Saturday, February 27, 2010

ನನ್ನ ಆಫೀಸು ಯಾತ್ರೆ

ನಗರಜೀವನದ ದುರಂತಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು ಸಾವಿನ ಸುದ್ದಿಗಳು ಮತ್ತು ಅರ್ಥಹೀನವೆನ್ನುಸುವ ದುಡಿಮೆ. ಹಾಗೆ ನೋಡಿದರೆ ಸಾವು ಮತ್ತು ದುಡಿಮೆಗಳು ನಮ್ಮ ಅಗತ್ಯಗಳೇ ಹೊರತು ನಮ್ಮ ಸ್ವತಂತ್ರ ಆಯ್ಕೆಗಳಲ್ಲ. ಸಾವನ್ನು ಒಪ್ಪಿಕೊಳ್ಳುವುದೆಂದರೆ ತಾನು ಎಂದುಕೊಳ್ಳುವ ಪ್ರತಿಯೊಂದನ್ನು ಥಟ್ಟನೆ ಕಿತ್ತುಕೊಳ್ಳುವುದು.. ಶ್ರಮವನ್ನು ಒಪ್ಪಿಕೊಳ್ಳುವುದು ಇದಕ್ಕಿಂತ ಕಡಿಮೆ ಕ್ರೂರವಾದದ್ದು. ಜೀವನದುದ್ದಕ್ಕೂ ಬೆಳಿಗ್ಗೆಗಳು ಸಂಭವಿಸುತ್ತವೆ...ಸಂಜೆಯತನಕ ಮುಂದುವರಿಯುತ್ತವೆ... ಮತ್ತೆ ಸಾಯುವತನಕ...

ಅಷ್ಟರಲ್ಲಿ ಕ್ಯಾಬ್ ಡ್ರೈವರ್ Missed call ಕೊಟ್ಟ. ಯಾರೋ ನನ್ನನ್ನು ಅಕಾಲಿಕ ಸಂತ ಪದವಿಯಿಂದ ಎಬ್ಬಿಸಿ ಹೊರತಂದಂತೆನಿಸಿತು. ಪೂರ್ತಿ ಚಾರ್ಜ್ ಆದ ಮೊಬೈಲನ್ನು ಕೈಯಲ್ಲೆತ್ತಿಕೊಂಡು ಮನೆಯಿಂದ ಹೊರಬಿದ್ದೆ. ನಿನ್ನೆಯ ಕಸ ತುಂಬಿಕೊಂಡು ಗವ್ವೆನ್ನುತ್ತ ಮಲಗಿರುವ ರಸ್ತೆಯ ಮೇಲೆ ಕರಗದ ಬೊಜ್ಜು ಹೊತ್ತು ಓಡಾಡುತ್ತಿರುವ ಮನುಷ್ಯಾಕ್ರತಿಗಳಿವೆ. ರಸ್ತೆಯ ತಿರುವಿನಲ್ಲಿ ಕುಳಿತು ಹಾಲು ಮಾರುವವ ಈ ದಿನ ಹಳತಾಯಿತೇನೋ ಎಂಬ ಅವಸರದಲ್ಲಿ ಚಿಲ್ಲರೆ ಎಣಿಸುತ್ತಾ ನನ್ನತ್ತ ನೋಡಿ ನಗುತ್ತಿದ್ದಾನೆ.

ಮ್ಯಾನ್ ಹೋಲ್ ಮುಚ್ಚಳದ ಮೇಲೆ ದಪ್ಪ ಹಜ್ಜೆಗಳನ್ನಿಟ್ಟು ನಾನು ಕಾರು ಹತ್ತುತ್ತೇನೆ. ಡ್ರೈವರ್ ನ ನಿದ್ರಾಹೀನ ಮುಖ ನನ್ನನ್ನು ಸ್ವಾಗತಿಸುತ್ತಿದೆ. ಇನ್ನು ಸೂರ್ಯ ರಶ್ಮಿಗಳು ನನ್ನನ್ನು ತಲುಪುವ ಮೊದಲೇ Rapid ರಶ್ಮಿ ಎಂಬ FM ಕಂಠ ಸುಂದರಿ ಕೇಳಿಸುವ ಸುಪ್ರಭಾತ ನನ್ನನ್ನು ಅಯಾಚಿತವಾಗಿ ಆವರಿಸುತ್ತಿದೆ. ರಸ್ತೆಯ ಕೆಳಗೆ ಹರಿಯುತ್ತಿರುವ ಕೊಚ್ಚೆಯಬಗ್ಗೆ ಕೊಂಚವೂ ಅರಿವಿಲ್ಲದೆ ಕಾರು ಮುನ್ನುಗ್ಗುತ್ತಿದೆ, ಗುಂಡ್ರಗೋವಿಯಂತೆ...

ದೊಡ್ಡ ಬಂಗಲೆಯ ಗೇಟಿನ ಮುಂದೆ ಕುಕ್ಕುರುಗಾಲಿನಲ್ಲಿ ಕುಳಿತು ರಂಗೋಲೆ ಬರೆಯುತ್ತಿದ್ದಾಳೆ; ಮನೆಯೊಡತಿ ಎಂದುಕೊಂಡಿರಾ? ಅಲ್ಲ ಕೆಲಸದ ಹುಡುಗಿ. ಮನಸ್ಸಿನಲ್ಲಿ ಇನ್ನೂ ಎದ್ದಿರದ ಮನೆಯವರಿಗೆ ಬೆಡ್ ಕಾಫಿ ಮಾಡಬೇಕೆಂಬ ಕಾರಣ ಅವಳನ್ನು ಅವಸರಿಸುವಂತೆ ಮಾಡುತ್ತಿರಬಹುದು. ನಿನ್ನೆ ರಾತ್ರೆ ಡ್ರೈವರ್ ಉಚ್ಚೆಹೊಯ್ದ ’ಇಲ್ಲಿ ಮೂತ್ರ ಮಾಡಬಾರದು’ ಗೋಡೆಗಳ ಮೇಲೆ ಹೊಸ ಪೋಸ್ಟರ್ ರಾರಾಜಿಸುತ್ತಿದೆ. ತನ್ನ ಸೌಷ್ಟವಗಳನ್ನು ತೋರಿಸುತ್ತಾ ಮಲಗಿರುವ ’ರಾತ್ ಕಿ ಮಲ್ಲಿಕಾ’ ಕಾಲದ ಪರಿವೆ ಇಲ್ಲದೆ ನನಗೆ ಆಹ್ವಾನವೀಯುತ್ತಿದ್ದಾಳೆ.

ಇವೇ ರಸ್ತೆಗಳ ಮೇಲೆ ಮನುಷ್ಯರನ್ನು ತಿನ್ನುವ ನಾಯಿಗಳು ಓಡಾಡುತ್ತವೆ. ನಿನ್ನೆ ಇದೇ ರಸ್ತೆಯ ಮೇಲೆ ಸತ್ತ ವ್ಯಕ್ತಿಯ ರಕ್ತದ ಕಲೆಗಳು ಧೂಳಿನಿಂದ ಮುಚ್ಚಿಹೋಗಿವೆ. ತನ್ನವರಿಗೆ ಟಾಟಾ ಮಾಡಿ ಅಥವಾ ಮಾಡದೇ ಬಂದ ಹೊಸಬರನ್ನು ತಂದು ಇಳಿಸಿ, ಇನ್ನು ನನಗೂ ನಿಮಗೂ ಸಂಬಂಧ ಇಲ್ಲ ಎನ್ನುವಂತೆ ಪರ ಊರ ಬಸ್ಸುಗಳು ಮುಂದೆ ಸಾಗುತ್ತಿವೆ. ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಸಹಪಾಠಿ ಅರ್ಧರಾತ್ರಿಯಲ್ಲಿ ಓಡಿಬಂದ. ಇದೇ ನಗರಕ್ಕೆ. ಅವನು ಅಪ್ಪ ಅಮ್ಮನಿಗೆ ಟಾಟಾ ಮಾಡಿ ಬರಲಿಲ್ಲ ಎಂದು ನಾವೆಲ್ಲ ಮಾತಾಡಿಕೊಂಡಿದ್ದೆವು. ಹತ್ತು ವರ್ಷದ ನಂತರ ನಾನೂ ಬಂದೆ. ಆದರೆ ಬರುವಾಗ ಅಪ್ಪ ಅಮ್ಮನಿಗೆ ಟಾಟಾ ಮಾಡಿದ್ದೆ, ಸಭ್ಯನಂತೆ!

ಅಷ್ಟರಲ್ಲೆ ದೊಡ್ಡ ಹಾರ್ನ್ ಸದ್ದು ನನ್ನನ್ನು ಮತ್ತೆ ಎಬ್ಬಿಸಿತು. ಕಾರು ಆಫೀಸು ಮುಂದಿನ ಗೇಟಿನಲ್ಲಿದೆ. ಹಾಲಾಹಲವ ಹಿಡಿದಿರುವ ನೀಲಕಂಠನ ಕೊರಳ ಹಾವಿನಂತೆ ಐಡೆಂಟಿಟಿ ಕರ್ಡ್ ನ್ನು ಕೊರಳಲ್ಲಿ ತೂಗಿಕೊಂಡು ಎಲ್ಲರೊಂದಿಗೆ ಮುಂದಕ್ಕೆ ಹೆಜ್ಜೆ ಇಡುತ್ತಿದ್ದೇನೆ,ಭೋಳೇ ಶಂಕರನಂತೆ!!

Sunday, February 21, 2010

ನಮ್ಮನ್ನೂ ಕಾಡುತ್ತಿದೆ The Fall of Icarus
ಸ್ವಚ್ಛವಾದ ಹುಚ್ಚೊಂದು ತೇಲುತ್ತಿತ್ತು
ತಿಳಿನೀರ ಕೊಳದಲ್ಲಿ ಹಳೆ
ಸರಸ್ವತಿ ಕ್ಯಾಲೆಂಡರಿನ ಹಂಸದಂತೆ...
(ಆಕರ: ಜಯಂತ ಕಾಯ್ಕಿಣಿಯವರ ’ರುದ್ರಪಾದದಲ್ಲಿ ಬಿಟ್ಟ ಹೆಜ್ಜೆ’)

ದಿನಾಲು ತುಸು ಅಸಡ್ಡೆಯಿಂದಲೇ ನೋಡುವ ಕ್ಯಾಲೆಂಡರಿನ ಚಿತ್ರವೊಂದು, ಇಂಥ ಸಾಲನ್ನು ಹುಟ್ಟಿಸಬಹುದಾದರೆ, ಕಲಾವಿದನ ಮನಸ್ಸಿನಿಂದ ಪಕ್ವವಾಗಿ ಬಂದ ಚಿತ್ರವೊಂದು ನೋಡುಗನ ಮನಸ್ಸಿನಲ್ಲಿ ಎಂಥಾ ಹುಯಿಲೆಬ್ಬಿಸಲಿಕ್ಕಿಲ್ಲ. ೧೬ನೇ ಶತಮಾನದಲ್ಲಿ ಬ್ರೂಗೆಲ್ ಎಂಬ ಕಲಾವಿದ ’The Fall of Icarus' ಎಂಬ ಚಿತ್ರ ಬಿಡಿಸಿದ. ಎರಡನೇ ಮಹಾಯುದ್ಧದ ಸಮಯದಲ್ಲಿ W H Auden ಬರೆದ Musee des Beaux Arts ಈ ಚಿತ್ರದಿಂದ ಪ್ರಭಾವಿತವಯಿತು. ಇದೇ ಚಿತ್ರ ನನ್ನನ್ನೂ ಕಾಡಿದ್ದಕ್ಕೆ ಈ ಲೇಖನ ಬರೆಯುತ್ತಿದ್ದೇನೆ.

ಚಿತ್ರ ಕತೆ ಹೀಗಿದೆ: ಡೆಡಾಲಸ್ ಎನ್ನುವ ಕುಶಲಕರ್ಮಿ ತನ್ನ ರಾಜನಿಗೆ ನಿರ್ಮಿಸಿಕೊಟ್ಟ ವ್ಯೂಹದಲ್ಲಿ ಮಗ ಇಕಾರಸ್ ನೊಂದಿಗೆ ಬಂಧಿಯಾಗುತ್ತಾನೆ. ಆದರೆ ರೆಕ್ಕೆಗಳನ್ನು ಸ್ರ‍ಷ್ಟಿಸಿ ಹಾರುವಂತೆ ಮಾಡಿ ಮಗನನ್ನು ಪಾರುಮಾಡಲು ಅವಕಾಶ ಮಾಡಿಕೊಡುತ್ತಾನೆ. ಬಾಲಕ ಇಕಾರಸ್ ಹಾರುತ್ತಾ ಹೋಗಿ ಸೂರ್ಯನಿಗೆ ಸಮೀಪಿಸುತ್ತಾನೆ. ಆಗ ರೆಕ್ಕೆಯ ಮೇಣ ಕರಗಿ ಸಮುದ್ರಕ್ಕೆ ಬೀಳುತ್ತಾನೆ. ಈ ದ್ರ‍ಶ್ಯವನ್ನು ಬ್ರೂಗಲ್ ಚಿತ್ರಿಸಿದ್ದಾನೆ. ಚಿತ್ರದಲ್ಲಿ ತನ್ನ ಪಾಡಿಗೆ ಉಳುಮೆ ಮಾಡುತ್ತಿರುವ ರೈತನಿದ್ದಾನೆ. ಅವನಿಗೆ ಇಕಾರಸ್ ಸಮುದ್ರಕ್ಕೆ ಬೀಳುತ್ತಿರುವ ಶಬ್ಧ ಕೇಳಿರಬಹುದು. ಆದರೆ ಅದು ಅವನಿಗೆ ಮುಖ್ಯವಾದ ನಷ್ಟವೇನಲ್ಲ. ಹಾಗೆಂದುಕೊಂಡು ತನ್ನ ಕಾಯಕದಲ್ಲಿ ಮುಂದುವರಿದಿದ್ದಾನೆ.. ಚಿತ್ರದಲ್ಲಿ ಶೀಮಂತವೆಂದು ತೋರುವ ಹಡಗೂ ತೇಲುತ್ತಿದೆ. ಇಕಾರಸ್ ಬೀಳುತ್ತಿರುವ ವಿರುದ್ಧ ದಿಕ್ಕಿಗೆ ಅದು ಸಾಗುತ್ತಿರುವಂತೆ ಕಾಣುತ್ತಿದೆ. ಆ ಹಡಗಿನಲ್ಲಿ ಇರುವವರು ಇಕಾರಸ್ ಬೀಳುತ್ತಿರುವ ಭೀಕರ ದ್ರ‍ಶ್ಯವನ್ನು ನೋಡಿರಬಹುದು. ಆದರೆ ಹಡಗಿಗೆ ತನ್ನದೇ ಆದ ಗೊತ್ತು ಗುರಿಗಳಿವೆ.

ಬಾಲಕನ ಅರ್ಥಹೀನ ಆಕಸ್ಮಿಕ ಸಾವು ಘಟಿಸುತ್ತಿರುವಾಗ ಸುತ್ತಲೂ ಎನೇನೋ ನಡೆಯುತ್ತಿದೆ. ಹಾಗೆಂದು ಚಿತ್ರದ ಜೀವಿಗಳಾರೂ ಕೇಡಿಗಳೂ ಅಲ್ಲ; ಅವರ ಮೇಲೆ ಯಾವ ನೇರ ಆರೋಪವೂ ಇಲ್ಲ. ಗಂಭೀರ ದಾರುಣ ಘಟನೆಯನ್ನು ತೀರಾ ಏನೂ ಆಗಿಲ್ಲ ಎನ್ನುವ ತಟಸ್ಥ ಧೋರಣೆಯೊಂದಿಗೆ ಸ್ವೀಕಾರಾರ್ಹವಾಗುವ ಚಿತ್ರಣ ಇಲ್ಲಿದೆ.

ಅತ್ಯಂತ ಅಪೂರ್ವವಾದ ಘಟನೆ ನಡೆಯುತ್ತಿರುವಾಗಲೇ ಮತ್ತೂ ಏನೇನೋ ಅಸಂಭದ್ಧಗಳು ನಡೆಯುತ್ತಿರಬಹುದು. ಯುದ್ಧ ಭೂಮಿಯಲ್ಲಿ ಶ್ರೀಕ್ರ‍ಷ್ಣ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡುತ್ತಿರುವ ಅಮ್ರ‍ತ ಘಳಿಗೆಯಲ್ಲೇ ಅರ್ಜುನನ ಕುದುರೆಗೆ ತುರುಕೆ ಕಾಡಬಹುದು. ಅದು ತನ್ನ ಮುದ್ದಾದ ಅಂಡನ್ನು ರಥದ ಗಾಲಿಗಳಿಗೆ ಉಜ್ಜುತ್ತಾ ಸುಖಿಸುತ್ತಿರಬಹುದು. ಮೇಲೆ ಆಗಸದಲ್ಲಿ ಯುದ್ಧ ಭೂಮಿಯ ರಕ್ತದ ವಾಸನೆ ಹಿಡಿದು ಹದ್ದುಗಳು ಹರಾಡುತ್ತಿರಬಹುದು. ಮಧ್ಯದಲ್ಲೆಲ್ಲೋ ನಾಯಿಯೊಂದು ತನ್ನ ಎಂದಿನ ನಾಯಿಪಾಡಿನೊಂದಿಗೆ ಓಡಾಡುತ್ತಿರಬಹುದು. ಇದು ಅರಗಿಸಿಕೊಳ್ಳಲು ಕಷ್ಟವಾದರೂ ಅಪೂರ್ವವೆಂದು ನಮಗೆ ಅನ್ನಿಸುವ ಘಟನೆ ಜರುಗುವುದು ನಿತ್ಯದ ನಿರಂತರತೆಯಲ್ಲೇ ಅಲ್ಲವೆ?


ಈಗ ನಾವು ಬದುಕುತ್ತಿರುವ ಕಾಲವನ್ನೇ ನೋಡಿ: ಅಪಘಾತವೊಂದು ಸಂಭವಿಸಿ ಕೈ ಕಾಲು ಮುರಿದುಕೊಂಡು ಬಿದ್ದ ವ್ಯಕ್ತಿಯ ಸುತ್ತ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಅಲ್ಲೇ ಸಣ್ಣ ಸಂಧಿಯನ್ನು ಹುಡುಕಿ ನಮ್ಮ ಗಾಡಿಯನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತೇವೆ. ಆ ಜನಜಂಗುಳಿಯಲ್ಲೇ ಭಿಕ್ಷುಕರ ಹುಡುಗಿ ತಾನು ಮಾರುವ ಕರ್ಚೀಫ್ ಕೊಳ್ಳುವಂತೆ ಕಾಡುತ್ತಾಳೆ. ಅಲ್ಲಿ ಉತ್ತರ ಕರ್ನಾಟಕದ ಮಂದಿ ನೆರೆ ಹಾವಳಿಯಲ್ಲಿ ತತ್ತರಿಸಿದ್ದನ್ನು ನಾವು ಕಮರ್ಷಿಯಲ್ ಬ್ರೇಕ್ ಗಳ ಮಧ್ಯದಲ್ಲಿ ಮಾಧ್ಯಮದಲ್ಲಿ ನೋಡುತ್ತೇವೆ. ಹೀಗೆ ಬ್ರೇಕ್ ಬಂದಾಗ ಶಾರೂಖ್ ಖಾನ್ ಶಾಂಪುವನ್ನು, ಐಶ್ವರ್ಯ ರೈ ಸಾಬೂನನ್ನು, ಸಚಿನ್ ಬಿಸ್ಕೀಟನ್ನು ಮಾರುತ್ತಾರೆ. (ಭಿಕ್ಷುಕರ ಹುಡುಗಿಗೂ ಇವರಿಗೂ ಏನು ವ್ಯತ್ಯಾಸ ಎಂಬುದನ್ನು ನೀವೇ ಯೋಚಿಸಿ). ಅಲ್ಲಿ ತೆಲಂಗಾಣ ಹೋರಾಟಕ್ಕೆ ಶವ ಇಟ್ಟು ಪ್ರತಿಭಟನೆ ಮಾಡುತ್ತಿದ್ದರೆ ಇಲ್ಲಿ ನನ್ನ ಗೆಳೆಯ ತಾನು ಅರ್ಧ ತಿಂದ ಪಿಜ್ಜಾದ ರುಚಿಯನ್ನು ನನಗೆ ವಿವರಿಸುತ್ತಿದ್ದ.

ಈ ಚಿತ್ರದಲ್ಲೇ ಮುಖ್ಯವಾಗಿ ಬಿಂಬಿತವಾಗಿರುವುದು, ಕಾಡುವುದು, ಒಟ್ಟಾರೆ ತಟಸ್ಥ ಧೋರಣೆ. ಇದು ಇಂದಿನ ಬಹುದೊಡ್ಡ ಸಮಸ್ಯೆಯೂ ಹೌದು. ಇದು ನಮ್ಮನ್ನು ಸಂವೇದನಾಶೀಲತೆಯಿಂದ ಬಹು ದೂರಕ್ಕೆ ಕೊಂದೊಯ್ಯುತ್ತಿದೆ, ಚಿತ್ರದ ಆ ಹಡಗಿನಂತೆ. ಇಂದು ಮನಸ್ಸಿಗೆ ಕಂಡಂತೆ ಬೆಲೆ ಏರಿಕೆ ಆದರೂ ನಾವು ಪ್ರತಿಭಟಿಸಲಾರೆವು. ನಾವೇ ಆರಿಸಿದ ಜನಪ್ರತಿನಿಧಿಗಳು ದಿನಕ್ಕೊಂದು ಪಕ್ಷಕ್ಕೆ ಹಾರಿಕೊಂಡು ಮಂಗಾಟವಾಡಿದರೂ, ಅಭಿವ್ರ‍ದ್ಧಿ ಹೊಂದಿದ ರಾಷ್ಟ್ರ ಗಳು ತಮ್ಮ ಸಂಪನ್ಮೂಲಗಳನ್ನು ಸಂರಕ್ಷಿಸಿಕೊಂಡು ನಮ್ಮ ಗಣಿಗಳನ್ನು ಲೂಟಿಮಾಡಿದರೂ, ನಮ್ಮ ಸುರಕ್ಷತೆಗೇ ಸಂಚಕಾರ ಬರುವಂತೆ ಬಾಂಬ್ ಸ್ಫೋಟಗಳು ನಡೆವಾಗಲೂ ಅಥವಾ ಇನ್ನಾವುದೇ ನೋವಿನ ಘಟನೆ ನಡೆದಾಗಲೂ ನಾವು ಪ್ರತಿಕ್ರಿಯಿಸುವುದಿಲ್ಲ. ಬದಲಾಗಿ ನಮ್ಮ ಯಾವುದೋ ಕೆಲಸವನ್ನು ನೆನಪಿಸಿಕೊಂಡು ಅದನ್ನೇ ಮುಖ್ಯವಾಗಿಸಿಕೊಂಡು ಮುಂದೆ ಸಾಗುತ್ತೇವೆ, ಚಿತ್ರದ ರೈತನ ಹಾಗೆ. ಏಕೆಂದರೆ ನಮ್ಮ ಮೇಲೆ ನೇರ ಆರೋಪಗಳಿಲ್ಲ.

ಈಗ ಕಥೆಯನ್ನು ಮುಂದುವರೆಸಿ ನೋಡೋಣ; ಒಂದುವೇಳೆ ರೈತನೋ ಅಥವಾ ಹಡಗಿನಲ್ಲಿದ್ದವರೋ, ಮತ್ಯಾರೋ ಸಮುದ್ರಕ್ಕೆ ಧುಮುಕಿ ಹುಡುಗನನ್ನು

ರಕ್ಷಿಸಲು ಮುಂದಾದರು ಎಂದಿಟ್ಟುಕೊಳ್ಳಿ, ಅವನು ಇತರರ ಕಣ್ಣಲ್ಲಿ ತೀರಾ ಹಾಸ್ಯಾಸ್ಪದ ವ್ಯಕ್ತಿ! ಇಲ್ಲಿ ನಮಗೆ ಹುಡುಗ ಬದುಕುವುದು ಅಥವಾ ಸಾಯುವುದು ಮುಖ್ಯವಲ್ಲವಲ್ಲ!! ಇಂತಹ ಕಾರಣಗಳಿಗಾಗಿಯೇ ನಮಗೆ ಮೇಧಾ ಪಾಟ್ಕರ್ ರಂತಹಾ ಸತ್ಯಾಗ್ರಹಿ ಹೋರಾಟಗಾರರು ತೀವ್ರ ನಗೆಪಾಟಲಿಗಳಂತೆ ಅನ್ನಿಸುತ್ತಾರೆ. ಮಾಧ್ಯಮಗಳು ತೋರಿಸುವ ಒಬಾಮ ಎನ್ನುವ ಗೌರವಾನ್ವಿತ ದುಷ್ಟ ನಮ್ಮ ಕಣ್ಮಣಿ. Belive me, 'Development' is todays hottest selling idea. ನಮಗೆ ಬೇಕಿರುವುದು ಅಭಿವ್ರ‍ದ್ಧಿ. ಅದಕ್ಕಾಗಿ ನಾವು ತಟಸ್ಥರಾಗಲೂ, ಸಂವೇದನಾಶೂನ್ಯರಾಗಲೂ ಸಿದ್ಧ!!!

Sunday, February 14, 2010

ಚೇರ್ಕಾಡಿಯಿಂದ ಜಗತ್ತಿಗೆ

ನನ್ನ ಜೀವನದ ಅತ್ಯಂತ ಮಾಂತ್ರಿಕ ಜಾಗವಾದ ಚೇರ್ಕಾಡಿಯಿಂದ ನೆನಪುಗಳು ಆರಂಭವಾಗುತ್ತವೆ. ರ‍ಾತ್ರಿ ಕೊನೆಯ ಬಸ್ಸಿಳಿದು ಅಪ್ಪ ನನ್ನನ್ನು ಎತ್ತಿಕೊಂಡು ಹೊರಟಾಗ ಹಿಂಬಾಲಿಸಿದ ಮರಗಳು, ಶಾಲೆ ಎಂಬ ವಿಸ್ಮಯ, ಗೋಡೆ ಸಂಧಿಯ ಗಾಳಿಬೆತ್ತ, ದಪ್ಪನಕುಡಿಯಲ್ಲಿ ಉಜ್ಜಿದ ಸ್ಲೇಟು, ನಾಲಗೆ ನೀಲಿ ಮಾಡಿದ ಕುಂಟಾಲ ಹಣ್ಣು, ಬ್ರಹ್ಮಾವರಕ್ಕೆ ಹೊರಟ ಲಾರಿಯಿಂದ ಬಿದ್ದ ಕಬ್ಬು, ಪೆಟ್ಲಂಡೆ, ಮಾರಿ ಡೋಲು, ಕಂಬಳ, ಹೋಳಿ, ಹಂದಿ ಬೇಟೆಯ ಕೂಗು, ಮಂಗಳೂರು ಆಕಾಶವಾಣಿಯ ಪಾಡ್ದನ, ರಾತ್ರಿಯ ನೀರವದಲ್ಲಿ ಎತ್ತಲೋ ಸಾಗುತ್ತಿದ್ದ ಸಾಲು ಎತ್ತಿನ ಗಾಡಿಗಳ ಕೆಳಗೆ ಮಿಣುಕುವ ಲಾಟೀನು, ನೇಮದ ಹಸಿ ಗಂಧ.. ಹೀಗೆ ಇಲ್ಲಿನ ಬಾಲ್ಯದ ನೆನಪುಗಳೆಲ್ಲ ಹಸುರಾಗಿವೆ.

ದನ ಮೇಯಿಸುತ್ತಾ ಕುಟ್ಟಿದೊಣ್ಣೆ ಆಡುತ್ತಿದ್ದ, ಎರಡು ಒಡ್ಡಿ ಗೇರುಬೀಜ ಮಾರಿ ಚಾಕಲೇಟು ಕೊಳ್ಳುತ್ತಿದ್ದ, ದೂಪದಕಾಯಿ ಮಾರಿ ಪುಸ್ತಕಕ್ಕೊಂದು ಖಾಕಿ ದಟ್ಟಿ ಕೊಂಡು ಸಂಭ್ರಮಿಸುತ್ತಿದ್ದ, ಐಸ್ಕ್ಯಾಂಡಿಗೆಂದು ಮನೆಯಲ್ಲಿ ದಂಬಾಲುಬಿದ್ದು ನಾಲ್ಕಾಣೆ ಕೀಳುತ್ತಿದ್ದ ಹುಡುಗ ಹುಡುಗಿಯರೆಲ್ಲ ಎಲ್ಲಿ ಕಾಣೆಯಾದರು? ರಾತ್ರೆ ತೋಟದ ಬಾವಿಯಲ್ಲಿ ಚಂದ್ರ ತನ್ನ ನೆರಳು ನೋಡಿ ನಗುತ್ತಿರುವಾಗಲೆ ಹುಡುಗನೊಬ್ಬ ಮನೆ ಬಿಟ್ಟು ಓಡಿ ಹೋಗಿರಬಹುದು; ಮತ್ತು ಹೀಗೆ ಓಡಿ ಹೋದವರಿಂದ ನಗರಗಳು ನಿರ್ಮಾಣಗೊಂಡಿರಬಹುದು. ಮತ್ತೆ ನಾವೆಲ್ಲ ಸಭ್ಯರಂತೆ ಪೋಸ್ ಕೊಟ್ಟು ಅಪ್ಪ ಅಮ್ಮನಿಗೆ ಟಾಟಾ ಹೇಳಿ ಅಂಥಹ ನಗರಗಳಿಗೆ ಸಾಗಿದೆವು ಅಥವಾ ಕಳೆದುಹೋದೆವು. ಹೀಗಿದ್ದೂ ಉಡುಪಿಯ ಸಾಂಪ್ರದಾಯಿಕ ಪರಿಸರದಿಂದ ಪಾರಾದ ನಾವು ಸುಖವರಸಿ ಪಟ್ಟಣ ಸೇರಿದ ಮೇಲೂ ಲೌಕಿಕ ಯಶಸ್ಸು ಕೊಟ್ಟ ಅಧುನಿಕತೆಯಿಂದಲೂ ಚಡಪಡಿಸುತ್ತಿರುವುದೇಕೆ?

ಹಾಗೆ ನೋಡಿದರೆ ತನ್ನ ಕಾಲದಲ್ಲೇ ಆಧುನಿಕನಾಗಿ ಮಡಿವಂತರಿಗೆ ವಿರೋಧಿಯಾಗಿದ್ದವ ಉಡುಪಿಯ ಕ್ರ‍ಷ್ಣ. ಇವನು ಉಡುಪಿಯಲ್ಲಿ ಭಾರತ ಯುದ್ಧದ ಚಕ್ರಧಾರಿಯೂ ಅಲ್ಲ; ಕೊಳಲು ನುಡಿಸುವ ಮೋಹನನು ಅಲ್ಲ. ಮೊಸರು ಕಡೆಯುವ ಕಡಗೋಲು ಗೊಲ್ಲ; ಗಂಜಿ ತಿಳಿಯ ನೈವೇದ್ಯ ಅವನಿಗೆ ಪ್ರಿಯ. ಆಧುನಿಕತೆಯನ್ನು ಸಹ್ಯ ಮಾಡುವವನು ಕ್ರ‍ಷ್ಣ ಮಾತ್ರನಲ್ಲ, ಉಡುಪಿಯ ಸುತ್ತಲಿನ ಭೂತಗಳನ್ನು ನೋಡಿ. ಆಧುನಿಕ ವಿಧ್ಯುತ್ತಿನ ಝಳದಲ್ಲಿ, ಸಿನಿಮಾ ಹಾಡುಗಳಿಗೆ ದೈವಗಳು ಮೈತುಂಬಿ ಕುಣಿಯಬಲ್ಲವು! ಬೊಂಬಾಯಿಗೆ ಹೋಗಿ ಶ್ರೀಮಂತರಾದವರೆಲ್ಲ ಇದರ ಪರಮ ಭಕ್ತರು!!

ರದ್ದಿ ಕಾಗದಗಳಲ್ಲಿ ಪಾರ್ಸೆಲ್ ಪಾರ್ಸೆಲ್ ಆಗಿಬರುವ ಫ಼್ರೈಡ್ ರೈಸ್ ಅನ್ನುವ ಹಳಸಲು ಅನ್ನ ತಿನ್ನುವ ಬ್ಯಾಚುಲರ್ ನಾಲಗೆಗಳಿಗೆ ಊರಿಗೆ ಬರುವ ಸಮಯಕ್ಕೆ ಹೊಸ ಒರತೆಯೊಂದು ಉಕ್ಕುವುದುಂಟು. ಗೆಳೆಯರೊಂದಿಗೆ ಗೋಳಿಬಜೆ ತಿಂದ ಉಡುಪಿಯ ಅದೇ ಹೋಟೆಲ್ ಗಳಿಗೆ ಹೊಕ್ಕಿದರೆ ಅಲ್ಲಿಯೂ ಮೆನು ಕಾರ್ಡ್ ಬದಲಾಗಿದೆ! ಮುಂಬಯಿಯ ಚೌಪಾಟಿಯಲ್ಲೆಲ್ಲೋ ಅಲೆಯುತ್ತಿದ್ದ ಪಾವ್ ಭಾಜಿ ಕೆಂಪನೆ ಕುದಿಯುತ್ತ ಉಡುಪಿಗೆ ಲಗ್ಗೆ ಇಟ್ಟಿದೆ. ಹೋಟೆಲ್ ಮಾಣಿಗಳು ಗೋಬಿ ಮಂಚೂರಿಯನ್ನು ಗೋವರ್ಧನ ಗಿರಿಯೋಪಾದಿಯಲ್ಲಿ ಎತ್ತಿ ತಂದು ನಮ್ಮ ಮುಂದಿಡುತ್ತಾರೆ. ಜಗತ್ತಿನ ನಾಲಗೆಗಳನ್ನೆಲ್ಲ ತನ್ನ ರುಚಿಯಿಂದ ಮೆಚ್ಚಿಸಿದ, ಪಾಕಲೋಕದಲ್ಲೊಂದು ಕ್ರಾಂತಿಯನ್ನೇ ಮಾಡಿದ ಉಡುಪಿಯ ಮೇಲೆ ಈ ಖಾದ್ಯಗಳೆಲ್ಲ ಹೀಗೆ ಸೇಡು ತೀರಿಸಿಕೊಂಡಾವೆಂದು ಭಾವಿಸಿರಲಿಲ್ಲ.

ಕೆಲವು ಒಳಬಾಳುವೆಯ ಸ್ಥಿತ್ಯಂತರಗಳನ್ನು ನೋಡಿ: ಹಿಂದೆ ಮದ್ಯಾಹ್ನದ ಉರಿ ಬಿಸಿಲಿನಲ್ಲಿ ಒಬ್ಬರೆ ಓಡಾಡುವಾಗ ಕಾಡುತ್ತಿದ್ದ ಉಮ್ಮಲ್ತಿಯ ಭಯ ಇಂದು ಅಪರಾತ್ರಿಯಲ್ಲಿ ಮನೆಗೆ ಬರುವಾಗಲೂ ಇರುವುದಿಲ್ಲ. ಮನೆಗೆ ಚಂದ್ರನ್ ಕಳ್ಳ ಬರುತ್ತಾನೆ ಎಂದು ಮಲುಗುವಾಗ ದಿಂಬಿನ ಕೆಳಗೆ ಕತ್ತಿ ಇಟ್ಟುಕೊಂಡು ಮಲಗುವ ಕಾಲವೊಂದಿತ್ತು. ಇಂದು ಆತ ಬದುಕಿದ್ದರೆ ಬಹುಶಃ ನ್ಯೂಸ್ ಚಾನಲ್ ಗಳ ಒಂದು ದಿನದ ಬ್ರೇಕಿಂಗ್ ನ್ಯೂಸ್ ಅಷ್ಟೇ ಆಗಿರುತ್ತಿದ್ದನೇನೋ. ನಮಗೆ ಪಕ್ಕದ ಮನೆಯವರಷ್ಟೇ ಪರಿಚಯವಿರುತ್ತಿರಲಿಲ್ಲ. ಅವರ ಕೊಟ್ಟಿಗೆಯ ದನಗಳದ್ದು ಸಹ. ಕಳೆದುಹೋದ ದನದವನ್ನು ಹುಡುಕಿಕೊಡುವ ಉಪಯುಕ್ತರು ನಾವಗಿದ್ದೆವು. ಇಂದು ಕಳೆದುಹೋದರೆ ದನಗಳು ಮತ್ತೆ ಸಿಗುವ ಭರವಸೆ ಇಲ್ಲ. ಹುಡುಕಿಕೊಡಬಹುದಾಗಿದ್ದ ಜೀವಾತ್ಮಗಳೆಲ್ಲ ತಮ್ಮ ತಮ್ಮ ಮನೆಯ ಟೀವಿಯ ಮುಂದೆ ಕೂತಿರುತ್ತವೆ, ಇಲ್ಲವೆ ಪಟ್ಟಣಗಳಲ್ಲೆಲ್ಲೊ ವಿಳಾಸವೂ ಸಿಗದಂತೆ ಸ್ವತಃ ಕಳೆದುಹೋಗಿರುತ್ತವೆ!

ನಾವೀಗ ನಮಗೆ ಲಾಭದಾಯಕವನ್ನುವಂತೆ ಮಾತ್ರ ಬದುಕುತ್ತೆದ್ದೇವೆ. ಅಂದರೆ ಯಾಂತ್ರಿಕ ಯುಗವನ್ನು ಅಪ್ಪಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಾ, ಮಾಹಿತಿ ತಂತ್ರಜ್ನಾನದ ಮನಮೋಹಕತೆಗೆ ಮಾರುಹೋಗುತ್ತಾ, ಪಶ್ಚಿಮದ ರಾಷ್ಟ್ರಗಳ ಹಗಲುಗಳಿಗಾಗಿ, ನಮ್ಮ ರಾತ್ರಿಗಳನ್ನು ಸುಡುತ್ತಾ ಗೊಂದಲಗಳೊಂದಿಗೆ ಬದುಕುತ್ತಿದ್ದೇವೆ. ಇದೊಂದು ವಿಚಿತ್ರ ಸ್ಥಿತಿ. ನಮ್ಮ ಜನಾಂಗ ಅನುಭವಿಸುತ್ತಿರುವ ಸ್ಥಿತಿ. ಆತ್ಮವಂಚನೆಯಷ್ಟು ಸರಳವಲ್ಲದ, ಮೋಸದಾಟದಷ್ಟು ಒರಟಲ್ಲದ, ಮಾಯಾವಶವೂ ಅಲ್ಲದ, ನಟನೆಯೂ ಅಲ್ಲದ ಬ್ಯಾಡ್ ಫ಼ೈತ್(bad faith) ನಲ್ಲಿ ಬದುಕುತ್ತಿದ್ದೇವೆ.. ಫ಼್ರೆಂಚ್ ಚಿಂತಕ ಸಾರ್ತ್ರ್ ಬಳಕೆಗೆ ತಂದ ಪದಗಟ್ಟು ಇದು. ಇದೊಂದು ನಮ್ಮ ಆಯ್ಕೆಯನ್ನು ಆಯ್ಕೆಯೆಂದೇ ಗುರುತಿಸಿಕೊಳ್ಳದಂತೆ ಮಾಡುವ ಆಯ್ಕೆ.

ಆದರೆ ಒಂದನ್ನಂತು ಒಪ್ಪಿಕೊಳ್ಳಲೇ ಬೇಕು. ನಾವು ಯಾವುದನ್ನು ಸುಖ ಅಂದುಕೊಳ್ಳುತ್ತೇವೋ ಅದು ಬೇಗ ದಣಿವನ್ನೂ ತರಬಹುದು. ಹೀಗೆ ದಣಿವಾದಾಗಲೆಲ್ಲ ನಾವು ಊರ ಬಸ್ಸು ಹತ್ತುತ್ತೇವೆ. ಮತ್ತೆ ನಮ್ಮನ್ನು ಅಪ್ಪಿಕೊಂಡು ಸಂತೈಸಲು ಚೇರ್ಕಾಡಿಯಂತಹ ಹಳ್ಳಿಯೊಂದು ಅಮ್ಮನಂತೆ ನಮಗಾಗಿ ಕಾದಿರುತ್ತದೆ.