನ್ನು ಹುಟ್ಟಿಸಬಹುದಾದರೆ, ಕಲಾವಿದನ ಮನಸ್ಸಿನಿಂದ ಪಕ್ವವಾಗಿ ಬಂದ ಚಿತ್ರವೊಂದು ನೋಡುಗನ ಮನಸ್ಸಿನಲ್ಲಿ ಎಂಥಾ ಹುಯಿಲೆಬ್ಬಿಸಲಿಕ್ಕಿಲ್ಲ. ೧೬ನೇ ಶತಮಾನದಲ್ಲಿ ಬ್ರೂಗೆಲ್ ಎಂಬ ಕಲಾವಿದ ’The Fall of Icarus' ಎಂಬ ಚಿತ್ರ ಬಿಡಿಸಿದ. ಎರಡನೇ ಮಹಾಯುದ್ಧದ ಸಮಯದಲ್ಲಿ W H Auden ಬರೆದ Musee des Beaux Arts ಈ ಚಿತ್ರದಿಂದ ಪ್ರಭಾವಿತವಯಿತು. ಇದೇ ಚಿತ್ರ ನನ್ನನ್ನೂ ಕಾಡಿದ್ದಕ್ಕೆ ಈ ಲೇಖನ ಬರೆಯುತ್ತಿದ್ದೇನೆ.

ಚಿತ್ರ ಕತೆ ಹೀಗಿದೆ: ಡೆಡಾಲಸ್ ಎನ್ನುವ ಕುಶಲಕರ್ಮಿ ತನ್ನ ರಾಜನಿಗೆ ನಿರ್ಮಿಸಿಕೊಟ್ಟ ವ್ಯೂಹದಲ್ಲಿ ಮಗ ಇಕಾರಸ್ ನೊಂದಿಗೆ ಬಂಧಿಯಾಗುತ್ತಾನೆ. ಆದರೆ ರೆಕ್ಕೆಗಳನ್ನು ಸ್ರ‍ಷ್ಟಿಸಿ ಹಾರುವಂತೆ ಮಾಡಿ ಮಗನನ್ನು ಪಾರುಮಾಡಲು ಅವಕಾಶ ಮಾಡಿಕೊಡುತ್ತಾನೆ. ಬಾಲಕ ಇಕಾರಸ್ ಹಾರುತ್ತಾ ಹೋಗಿ ಸೂರ್ಯನಿಗೆ ಸಮೀಪಿಸುತ್ತಾನೆ. ಆಗ ರೆಕ್ಕೆಯ ಮೇಣ ಕರಗಿ ಸಮುದ್ರಕ್ಕೆ ಬೀಳುತ್ತಾನೆ. ಈ ದ್ರ‍ಶ್ಯವನ್ನು ಬ್ರೂಗಲ್ ಚಿತ್ರಿಸಿದ್ದಾನೆ. ಚಿತ್ರದಲ್ಲಿ ತನ್ನ ಪಾಡಿಗೆ ಉಳುಮೆ ಮಾಡುತ್ತಿರುವ ರೈತನಿದ್ದಾನೆ. ಅವನಿಗೆ ಇಕಾರಸ್ ಸಮುದ್ರಕ್ಕೆ ಬೀಳುತ್ತಿರುವ ಶಬ್ಧ ಕೇಳಿರಬಹುದು. ಆದರೆ ಅದು ಅವನಿಗೆ ಮುಖ್ಯವಾದ ನಷ್ಟವೇನಲ್ಲ. ಹಾಗೆಂದುಕೊಂಡು ತನ್ನ ಕಾಯಕದಲ್ಲಿ ಮುಂದುವರಿದಿದ್ದಾನೆ.. ಚಿತ್ರದಲ್ಲಿ ಶೀಮಂತವೆಂದು ತೋರುವ ಹಡಗೂ ತೇಲುತ್ತಿದೆ. ಇಕಾರಸ್ ಬೀಳುತ್ತಿರುವ ವಿರುದ್ಧ ದಿಕ್ಕಿಗೆ ಅದು ಸಾಗುತ್ತಿರುವಂತೆ ಕಾಣುತ್ತಿದೆ. ಆ ಹಡಗಿನಲ್ಲಿ ಇರುವವರು ಇಕಾರಸ್ ಬೀಳುತ್ತಿರುವ ಭೀಕರ ದ್ರ‍ಶ್ಯವನ್ನು ನೋಡಿರಬಹುದು. ಆದರೆ ಹಡಗಿಗೆ ತನ್ನದೇ ಆದ ಗೊತ್ತು ಗುರಿಗಳಿವೆ.

ಬಾಲಕನ ಅರ್ಥಹೀನ ಆಕಸ್ಮಿಕ ಸಾವು ಘಟಿಸುತ್ತಿರುವಾಗ ಸುತ್ತಲೂ ಎನೇನೋ ನಡೆಯುತ್ತಿದೆ. ಹಾಗೆಂದು ಚಿತ್ರದ ಜೀವಿಗಳಾರೂ ಕೇಡಿಗಳೂ ಅಲ್ಲ; ಅವರ ಮೇಲೆ ಯಾವ ನೇರ ಆರೋಪವೂ ಇಲ್ಲ. ಗಂಭೀರ ದಾರುಣ ಘಟನೆಯನ್ನು ತೀರಾ ಏನೂ ಆಗಿಲ್ಲ ಎನ್ನುವ ತಟಸ್ಥ ಧೋರಣೆಯೊಂದಿಗೆ ಸ್ವೀಕಾರಾರ್ಹವಾಗುವ ಚಿತ್ರಣ ಇಲ್ಲಿದೆ.

ಅತ್ಯಂತ ಅಪೂರ್ವವಾದ ಘಟನೆ ನಡೆಯುತ್ತಿರುವಾಗಲೇ ಮತ್ತೂ ಏನೇನೋ ಅಸಂಭದ್ಧಗಳು ನಡೆಯುತ್ತಿರಬಹುದು. ಯುದ್ಧ ಭೂಮಿಯಲ್ಲಿ ಶ್ರೀಕ್ರ‍ಷ್ಣ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡುತ್ತಿರುವ ಅಮ್ರ‍ತ ಘಳಿಗೆಯಲ್ಲೇ ಅರ್ಜುನನ ಕುದುರೆಗೆ ತುರುಕೆ ಕಾಡಬಹುದು. ಅದು ತನ್ನ ಮುದ್ದಾದ ಅಂಡನ್ನು ರಥದ ಗಾಲಿಗಳಿಗೆ ಉಜ್ಜುತ್ತಾ ಸುಖಿಸುತ್ತಿರಬಹುದು. ಮೇಲೆ ಆಗಸದಲ್ಲಿ ಯುದ್ಧ ಭೂಮಿಯ ರಕ್ತದ ವಾಸನೆ ಹಿಡಿದು ಹದ್ದುಗಳು ಹರಾಡುತ್ತಿರಬಹುದು. ಮಧ್ಯದಲ್ಲೆಲ್ಲೋ ನಾಯಿಯೊಂದು ತನ್ನ ಎಂದಿನ ನಾಯಿಪಾಡಿನೊಂದಿಗೆ ಓಡಾಡುತ್ತಿರಬಹುದು. ಇದು ಅರಗಿಸಿಕೊಳ್ಳಲು ಕಷ್ಟವಾದರೂ ಅಪೂರ್ವವೆಂದು ನಮಗೆ ಅನ್ನಿಸುವ ಘಟನೆ ಜರುಗುವುದು ನಿತ್ಯದ ನಿರಂತರತೆಯಲ್ಲೇ ಅಲ್ಲವೆ?


ಈಗ ನಾವು ಬದುಕುತ್ತಿರುವ ಕಾಲವನ್ನೇ ನೋಡಿ: ಅಪಘಾತವೊಂದು ಸಂಭವಿಸಿ ಕೈ ಕಾಲು ಮುರಿದುಕೊಂಡು ಬಿದ್ದ ವ್ಯಕ್ತಿಯ ಸುತ್ತ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಅಲ್ಲೇ ಸಣ್ಣ ಸಂಧಿಯನ್ನು ಹುಡುಕಿ ನಮ್ಮ ಗಾಡಿಯನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತೇವೆ. ಆ ಜನಜಂಗುಳಿಯಲ್ಲೇ ಭಿಕ್ಷುಕರ ಹುಡುಗಿ ತಾನು ಮಾರುವ ಕರ್ಚೀಫ್ ಕೊಳ್ಳುವಂತೆ ಕಾಡುತ್ತಾಳೆ. ಅಲ್ಲಿ ಉತ್ತರ ಕರ್ನಾಟಕದ ಮಂದಿ ನೆರೆ ಹಾವಳಿಯಲ್ಲಿ ತತ್ತರಿಸಿದ್ದನ್ನು ನಾವು ಕಮರ್ಷಿಯಲ್ ಬ್ರೇಕ್ ಗಳ ಮಧ್ಯದಲ್ಲಿ ಮಾಧ್ಯಮದಲ್ಲಿ ನೋಡುತ್ತೇವೆ. ಹೀಗೆ ಬ್ರೇಕ್ ಬಂದಾಗ ಶಾರೂಖ್ ಖಾನ್ ಶಾಂಪುವನ್ನು, ಐಶ್ವರ್ಯ ರೈ ಸಾಬೂನನ್ನು, ಸಚಿನ್ ಬಿಸ್ಕೀಟನ್ನು ಮಾರುತ್ತಾರೆ. (ಭಿಕ್ಷುಕರ ಹುಡುಗಿಗೂ ಇವರಿಗೂ ಏನು ವ್ಯತ್ಯಾಸ ಎಂಬುದನ್ನು ನೀವೇ ಯೋಚಿಸಿ). ಅಲ್ಲಿ ತೆಲಂಗಾಣ ಹೋರಾಟಕ್ಕೆ ಶವ ಇಟ್ಟು ಪ್ರತಿಭಟನೆ ಮಾಡುತ್ತಿದ್ದರೆ ಇಲ್ಲಿ ನನ್ನ ಗೆಳೆಯ ತಾನು ಅರ್ಧ ತಿಂದ ಪಿಜ್ಜಾದ ರುಚಿಯನ್ನು ನನಗೆ ವಿವರಿಸುತ್ತಿದ್ದ.

ಈ ಚಿತ್ರದಲ್ಲೇ ಮುಖ್ಯವಾಗಿ ಬಿಂಬಿತವಾಗಿರುವುದು, ಕಾಡುವುದು, ಒಟ್ಟಾರೆ ತಟಸ್ಥ ಧೋರಣೆ. ಇದು ಇಂದಿನ ಬಹುದೊಡ್ಡ ಸಮಸ್ಯೆಯೂ ಹೌದು. ಇದು ನಮ್ಮನ್ನು ಸಂವೇದನಾಶೀಲತೆಯಿಂದ ಬಹು ದೂರಕ್ಕೆ ಕೊಂದೊಯ್ಯುತ್ತಿದೆ, ಚಿತ್ರದ ಆ ಹಡಗಿನಂತೆ. ಇಂದು ಮನಸ್ಸಿಗೆ ಕಂಡಂತೆ ಬೆಲೆ ಏರಿಕೆ ಆದರೂ ನಾವು ಪ್ರತಿಭಟಿಸಲಾರೆವು. ನಾವೇ ಆರಿಸಿದ ಜನಪ್ರತಿನಿಧಿಗಳು ದಿನಕ್ಕೊಂದು ಪಕ್ಷಕ್ಕೆ ಹಾರಿಕೊಂಡು ಮಂಗಾಟವಾಡಿದರೂ, ಅಭಿವ್ರ‍ದ್ಧಿ ಹೊಂದಿದ ರಾಷ್ಟ್ರ ಗಳು ತಮ್ಮ ಸಂಪನ್ಮೂಲಗಳನ್ನು ಸಂರಕ್ಷಿಸಿಕೊಂಡು ನಮ್ಮ ಗಣಿಗಳನ್ನು ಲೂಟಿಮಾಡಿದರೂ, ನಮ್ಮ ಸುರಕ್ಷತೆಗೇ ಸಂಚಕಾರ ಬರುವಂತೆ ಬಾಂಬ್ ಸ್ಫೋಟಗಳು ನಡೆವಾಗಲೂ ಅಥವಾ ಇನ್ನಾವುದೇ ನೋವಿನ ಘಟನೆ ನಡೆದಾಗಲೂ ನಾವು ಪ್ರತಿಕ್ರಿಯಿಸುವುದಿಲ್ಲ. ಬದಲಾಗಿ ನಮ್ಮ ಯಾವುದೋ ಕೆಲಸವನ್ನು ನೆನಪಿಸಿಕೊಂಡು ಅದನ್ನೇ ಮುಖ್ಯವಾಗಿಸಿಕೊಂಡು ಮುಂದೆ ಸಾಗುತ್ತೇವೆ, ಚಿತ್ರದ ರೈತನ ಹಾಗೆ. ಏಕೆಂದರೆ ನಮ್ಮ ಮೇಲೆ ನೇರ ಆರೋಪಗಳಿಲ್ಲ.

ಈಗ ಕಥೆಯನ್ನು ಮುಂದುವರೆಸಿ ನೋಡೋಣ; ಒಂದುವೇಳೆ ರೈತನೋ ಅಥವಾ ಹಡಗಿನಲ್ಲಿದ್ದವರೋ, ಮತ್ಯಾರೋ ಸಮುದ್ರಕ್ಕೆ ಧುಮುಕಿ ಹುಡುಗನನ್ನು

ರಕ್ಷಿಸಲು ಮುಂದಾದರು ಎಂದಿಟ್ಟುಕೊಳ್ಳಿ, ಅವನು ಇತರರ ಕಣ್ಣಲ್ಲಿ ತೀರಾ ಹಾಸ್ಯಾಸ್ಪದ ವ್ಯಕ್ತಿ! ಇಲ್ಲಿ ನಮಗೆ ಹುಡುಗ ಬದುಕುವುದು ಅಥವಾ ಸಾಯುವುದು ಮುಖ್ಯವಲ್ಲವಲ್ಲ!! ಇಂತಹ ಕಾರಣಗಳಿಗಾಗಿಯೇ ನಮಗೆ ಮೇಧಾ ಪಾಟ್ಕರ್ ರಂತಹಾ ಸತ್ಯಾಗ್ರಹಿ ಹೋರಾಟಗಾರರು ತೀವ್ರ ನಗೆಪಾಟಲಿಗಳಂತೆ ಅನ್ನಿಸುತ್ತಾರೆ. ಮಾಧ್ಯಮಗಳು ತೋರಿಸುವ ಒಬಾಮ ಎನ್ನುವ ಗೌರವಾನ್ವಿತ ದುಷ್ಟ ನಮ್ಮ ಕಣ್ಮಣಿ. Belive me, 'Development' is todays hottest selling idea. ನಮಗೆ ಬೇಕಿರುವುದು ಅಭಿವ್ರ‍ದ್ಧಿ. ಅದಕ್ಕಾಗಿ ನಾವು ತಟಸ್ಥರಾಗಲೂ, ಸಂವೇದನಾಶೂನ್ಯರಾಗಲೂ ಸಿದ್ಧ!!!

4 comments:

 1. ಪ್ರಕಾಶ್, ನಿಮ್ಮ ಬರವಣಿಗೆ ಸತ್ಯಕ್ಕೆ ಹತ್ತಿರವಾಗಿದೆ. ಇಂದಿನ ನಮ್ಮ ಜೀವನ ವ್ಯವಸ್ಥೆ ಅಭಿವೃದ್ದಿಯ ಹೆಸರಿನಲ್ಲಿ ಮಾನವೀಯತೆಯನ್ನು ಮರೆಯುವತ್ತ ಕೊಂಡೊಯ್ಯುತ್ತಿದೆ. ನಮ್ಮ ತಟಸ್ಥ ದೋರಣೆ ಏನನ್ನು ಬಿಂಬಿಸುತ್ತದ? ನಮ್ಮ ಅಭಿವ್ರುದ್ದಿಯನ್ನೋ ಅಥವಾ ಕೀಳುತನವನ್ನೋ? ಸಾಮಾಜಿಕ ದೃಷ್ಟಿಯಿಂದ ನೋಡಿದಾಗ ಮಾನವರಾಗಿ ನಮಗೆ ನಾಚಿಕೆಯಾಗಬೇಕು.
  ಏನೇ ಇರಲಿ, ನಿಮ್ಮ ಲೇಖನ ಸಮಂಜಸವಾಗಿದೆ. keep writing.

  ReplyDelete
 2. ಪ್ರವೀಣ್ ಅವರೆ, ನನ್ನ ಬರಹದ ಮೂಲ ಆಶಯ ತಿಳಿದುಕೊಂಡು ಪ್ರತಿಕ್ರೀಯಿಸಿದ್ದಕ್ಕೆ ತುಂಬ ಧನ್ಯವಾದ.

  ReplyDelete
 3. ಸಂವೇದನೆಯನ್ನು ಕಳಕೊಂಡ ಜನರ ಜಾಣ ಕುರುಡು ... ಸಾವಿನ ಸುದ್ದಿಯನ್ನೂ ಮಾರಾಟದ ಸರಕಾಗಿಸುವ ಮಾಧ್ಯಮಗಳು ... ತನ್ನ ಸ್ವಾರ್ಥದ ಗುರಿಯನ್ನು ಬಿಟ್ಟು, ನೆರೆಯವನ ನೋವಿಗೆ ಸ್ಪಂದಿಸುವವನು ಹಾಸ್ಯಾಸ್ಪದ ವ್ಯಕ್ತಿಯಾಗುವುದು... ವಿಪರ್ಯಾಸ !!! - ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  ReplyDelete