Sunday, February 14, 2010

ಚೇರ್ಕಾಡಿಯಿಂದ ಜಗತ್ತಿಗೆ

ನನ್ನ ಜೀವನದ ಅತ್ಯಂತ ಮಾಂತ್ರಿಕ ಜಾಗವಾದ ಚೇರ್ಕಾಡಿಯಿಂದ ನೆನಪುಗಳು ಆರಂಭವಾಗುತ್ತವೆ. ರ‍ಾತ್ರಿ ಕೊನೆಯ ಬಸ್ಸಿಳಿದು ಅಪ್ಪ ನನ್ನನ್ನು ಎತ್ತಿಕೊಂಡು ಹೊರಟಾಗ ಹಿಂಬಾಲಿಸಿದ ಮರಗಳು, ಶಾಲೆ ಎಂಬ ವಿಸ್ಮಯ, ಗೋಡೆ ಸಂಧಿಯ ಗಾಳಿಬೆತ್ತ, ದಪ್ಪನಕುಡಿಯಲ್ಲಿ ಉಜ್ಜಿದ ಸ್ಲೇಟು, ನಾಲಗೆ ನೀಲಿ ಮಾಡಿದ ಕುಂಟಾಲ ಹಣ್ಣು, ಬ್ರಹ್ಮಾವರಕ್ಕೆ ಹೊರಟ ಲಾರಿಯಿಂದ ಬಿದ್ದ ಕಬ್ಬು, ಪೆಟ್ಲಂಡೆ, ಮಾರಿ ಡೋಲು, ಕಂಬಳ, ಹೋಳಿ, ಹಂದಿ ಬೇಟೆಯ ಕೂಗು, ಮಂಗಳೂರು ಆಕಾಶವಾಣಿಯ ಪಾಡ್ದನ, ರಾತ್ರಿಯ ನೀರವದಲ್ಲಿ ಎತ್ತಲೋ ಸಾಗುತ್ತಿದ್ದ ಸಾಲು ಎತ್ತಿನ ಗಾಡಿಗಳ ಕೆಳಗೆ ಮಿಣುಕುವ ಲಾಟೀನು, ನೇಮದ ಹಸಿ ಗಂಧ.. ಹೀಗೆ ಇಲ್ಲಿನ ಬಾಲ್ಯದ ನೆನಪುಗಳೆಲ್ಲ ಹಸುರಾಗಿವೆ.

ದನ ಮೇಯಿಸುತ್ತಾ ಕುಟ್ಟಿದೊಣ್ಣೆ ಆಡುತ್ತಿದ್ದ, ಎರಡು ಒಡ್ಡಿ ಗೇರುಬೀಜ ಮಾರಿ ಚಾಕಲೇಟು ಕೊಳ್ಳುತ್ತಿದ್ದ, ದೂಪದಕಾಯಿ ಮಾರಿ ಪುಸ್ತಕಕ್ಕೊಂದು ಖಾಕಿ ದಟ್ಟಿ ಕೊಂಡು ಸಂಭ್ರಮಿಸುತ್ತಿದ್ದ, ಐಸ್ಕ್ಯಾಂಡಿಗೆಂದು ಮನೆಯಲ್ಲಿ ದಂಬಾಲುಬಿದ್ದು ನಾಲ್ಕಾಣೆ ಕೀಳುತ್ತಿದ್ದ ಹುಡುಗ ಹುಡುಗಿಯರೆಲ್ಲ ಎಲ್ಲಿ ಕಾಣೆಯಾದರು? ರಾತ್ರೆ ತೋಟದ ಬಾವಿಯಲ್ಲಿ ಚಂದ್ರ ತನ್ನ ನೆರಳು ನೋಡಿ ನಗುತ್ತಿರುವಾಗಲೆ ಹುಡುಗನೊಬ್ಬ ಮನೆ ಬಿಟ್ಟು ಓಡಿ ಹೋಗಿರಬಹುದು; ಮತ್ತು ಹೀಗೆ ಓಡಿ ಹೋದವರಿಂದ ನಗರಗಳು ನಿರ್ಮಾಣಗೊಂಡಿರಬಹುದು. ಮತ್ತೆ ನಾವೆಲ್ಲ ಸಭ್ಯರಂತೆ ಪೋಸ್ ಕೊಟ್ಟು ಅಪ್ಪ ಅಮ್ಮನಿಗೆ ಟಾಟಾ ಹೇಳಿ ಅಂಥಹ ನಗರಗಳಿಗೆ ಸಾಗಿದೆವು ಅಥವಾ ಕಳೆದುಹೋದೆವು. ಹೀಗಿದ್ದೂ ಉಡುಪಿಯ ಸಾಂಪ್ರದಾಯಿಕ ಪರಿಸರದಿಂದ ಪಾರಾದ ನಾವು ಸುಖವರಸಿ ಪಟ್ಟಣ ಸೇರಿದ ಮೇಲೂ ಲೌಕಿಕ ಯಶಸ್ಸು ಕೊಟ್ಟ ಅಧುನಿಕತೆಯಿಂದಲೂ ಚಡಪಡಿಸುತ್ತಿರುವುದೇಕೆ?

ಹಾಗೆ ನೋಡಿದರೆ ತನ್ನ ಕಾಲದಲ್ಲೇ ಆಧುನಿಕನಾಗಿ ಮಡಿವಂತರಿಗೆ ವಿರೋಧಿಯಾಗಿದ್ದವ ಉಡುಪಿಯ ಕ್ರ‍ಷ್ಣ. ಇವನು ಉಡುಪಿಯಲ್ಲಿ ಭಾರತ ಯುದ್ಧದ ಚಕ್ರಧಾರಿಯೂ ಅಲ್ಲ; ಕೊಳಲು ನುಡಿಸುವ ಮೋಹನನು ಅಲ್ಲ. ಮೊಸರು ಕಡೆಯುವ ಕಡಗೋಲು ಗೊಲ್ಲ; ಗಂಜಿ ತಿಳಿಯ ನೈವೇದ್ಯ ಅವನಿಗೆ ಪ್ರಿಯ. ಆಧುನಿಕತೆಯನ್ನು ಸಹ್ಯ ಮಾಡುವವನು ಕ್ರ‍ಷ್ಣ ಮಾತ್ರನಲ್ಲ, ಉಡುಪಿಯ ಸುತ್ತಲಿನ ಭೂತಗಳನ್ನು ನೋಡಿ. ಆಧುನಿಕ ವಿಧ್ಯುತ್ತಿನ ಝಳದಲ್ಲಿ, ಸಿನಿಮಾ ಹಾಡುಗಳಿಗೆ ದೈವಗಳು ಮೈತುಂಬಿ ಕುಣಿಯಬಲ್ಲವು! ಬೊಂಬಾಯಿಗೆ ಹೋಗಿ ಶ್ರೀಮಂತರಾದವರೆಲ್ಲ ಇದರ ಪರಮ ಭಕ್ತರು!!

ರದ್ದಿ ಕಾಗದಗಳಲ್ಲಿ ಪಾರ್ಸೆಲ್ ಪಾರ್ಸೆಲ್ ಆಗಿಬರುವ ಫ಼್ರೈಡ್ ರೈಸ್ ಅನ್ನುವ ಹಳಸಲು ಅನ್ನ ತಿನ್ನುವ ಬ್ಯಾಚುಲರ್ ನಾಲಗೆಗಳಿಗೆ ಊರಿಗೆ ಬರುವ ಸಮಯಕ್ಕೆ ಹೊಸ ಒರತೆಯೊಂದು ಉಕ್ಕುವುದುಂಟು. ಗೆಳೆಯರೊಂದಿಗೆ ಗೋಳಿಬಜೆ ತಿಂದ ಉಡುಪಿಯ ಅದೇ ಹೋಟೆಲ್ ಗಳಿಗೆ ಹೊಕ್ಕಿದರೆ ಅಲ್ಲಿಯೂ ಮೆನು ಕಾರ್ಡ್ ಬದಲಾಗಿದೆ! ಮುಂಬಯಿಯ ಚೌಪಾಟಿಯಲ್ಲೆಲ್ಲೋ ಅಲೆಯುತ್ತಿದ್ದ ಪಾವ್ ಭಾಜಿ ಕೆಂಪನೆ ಕುದಿಯುತ್ತ ಉಡುಪಿಗೆ ಲಗ್ಗೆ ಇಟ್ಟಿದೆ. ಹೋಟೆಲ್ ಮಾಣಿಗಳು ಗೋಬಿ ಮಂಚೂರಿಯನ್ನು ಗೋವರ್ಧನ ಗಿರಿಯೋಪಾದಿಯಲ್ಲಿ ಎತ್ತಿ ತಂದು ನಮ್ಮ ಮುಂದಿಡುತ್ತಾರೆ. ಜಗತ್ತಿನ ನಾಲಗೆಗಳನ್ನೆಲ್ಲ ತನ್ನ ರುಚಿಯಿಂದ ಮೆಚ್ಚಿಸಿದ, ಪಾಕಲೋಕದಲ್ಲೊಂದು ಕ್ರಾಂತಿಯನ್ನೇ ಮಾಡಿದ ಉಡುಪಿಯ ಮೇಲೆ ಈ ಖಾದ್ಯಗಳೆಲ್ಲ ಹೀಗೆ ಸೇಡು ತೀರಿಸಿಕೊಂಡಾವೆಂದು ಭಾವಿಸಿರಲಿಲ್ಲ.

ಕೆಲವು ಒಳಬಾಳುವೆಯ ಸ್ಥಿತ್ಯಂತರಗಳನ್ನು ನೋಡಿ: ಹಿಂದೆ ಮದ್ಯಾಹ್ನದ ಉರಿ ಬಿಸಿಲಿನಲ್ಲಿ ಒಬ್ಬರೆ ಓಡಾಡುವಾಗ ಕಾಡುತ್ತಿದ್ದ ಉಮ್ಮಲ್ತಿಯ ಭಯ ಇಂದು ಅಪರಾತ್ರಿಯಲ್ಲಿ ಮನೆಗೆ ಬರುವಾಗಲೂ ಇರುವುದಿಲ್ಲ. ಮನೆಗೆ ಚಂದ್ರನ್ ಕಳ್ಳ ಬರುತ್ತಾನೆ ಎಂದು ಮಲುಗುವಾಗ ದಿಂಬಿನ ಕೆಳಗೆ ಕತ್ತಿ ಇಟ್ಟುಕೊಂಡು ಮಲಗುವ ಕಾಲವೊಂದಿತ್ತು. ಇಂದು ಆತ ಬದುಕಿದ್ದರೆ ಬಹುಶಃ ನ್ಯೂಸ್ ಚಾನಲ್ ಗಳ ಒಂದು ದಿನದ ಬ್ರೇಕಿಂಗ್ ನ್ಯೂಸ್ ಅಷ್ಟೇ ಆಗಿರುತ್ತಿದ್ದನೇನೋ. ನಮಗೆ ಪಕ್ಕದ ಮನೆಯವರಷ್ಟೇ ಪರಿಚಯವಿರುತ್ತಿರಲಿಲ್ಲ. ಅವರ ಕೊಟ್ಟಿಗೆಯ ದನಗಳದ್ದು ಸಹ. ಕಳೆದುಹೋದ ದನದವನ್ನು ಹುಡುಕಿಕೊಡುವ ಉಪಯುಕ್ತರು ನಾವಗಿದ್ದೆವು. ಇಂದು ಕಳೆದುಹೋದರೆ ದನಗಳು ಮತ್ತೆ ಸಿಗುವ ಭರವಸೆ ಇಲ್ಲ. ಹುಡುಕಿಕೊಡಬಹುದಾಗಿದ್ದ ಜೀವಾತ್ಮಗಳೆಲ್ಲ ತಮ್ಮ ತಮ್ಮ ಮನೆಯ ಟೀವಿಯ ಮುಂದೆ ಕೂತಿರುತ್ತವೆ, ಇಲ್ಲವೆ ಪಟ್ಟಣಗಳಲ್ಲೆಲ್ಲೊ ವಿಳಾಸವೂ ಸಿಗದಂತೆ ಸ್ವತಃ ಕಳೆದುಹೋಗಿರುತ್ತವೆ!

ನಾವೀಗ ನಮಗೆ ಲಾಭದಾಯಕವನ್ನುವಂತೆ ಮಾತ್ರ ಬದುಕುತ್ತೆದ್ದೇವೆ. ಅಂದರೆ ಯಾಂತ್ರಿಕ ಯುಗವನ್ನು ಅಪ್ಪಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಾ, ಮಾಹಿತಿ ತಂತ್ರಜ್ನಾನದ ಮನಮೋಹಕತೆಗೆ ಮಾರುಹೋಗುತ್ತಾ, ಪಶ್ಚಿಮದ ರಾಷ್ಟ್ರಗಳ ಹಗಲುಗಳಿಗಾಗಿ, ನಮ್ಮ ರಾತ್ರಿಗಳನ್ನು ಸುಡುತ್ತಾ ಗೊಂದಲಗಳೊಂದಿಗೆ ಬದುಕುತ್ತಿದ್ದೇವೆ. ಇದೊಂದು ವಿಚಿತ್ರ ಸ್ಥಿತಿ. ನಮ್ಮ ಜನಾಂಗ ಅನುಭವಿಸುತ್ತಿರುವ ಸ್ಥಿತಿ. ಆತ್ಮವಂಚನೆಯಷ್ಟು ಸರಳವಲ್ಲದ, ಮೋಸದಾಟದಷ್ಟು ಒರಟಲ್ಲದ, ಮಾಯಾವಶವೂ ಅಲ್ಲದ, ನಟನೆಯೂ ಅಲ್ಲದ ಬ್ಯಾಡ್ ಫ಼ೈತ್(bad faith) ನಲ್ಲಿ ಬದುಕುತ್ತಿದ್ದೇವೆ.. ಫ಼್ರೆಂಚ್ ಚಿಂತಕ ಸಾರ್ತ್ರ್ ಬಳಕೆಗೆ ತಂದ ಪದಗಟ್ಟು ಇದು. ಇದೊಂದು ನಮ್ಮ ಆಯ್ಕೆಯನ್ನು ಆಯ್ಕೆಯೆಂದೇ ಗುರುತಿಸಿಕೊಳ್ಳದಂತೆ ಮಾಡುವ ಆಯ್ಕೆ.

ಆದರೆ ಒಂದನ್ನಂತು ಒಪ್ಪಿಕೊಳ್ಳಲೇ ಬೇಕು. ನಾವು ಯಾವುದನ್ನು ಸುಖ ಅಂದುಕೊಳ್ಳುತ್ತೇವೋ ಅದು ಬೇಗ ದಣಿವನ್ನೂ ತರಬಹುದು. ಹೀಗೆ ದಣಿವಾದಾಗಲೆಲ್ಲ ನಾವು ಊರ ಬಸ್ಸು ಹತ್ತುತ್ತೇವೆ. ಮತ್ತೆ ನಮ್ಮನ್ನು ಅಪ್ಪಿಕೊಂಡು ಸಂತೈಸಲು ಚೇರ್ಕಾಡಿಯಂತಹ ಹಳ್ಳಿಯೊಂದು ಅಮ್ಮನಂತೆ ನಮಗಾಗಿ ಕಾದಿರುತ್ತದೆ.

3 comments:

 1. Good one... :)

  Nammantha Halli subbaru e-jagattinalli (e-Electronic), ella kade estu jana iddaro gottilla.... Ella Subbaru mayanagari jagattinalli kaledu hogiddare... Kaledu hogta iddare....

  Harsha Gurugunti

  ReplyDelete
 2. ನಾವೇ ಸೃಷ್ಟಿಸಿಕೊಂಡ ಅನಿವಾರ್ಯತೆ ... "ತನಗೇನು ಬೇಕು?" ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲದ ನಾವೆಲ್ಲ ಜಗತ್ತನ್ನು ಅನುಸರಿಸುತ್ತಾ ತಂದಿಟ್ಟುಕೊಂಡ ಅಧ್ವಾನಗಳಿಗೆ, ಕಾಲ ಮಿಂಚಿದ ಮೇಲೆ ಮರಗುತ್ತಿದ್ದೇವೆ ...

  ReplyDelete
 3. ದಿವ್ಯಪ್ರಕಾಶ್ ರವರೇ,

  ನಾವೀಗ ಎ೦ಥ ಸ೦ದಿಗ್ಧ ಪರಿಸ್ಥಿತಿ ಯಲ್ಲಿದ್ದೇವೆ೦ದರೆ ಅತ್ತ ನಗರ ಜೀವನಕ್ಕೆ ಪೂರ್ತಿ ಹೊ೦ದಿಕೊಳ್ಳಲು ಆಗದೇ, ಇತ್ತ ಹಳ್ಳಿ-ಊರುಗಳ ಮೋಹದಲ್ಲಿ ಪೂರ್ತಿಯಾಗೂ ಸಿಲುಕದೇ ತ್ರಿಶ೦ಕು ಸ್ಥಿತಿಯಲ್ಲಿದ್ದೇವೆ. ನಮಗೀಗ ನಗರ ಜೀವನದ ಸೌಲಭ್ಯಗಳು ಬೇಕೂ, ಹಳ್ಳಿ ಜೀವನದ ಸರಳ ಜೀವನವೂ ಬೇಕೂ ಎ೦ಬ೦ತಾಗಿದೆ!

  ReplyDelete