Saturday, February 27, 2010

ನನ್ನ ಆಫೀಸು ಯಾತ್ರೆ

ನಗರಜೀವನದ ದುರಂತಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು ಸಾವಿನ ಸುದ್ದಿಗಳು ಮತ್ತು ಅರ್ಥಹೀನವೆನ್ನುಸುವ ದುಡಿಮೆ. ಹಾಗೆ ನೋಡಿದರೆ ಸಾವು ಮತ್ತು ದುಡಿಮೆಗಳು ನಮ್ಮ ಅಗತ್ಯಗಳೇ ಹೊರತು ನಮ್ಮ ಸ್ವತಂತ್ರ ಆಯ್ಕೆಗಳಲ್ಲ. ಸಾವನ್ನು ಒಪ್ಪಿಕೊಳ್ಳುವುದೆಂದರೆ ತಾನು ಎಂದುಕೊಳ್ಳುವ ಪ್ರತಿಯೊಂದನ್ನು ಥಟ್ಟನೆ ಕಿತ್ತುಕೊಳ್ಳುವುದು.. ಶ್ರಮವನ್ನು ಒಪ್ಪಿಕೊಳ್ಳುವುದು ಇದಕ್ಕಿಂತ ಕಡಿಮೆ ಕ್ರೂರವಾದದ್ದು. ಜೀವನದುದ್ದಕ್ಕೂ ಬೆಳಿಗ್ಗೆಗಳು ಸಂಭವಿಸುತ್ತವೆ...ಸಂಜೆಯತನಕ ಮುಂದುವರಿಯುತ್ತವೆ... ಮತ್ತೆ ಸಾಯುವತನಕ...

ಅಷ್ಟರಲ್ಲಿ ಕ್ಯಾಬ್ ಡ್ರೈವರ್ Missed call ಕೊಟ್ಟ. ಯಾರೋ ನನ್ನನ್ನು ಅಕಾಲಿಕ ಸಂತ ಪದವಿಯಿಂದ ಎಬ್ಬಿಸಿ ಹೊರತಂದಂತೆನಿಸಿತು. ಪೂರ್ತಿ ಚಾರ್ಜ್ ಆದ ಮೊಬೈಲನ್ನು ಕೈಯಲ್ಲೆತ್ತಿಕೊಂಡು ಮನೆಯಿಂದ ಹೊರಬಿದ್ದೆ. ನಿನ್ನೆಯ ಕಸ ತುಂಬಿಕೊಂಡು ಗವ್ವೆನ್ನುತ್ತ ಮಲಗಿರುವ ರಸ್ತೆಯ ಮೇಲೆ ಕರಗದ ಬೊಜ್ಜು ಹೊತ್ತು ಓಡಾಡುತ್ತಿರುವ ಮನುಷ್ಯಾಕ್ರತಿಗಳಿವೆ. ರಸ್ತೆಯ ತಿರುವಿನಲ್ಲಿ ಕುಳಿತು ಹಾಲು ಮಾರುವವ ಈ ದಿನ ಹಳತಾಯಿತೇನೋ ಎಂಬ ಅವಸರದಲ್ಲಿ ಚಿಲ್ಲರೆ ಎಣಿಸುತ್ತಾ ನನ್ನತ್ತ ನೋಡಿ ನಗುತ್ತಿದ್ದಾನೆ.

ಮ್ಯಾನ್ ಹೋಲ್ ಮುಚ್ಚಳದ ಮೇಲೆ ದಪ್ಪ ಹಜ್ಜೆಗಳನ್ನಿಟ್ಟು ನಾನು ಕಾರು ಹತ್ತುತ್ತೇನೆ. ಡ್ರೈವರ್ ನ ನಿದ್ರಾಹೀನ ಮುಖ ನನ್ನನ್ನು ಸ್ವಾಗತಿಸುತ್ತಿದೆ. ಇನ್ನು ಸೂರ್ಯ ರಶ್ಮಿಗಳು ನನ್ನನ್ನು ತಲುಪುವ ಮೊದಲೇ Rapid ರಶ್ಮಿ ಎಂಬ FM ಕಂಠ ಸುಂದರಿ ಕೇಳಿಸುವ ಸುಪ್ರಭಾತ ನನ್ನನ್ನು ಅಯಾಚಿತವಾಗಿ ಆವರಿಸುತ್ತಿದೆ. ರಸ್ತೆಯ ಕೆಳಗೆ ಹರಿಯುತ್ತಿರುವ ಕೊಚ್ಚೆಯಬಗ್ಗೆ ಕೊಂಚವೂ ಅರಿವಿಲ್ಲದೆ ಕಾರು ಮುನ್ನುಗ್ಗುತ್ತಿದೆ, ಗುಂಡ್ರಗೋವಿಯಂತೆ...

ದೊಡ್ಡ ಬಂಗಲೆಯ ಗೇಟಿನ ಮುಂದೆ ಕುಕ್ಕುರುಗಾಲಿನಲ್ಲಿ ಕುಳಿತು ರಂಗೋಲೆ ಬರೆಯುತ್ತಿದ್ದಾಳೆ; ಮನೆಯೊಡತಿ ಎಂದುಕೊಂಡಿರಾ? ಅಲ್ಲ ಕೆಲಸದ ಹುಡುಗಿ. ಮನಸ್ಸಿನಲ್ಲಿ ಇನ್ನೂ ಎದ್ದಿರದ ಮನೆಯವರಿಗೆ ಬೆಡ್ ಕಾಫಿ ಮಾಡಬೇಕೆಂಬ ಕಾರಣ ಅವಳನ್ನು ಅವಸರಿಸುವಂತೆ ಮಾಡುತ್ತಿರಬಹುದು. ನಿನ್ನೆ ರಾತ್ರೆ ಡ್ರೈವರ್ ಉಚ್ಚೆಹೊಯ್ದ ’ಇಲ್ಲಿ ಮೂತ್ರ ಮಾಡಬಾರದು’ ಗೋಡೆಗಳ ಮೇಲೆ ಹೊಸ ಪೋಸ್ಟರ್ ರಾರಾಜಿಸುತ್ತಿದೆ. ತನ್ನ ಸೌಷ್ಟವಗಳನ್ನು ತೋರಿಸುತ್ತಾ ಮಲಗಿರುವ ’ರಾತ್ ಕಿ ಮಲ್ಲಿಕಾ’ ಕಾಲದ ಪರಿವೆ ಇಲ್ಲದೆ ನನಗೆ ಆಹ್ವಾನವೀಯುತ್ತಿದ್ದಾಳೆ.

ಇವೇ ರಸ್ತೆಗಳ ಮೇಲೆ ಮನುಷ್ಯರನ್ನು ತಿನ್ನುವ ನಾಯಿಗಳು ಓಡಾಡುತ್ತವೆ. ನಿನ್ನೆ ಇದೇ ರಸ್ತೆಯ ಮೇಲೆ ಸತ್ತ ವ್ಯಕ್ತಿಯ ರಕ್ತದ ಕಲೆಗಳು ಧೂಳಿನಿಂದ ಮುಚ್ಚಿಹೋಗಿವೆ. ತನ್ನವರಿಗೆ ಟಾಟಾ ಮಾಡಿ ಅಥವಾ ಮಾಡದೇ ಬಂದ ಹೊಸಬರನ್ನು ತಂದು ಇಳಿಸಿ, ಇನ್ನು ನನಗೂ ನಿಮಗೂ ಸಂಬಂಧ ಇಲ್ಲ ಎನ್ನುವಂತೆ ಪರ ಊರ ಬಸ್ಸುಗಳು ಮುಂದೆ ಸಾಗುತ್ತಿವೆ. ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಸಹಪಾಠಿ ಅರ್ಧರಾತ್ರಿಯಲ್ಲಿ ಓಡಿಬಂದ. ಇದೇ ನಗರಕ್ಕೆ. ಅವನು ಅಪ್ಪ ಅಮ್ಮನಿಗೆ ಟಾಟಾ ಮಾಡಿ ಬರಲಿಲ್ಲ ಎಂದು ನಾವೆಲ್ಲ ಮಾತಾಡಿಕೊಂಡಿದ್ದೆವು. ಹತ್ತು ವರ್ಷದ ನಂತರ ನಾನೂ ಬಂದೆ. ಆದರೆ ಬರುವಾಗ ಅಪ್ಪ ಅಮ್ಮನಿಗೆ ಟಾಟಾ ಮಾಡಿದ್ದೆ, ಸಭ್ಯನಂತೆ!

ಅಷ್ಟರಲ್ಲೆ ದೊಡ್ಡ ಹಾರ್ನ್ ಸದ್ದು ನನ್ನನ್ನು ಮತ್ತೆ ಎಬ್ಬಿಸಿತು. ಕಾರು ಆಫೀಸು ಮುಂದಿನ ಗೇಟಿನಲ್ಲಿದೆ. ಹಾಲಾಹಲವ ಹಿಡಿದಿರುವ ನೀಲಕಂಠನ ಕೊರಳ ಹಾವಿನಂತೆ ಐಡೆಂಟಿಟಿ ಕರ್ಡ್ ನ್ನು ಕೊರಳಲ್ಲಿ ತೂಗಿಕೊಂಡು ಎಲ್ಲರೊಂದಿಗೆ ಮುಂದಕ್ಕೆ ಹೆಜ್ಜೆ ಇಡುತ್ತಿದ್ದೇನೆ,ಭೋಳೇ ಶಂಕರನಂತೆ!!

1 comment:

  1. ಬೆಳಗಿನ ದೃಶ್ಯಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ... ಬರಹ ಇನ್ನೂ ಸ್ವಲ್ಪ ಉದ್ದವಾಗಬಹುದಿತ್ತೇನೋ

    ReplyDelete