Monday, August 28, 2017

ವಿಶ್ವ ಅಂಚೆ ದಿನ


ಪ್ರತಿ ವರ್ಷ ಅಕ್ಟೋಬರ್ ೯ನೇ ತಾರೀಕಿನಂದು ವಿಶ್ವ ಅಂಚೆ ದಿನವೆಂದು ಆಚರಿಸಲಾಗುತ್ತದೆ. ೧೮೭೪ರ ಇದೇ ದಿನಾಂಕದಂದು ಸ್ವಿಟ್ಜರ್‌ಲೆಂಡಿನ ಬ್ರೆನ್ ನಗರದಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯು. ಪಿ. ಯು.) ಸ್ಥಾಪನೆಯಾಗಿತ್ತು. ಈ ಸಂಸ್ಥೆ ಜಾಗತಿಕ ಸಂವಹನ ಕ್ರಾಂತಿಗೆ ದೊಡ್ಡ ಕೊಡೆಗೆಯನ್ನು ನೀಡಿದೆ. ಅದರ ಜ್ಞಾಪಕಾರ್ಥವಾಗಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ೧೯೬೯ರಲ್ಲಿ ಜಪಾನ್ ದೇಶದ ಟೋಕಿಯೋ ನಗರದಲ್ಲಿ ನಡೆದ ಯು.ಪಿ.ಯು ಸಮ್ಮೇಳನದಲ್ಲಿ ಅಕ್ಟೋಬರ್ ೯ರಂದು ಮೊದಲ ವಿಶ್ವ ಅಂಚೆ ದಿನವೆಂದು ಘೋಷಿಸಲಾಯಿತು.

ಯು.ಪಿ.ಯು ಯುನೈಟೆಡ್ ನೇಶನ್ಸ್‌ನ ಒಂದು ಅಂಗ ಸಂಸ್ಥೆಯಾಗಿದ್ದು ಪ್ರಪಂಚದಾದ್ಯಂತ ಅಂಚೆ ಜಾಲವನ್ನು ಹೊಂದಿದೆ. ಇದು ವಿಶ್ವದ ಎರಡನೆಯ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಇದು ೧೯೨ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಅಂಚೆ ಸಂವಹನದ ನಿಯಮಾವಳಿಗಳನ್ನು ಈ ಸಂಸ್ಥೆ ನಿರ್ಣಯಿಸುತ್ತದೆ.

ಇಂದು ಬದಲಾವಣೆಯ ಗಾಳಿ ಎಲ್ಲ ರಂಗಗಳಲ್ಲೂ ಬೀಸತೊಡಗಿದೆ. ಇದಕ್ಕೆ ಅಂಚೆ ಸೇವೆಯೂ ಹೊರತಲ್ಲ. ಮನೆಯವರು, ಬಂಧು ಮಿತ್ರರು, ಸ್ನೇಹಿತರು, ಪ್ರೇಮಿಗಳು, ಕೋರ್ಟು ಕಛೇರಿ ವ್ಯವಹಾರಸ್ಥರು ದಿನ-ವಾರ-ತಿಂಗಳುಗಳ ಕಾಲ ತಮ್ಮವರಿಂದ ಬರುವ ಒಂದು ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಈಗ ಬಹಳ ವಿರಳವಾಗಿದೆ. ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ಅಂಚೆ ಕಾಗದಗಳಿಗಾಗಿ ಕಾಯುವ ಪರಿಸ್ಥಿತಿ ಇಲ್ಲ. ದಶಕಗಳ ಹಿಂದೆ ಸ್ಥಿರ ದೂರವಾಣಿ ಸೌಲಭ್ಯ ಮತ್ತು ಕಂಪ್ಯೂಟರ್ ಆಧಾರಿತ ಅಂತರ್ಜಾಲ ವ್ಯವಸ್ಥೆ ಸಂಪರ್ಕಕ್ಕೆ ಹೊಸ ವೇಗವನ್ನು ನೀಡಿದವು. ಆದರೆ ಇವು ಎಲ್ಲರ ಕೈಗೆಟುಕುವ ಸ್ಥಿತಿ ಇರಲಿಲ್ಲ. ಆದರೆ ಇಂದಿನ ಕಾಲಘಟ್ಟದಲ್ಲಿ ನಾವು ಮೊಬೈಲ್, ಸ್ಮಾರ್ಟ್‌ಫೋನುಗಳ ಮೂಲಕ ಸಂಪರ್ಕದ ಹೊಸ ಹೊಸ ದಾರಿಗಳನ್ನು ಕಂಡುಕೊಂಡಿದ್ದೇವೆ. ಕೇವಲ ಇ-ಮೇಲ್‌ಗಳಲ್ಲದೆ, ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂಪರ್ಕ ಸಾಧ್ಯವಾಗಿದೆ. ಮೊಬೈಲ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳು ಪೈಪೋಟಿಗೆ ಬಿದ್ದು ದರಗಳನ್ನು ಕಡಿಮೆಗೊಳಿಸುತ್ತಿವೆ. ಹಾಗಾಗಿ ಬಡವರು-ಶ್ರೀಮಂತರೆಂಬ ಭೇದವಿಲ್ಲದೆ ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಸಂಪರ್ಕ ಕ್ಷೇತ್ರದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಸಾಂಪ್ರದಾಯಿಕ ಅಂಚೆ ಸೇವೆ ಮಂಕಾಗಿರುವುದು ನಮ್ಮ ಮುಂದಿರುವ ವಾಸ್ತವ. ನಮ್ಮಲ್ಲಿ ಅಂಚೆ ಇಲಾಖೆ ಅಂಚೆ, ಟೆಲಿಗ್ರಾಂ, ಮನಿ ಆರ್ಡರ್, ಕೆಲವು ಹಣ ಉಳಿತಾಯ ಯೋಜನೆಗಳ ಸೀಮಿತತೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ಪೈಕಿ ಕೆಲವು ಸೇವೆಗಳು ನಿಂತು ಹೋಗಿವೆ. ಜಾಗತೀಕರಣದಿಂದ ಜನರಲ್ಲಿ ಕೊಳ್ಳಬಾಕತನ ಹೆಚ್ಚಿದ ಮೇಲೆ ಈ ಬದಲಾವಣೆಯನ್ನು ನಿರ್ವಹಿಸಲು ಬೇಕಾದ ಸಿದ್ಧತೆಗಳು ನಮ್ಮ ಅಂಚೆ ಇಲಾಖೆಯ ಬಳಿ ಇದ್ದಂತಿಲ್ಲ. ಇಂದು ಜನ ಆನ್‌ಲೈನ್ ಶಾಂಪಿಂಗ್ ಮುಖಾಂತರ ವಸ್ತುಗಳನ್ನು ಖರೀಧಿಸುತ್ತಾರೆ. ಅವು ನಿಗದಿತ ಸಮಯಕ್ಕೆ ಕೊಳ್ಳುಗರನ್ನು ತಲುಪುವ ಸೇವೆಗಳು ಲಭ್ಯವಿವೆ. ಈ ಬಗೆಯ ಬದಲಾವಣೆಯನ್ನು ಎದುರಿಸಲು ವಿಶ್ವದ ಕೆಲವು ದೇಶಗಳಲ್ಲಿ ಅಲ್ಲಿನ ಅಂಚೆ ಇಲಾಖೆಗಳು ಖಾಸಗಿ ಸಹಬಾಗಿತ್ವಕ್ಕೆ ಮೊರೆಹೋದ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. ಜಪಾನ್ ಪೋಸ್ಟ್ ಆಸ್ಟ್ರೇಲಿಯಾದ ಟೋಲ್ ಹೋಲ್ಡಿಂಗ್ಸ್ ಎಂಬ ಖಾಸಗಿ ಸಂಸ್ಥೆಯನ್ನು ಖರೀಧಿಸಿತು; ಯುನೈಟೆಡ್ ಸ್ಟೇಟ್ಸ್‌ನ ಅಂಚೆ ಇಲಾಖೆ ಅಮೇಜಾನ್ ಡಾಟ್ ಕಾಂ ಜೊತೆ ಒಪ್ಪಂದ ಮಾಡಿಕೊಂಡಿದೆ; ಆಸ್ಟೇಲಿಯಾದ ಅಂಚೆ ಇಲಾಖೆ ಚೀನಾದ ಆಲಿಬಾಬಾ ಎಂಬ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇಂತಹ ಎಲ್ಲ ಬದಲಾವಣೆ ಮತ್ತು ಸವಾಲುಗಳ ನಡುವೆ ನಾವು ಮತ್ತೊಮ್ಮೆ ವಿಶ್ವ ಅಂಚೆ ದಿನವನ್ನು ಎದುರುಗೊಳ್ಳುತ್ತಿದ್ದೇವೆ. ಈ ದಿನವನ್ನು ಜನರು ಮತ್ತು ವ್ಯವಹಾರಗಳಲ್ಲಿ ಅಂಚೆಯ ಕೊಡುಗೆಯ ಕುರಿತು ಅರಿವು ಮೂಡಿಸುವುದೇ ಆಗಿದೆ. ಅಂಚೆ ಇಲಾಖೆಗಳು ಎಲ್ಲ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆಗಳನ್ನು ನೀಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿ ವರ್ಷವೂ ಒಂದೊಂದು ವಿಷಯವನ್ನು ಗುರಿಯಾಗಿಸಿಕೊಡು ವಿಶ್ವ ಅಂಚೆ ದಿನ ಆಚರಿಸಲ್ಪಡುತ್ತದೆ. ಜಾಗತಿಕ ಮಟ್ಟದಲ್ಲಿ ಹಸಿವು, ಬಡತನ, ಅನ್ಯಾಯ, ಹವಾಮಾನ ವೈಪರೀತ್ಯ ಮೊದಲಾದವುಗಳ ವಿರುದ್ಧ ಹೋಡಲು ಇಂಬು ನೀಡುತ್ತಿದೆ ಎಂಬುದು ಈ ದಿನವನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.

(Photo Courtesy: Dreamstime)

Tuesday, February 21, 2017

ಗಂಗಾವಳಿ ನದಿಗೆ ಒಡ್ಡು


ಮಾಹಿತಿ ಕೃಪೆ: ಕರಾವಳಿ ಮುಂಜಾವು (21-2-2017)

Thursday, January 19, 2017

ಸರಳ ನಾಯಕರು

ಮಾಣಿಕ್ ಸರ್ಕಾರ್ ರವರಿಗೆ ಮಾದರಿ ಯಾರು ? : ಮಾಣಿಕ್ ಸರ್ಕಾರ್ ರವರ ಸರಳತೆ, ವೈಯುಕ್ತಿಕ ಭ್ರಷ್ಟಾಚಾರ ರಹಿತ ಪ್ರಾಮಾಣಿಕ. ವ್ಯಕ್ತಿತ್ವ ಭಾರತದ ಜನಮನವನ್ನು ಗೆದ್ದಿದೆ. ಕೇವಲ ಎಂಎಲ್ ಎ ಆದ ಕೆಲವೇಕೆಲವೇ ತಿಂಗಳಲ್ಲಿ ಕೋಟಿಗಟ್ಟಲೇ ಸಂಪಾದಿಸುವ ಇಂದಿನ ದಿನಗಳಲ್ಲಿ ೧೮ ವರ್ಷ ಮುಖ್ಯಮಂತ್ರಿಯಾಗಿದ್ದರೂ ಸ್ವಂತ ಮನೆ ಕಾರು ಇಲ್ಲದವರು ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇದು ಅವರ ವೈಯುಕ್ತಿಕ ಗುಣ ವಿಶೇಷ ಎಂದು ಜನರ ಭಾವನೆ. ಆದರೆ ಸ್ವತಃ ಮಾಣಿಕ್ ಸರ್ಕಾರ್ ರವರು ತಮಗೆ ದಾರಿ ತೋರಿಸಿದ ಮುತ್ತು ರತ್ನಗಳನ್ನು ನೆನೆಯುತ್ತಾರೆ. ತ್ರಿಪುರಾದಲ್ಲಿಯೇ ಇವರಿಗೆ ಮೊದಲು ಮುಖ್ಯಮಂತ್ರಿಗಳಾಗಿದ್ದ ನೃಪೇನ್ ಚಕ್ರವರ್ತಿ ಸರಳತೆಯ ಖಣಿ. ಅವರ ಮುಖ್ಯಮಂತ್ರಿಯಾಗಿ ಹತ್ತು ವರ್ಷವಾದ ನಂತರ ಮುಖ್ಯಮಂತ್ರಿ ಪದವಿ ತೊರೆದು ಅವರ ಸರ್ಕಾರೀ ನಿವಾಸದ ಹೊರಗೆ ಬರುವಾಗ ಒಂದು ಕೈಯಲ್ಲಿ ಪುಸ್ತಕ ತುಂಬಿದ ಒಂದು ಸೂಟ್ ಕೇಸ್ , ಬಟ್ಟೆ ತುಂಬಿದ ಮತ್ತೊಂದು ಕೈಯಲ್ಲಿ ಹಿಡಿದು ಆಟೋ ಹತ್ತಿದ ನೃಪೇನ್ ರವರ ಚಿತ್ರ ಎಂಬತ್ತರ ದಶಕದ ಕೊನೆಯಲ್ಲಿ ದೊಡ್ಡ ಸುದ್ದಿ. ನಂತರ ಅವರು ಹೋದದ್ದಾದರೂ ಎಲ್ಲಿಗೆ ? ನೇರ ಪಕ್ಷದ ರಾಜ್ಯ ಸಮಿತಿ ಕಛೇರಿಗೆ. ಏಕೆಂದರೆ ಅವರ ವಾಸ ಸ್ಥಾನ ಅಲ್ಲಿಯೇ . ಹಾಗೆಯೇ ಆದಿವಾಸಿಗಳ ನೆಚ್ಚಿನ ನಾಯಕ ದಶರಥ್ ದೇಬ್ ಆದಿವಾಸಿಗಳೊಡನೆ ವಾಸಿಸುತ್ತಾ ಅವರಿಗೆ ಅಕ್ಷರ ಜ್ಞಾನ ಮೂಡಿಸುತ್ತಾ ಬೆಳೆದವರು. ಭಾರತದ ಮೊಟ್ಟಮೊದಲ ಲೋಕಸಭೆಯ ಸದಸ್ಯರು ಮತ್ತು ಹಲವು ಬಾರಿ ಸಂಸತ್ ಸದಸ್ಯರು, ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು. ಅವರ ಸರಳ ಜೀವನವೂ ಈಶಾನ್ಯ ಭಾರತದಲ್ಲಿ ಮನೆ ಮಾತು.

ಮಾಹಿತಿ ಕೃಪೆ: ಜಿ.ಎನ್. ನಾಗರಾಜ (ಅವರ ಫೇಸ್ ಬುಕ್ ವಾಲ್‌ನಿಂದ)

Wednesday, January 18, 2017

ಸರ್ಕಾರಿ ಪ್ರಶಸ್ತಿಗಳನ್ನು ಏಕೆ ನಿಷೇಧಿಸಬಾರದು?

ಮತ್ತೊಂದು ಗಣರಾಜ್ಯೋತ್ಸವ (ಜನವರಿ 26) ಬರುತ್ತಿದೆ. ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಗಳಿಗೆ ನಡೆಯುವ ಲಾಬಿ ಮತ್ತೊಮ್ಮೆ ತಾರಕಕ್ಕೇರಿದೆ ಎನ್ನುವ ವರದಿಗಳು ಬರುತ್ತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರವೊಂದು ಪ್ರಶಸ್ತಿ– ಪಾರಿತೋಷಕಗಳನ್ನು ನೀಡುವುದೇ ಒಂದು ಅಸಂಗತತೆಯಾದರೆ ಅದನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡುತ್ತಿರುವುದು ಅದಕ್ಕಿಂತ ದೊಡ್ಡ ಅಸಂಗತತೆ.

ಗಣರಾಜ್ಯ ದಿನ ಸಂಕೇತಿಸುವುದು ಭಾರತ ಅರಸೊತ್ತಿಗೆಯ ಬಾಹುಗಳಿಂದ ಸರ್ವವಿಧದಲ್ಲೂ ಕಳಚಿಕೊಂಡದ್ದನ್ನು. ಗಣರಾಜ್ಯದ ಸಂದರ್ಭದಲ್ಲಿ ಚುನಾಯಿತ ಸರ್ಕಾರಗಳು ನೀಡುವ ಪದವಿ, ಪುರಸ್ಕಾರಗಳು ಪ್ರತಿನಿಧಿಸುವುದು ಅರಸೊತ್ತಿಗೆಯ ಕಾಲದ ಆಚರಣೆಯ ಪಳೆಯುಳಿಕೆಗಳನ್ನು.

ಐವತ್ತರ ದಶಕದಲ್ಲಿ ಈ ಪ್ರಶಸ್ತಿಗಳನ್ನು ಸಂಸ್ಥಾಪಿಸಿದ ಸ್ವಾತಂತ್ರ್ಯ ನಂತರದ ಮೊದಲನೆಯ ತಲೆಮಾರಿನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಗಣರಾಜ್ಯ ಘೋಷಣೆಯಾದ ಆರೂವರೆ ದಶಕಗಳ ನಂತರ ಪ್ರವರ್ಧಮಾನಕ್ಕೆ ಬಂದಿರುವ ಇಂದಿನ ತಲೆಮಾರಿಗೂ ಸರ್ಕಾರದಿಂದ ಬರುವ ಪ್ರಶಸ್ತಿಗಳ ಮೇಲೆ ಆಕರ್ಷಣೆ ಕಡಿಮೆಯಾಗಿಲ್ಲ. ಸರ್ಕಾರವನ್ನೂ, ರಾಜಕಾರಣವನ್ನೂ, ರಾಜಕಾರಣಿಗಳನ್ನೂ ಜುಗುಪ್ಸೆಯಿಂದ ನೋಡುತ್ತಲೇ ಇವು ಮೂರೂ ಮೇಳೈಸಿದ ವ್ಯವಸ್ಥೆ ನೀಡುವ ಬಿರುದು–ಬಾವಲಿಗಳಿಗೆ ಭಾರತದ ಜನ ಇನ್ನಿಲ್ಲದಂತೆ ಪರವಶರಾಗಿರುವ ಸ್ಥಿತಿ ಆಧುನಿಕ ಪ್ರಜಾತಂತ್ರದ ವೈಚಿತ್ರ್ಯಗಳಲ್ಲಿ ಒಂದು.

ಬಹುಶಃ ಭಾರತದಲ್ಲಿದ್ದಷ್ಟು ಸರ್ಕಾರೀ ಪ್ರಶಸ್ತಿಗಳು ಇನ್ಯಾವ ದೇಶದಲ್ಲೂ ಇಲ್ಲ. ಈ ಪ್ರಶಸ್ತಿಗಳದ್ದು ಮತ್ತು ಅವುಗಳಿಗಾಗಿ ನಡೆಯುವ ಲಾಬಿಗಳದ್ದೇ ಒಂದು ಉದ್ಯಮ.ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳಿಂದ ಹಿಡಿದು, ಜಿಲ್ಲಾ-ತಾಲ್ಲೂಕು ಮಟ್ಟದವರೆಗಿನ ಎಲ್ಲಾ ಪ್ರಶಸ್ತಿಗಳ ಕತೆಯೂ ಒಂದು ರೀತಿಯಲ್ಲಿ ಭಾರತದ ಕರೆನ್ಸಿ ನೋಟುಗಳ ಕತೆ.

ಈ ಪ್ರಶಸ್ತಿಗಳನ್ನು ಪಡೆದವರಲ್ಲಿ ಎಷ್ಟು ಮಂದಿ ಸಾಚಾ ಮತ್ತು ಎಷ್ಟು ಮಂದಿ ಕೋಟಾ (ಅಂದರೆ ಲಾಬಿ ಮಾಡಿ, ಒತ್ತಡ ತಂದು ಪಡೆದುಕೊಂಡವರು) ಎಂದು ಪ್ರತ್ಯೇಕಿಸಲಾಗದ ಸ್ಥಿತಿ. ಒಂದು ಪ್ರಶ್ನೆ ಮೂಡುತ್ತದೆ. ನೋಟುಗಳ ಪೈಕಿ ಯಾವುದು ಅಸಲಿ, ಯಾವುದು ಖೋಟಾ, ಯಾವುದು ಕಪ್ಪು, ಯಾವುದು ಬಿಳಿ ಎಂದು ತಿಳಿಯದಾದಾಗ ಅಂತಹ ನೋಟುಗಳನ್ನೇ ರದ್ದುಪಡಿಸಿದ ಹಾಗೆ ಪ್ರಶಸ್ತಿ ಪಡೆದವರ ಮಧ್ಯೆ ಯಾರು ಸಾಚಾ, ಯಾರು ಖೋಟಾ ಎಂದು ತಿಳಿಯದ ಸ್ಥಿತಿಯಲ್ಲಿ ಈ ಎಲ್ಲಾ ಪ್ರಶಸ್ತಿಗಳನ್ನು ರದ್ದು ಮಾಡಿದರೆ ಹೇಗೆ? ಮೇಲ್ನೋಟಕ್ಕೆ ಈ ಪ್ರಶ್ನೆ ತಲೆಹರಟೆಯ ಹಾಗೆ ಕೇಳಿಸಬಹುದು. ಆದರೆ ಹಲವು ಕಾರಣಗಳಿಗಾಗಿ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಮೊದಲನೆಯದಾಗಿ ಪ್ರಶಸ್ತಿಗಳನ್ನು ನೀಡುವುದು ಸರ್ಕಾರದ ಕೆಲಸವಲ್ಲ ಮತ್ತು ಅದು ಸರ್ಕಾರದ ಕೆಲಸ ಆಗಬಾರದು ಕೂಡ. ಹೀಗೆ ಹೇಳಲು ಕಾರಣಗಳಿವೆ. ರಾಜಕೀಯ ತತ್ವಶಾಸ್ತ್ರದಲ್ಲಿ ಒಪ್ಪಿತವಾದ ಹಾಗೆ ಸರ್ಕಾರ ಎನ್ನುವ ವ್ಯವಸ್ಥೆ ತಾನು ಯಾವ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕೋ ಅದನ್ನು ಮಾತ್ರ ಮಾಡಬೇಕು. ಅಂದರೆ, ಒಂದು ಕೆಲಸ ಸಮಾಜದ ಸ್ವಾಸ್ಥ್ಯಕ್ಕೆ ತೀರಾ ಅಗತ್ಯವಿದ್ದು ಅದನ್ನು ಬೇರೆ ಯಾರೂ ಮಾಡುವ ಸಾಧ್ಯತೆ ಇಲ್ಲ ಎಂದಾದರೆ ಅದು ಸರ್ಕಾರದ ಕೆಲಸ ಆಗುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೆಲವು ಕೆಲಸಗಳು ಎಲ್ಲರಿಗೂ ಅಗತ್ಯವಿರುತ್ತವೆ, ಆದರೆ ಯಾರೂ ಅವುಗಳನ್ನು ಮಾಡಲು ಸಿದ್ಧವಿರುವುದಿಲ್ಲ. ಅಂತಹ ಕೆಲಸಗಳನ್ನು ಮಾಡುವುದು ಮಾತ್ರ ಸರ್ಕಾರದ ಮೂಲಭೂತ ಜವಾಬ್ದಾರಿ. ಯಾವ ಕೆಲಸವನ್ನು ಮಾಡುವುದು ಸರ್ಕಾರಕ್ಕೆ ಅನಿವಾರ್ಯ ಅಲ್ಲವೋ ಅಂತಹ ಕೆಲಸದ ಉಸಾಬರಿಗೆ ಸರ್ಕಾರ ಹೋಗಬಾರದು. ಪ್ರಶಸ್ತಿಗಳನ್ನು ನೀಡುವುದು ಯಾವ ದೃಷ್ಟಿಯಿಂದ ನೋಡಿದರೂ ಸರ್ಕಾರವೊಂದು ಮಾಡಲೇಬೇಕಾದ ಅನಿವಾರ್ಯ ಕೆಲಸ ಅಲ್ಲ.

ಪ್ರಶಸ್ತಿಗಳನ್ನು ನೀಡುವುದು ಸರ್ಕಾರ ಮಾಡಬೇಕಾದ ಕೆಲಸ ಎಂದು ತರ್ಕಕ್ಕೋಸ್ಕರ ಒಪ್ಪಿಕೊಂಡರೂ ಇದು ಸರ್ಕಾರ ಮಾಡಲಾಗದ ಮತ್ತು ಮಾಡಬಾರದ ಕೆಲಸ.ಯಾಕೆಂದರೆ, ಇಲ್ಲಿ ಪ್ರಾಯೋಗಿಕವಾಗಿ ಹಾಗೂ ಸಾಂವಿಧಾನಿಕವಾಗಿ ಸಾಧುವಲ್ಲದ ಹಲವು ಅಂಶಗಳಿವೆ.

ಸರ್ಕಾರ ಪ್ರಶಸ್ತಿಗಳನ್ನು ನೀಡುವಾಗ ವಿವಿಧ ರಂಗಗಳ ಸಾಧಕರಿಗೆ ತಾನು ಪ್ರಶಸ್ತಿ ನೀಡುತ್ತೇನೆ ಎನ್ನುತ್ತದೆ. ವಿವಿಧ ಎಂದರೆ ಎಷ್ಟು ರಂಗಗಳು? ಎಷ್ಟೇ ಪ್ರಯತ್ನಿಸಿದರೂ ಕೆಲ ಕ್ಷೇತ್ರಗಳು ಸರ್ಕಾರದ ಪ್ರಶಸ್ತಿಯ ವ್ಯಾಪ್ತಿಯ ಹೊರಗೆ ಉಳಿದೇ ಉಳಿಯುತ್ತವೆ. ಹಾಗಾದರೆ, ಸರ್ಕಾರ ಗುರುತಿಸಿ ಪ್ರಶಸ್ತಿ ನೀಡುವ ರಂಗಗಳು ಮಾತ್ರ ಈ ದೇಶಕ್ಕೆ, ಈ ಸಮಾಜಕ್ಕೆ ಕೊಡುಗೆ ನೀಡುವ ರಂಗಗಳೇ, ಉಳಿದ ರಂಗಗಳು ನೀಡುವ ಕೊಡುಗೆಗಳು ಕನಿಷ್ಠವೇ?

ಕೆಲವು ಕ್ಷೇತ್ರಗಳು ರಾಷ್ಟ್ರ ಮಟ್ಟದ ಮನ್ನಣೆಗೆ ಯೋಗ್ಯ, ಇನ್ನು ಕೆಲ ರಂಗಗಳು ರಾಜ್ಯ ಮಟ್ಟಕ್ಕೆ ಸೀಮಿತ ಹಾಗೂ ಉಳಿದವುಗಳು ಹೆಚ್ಚೆಂದರೆ ಸ್ಥಳೀಯ ಮಟ್ಟದ ಪ್ರಶಸ್ತಿಗಷ್ಟೇ ಅರ್ಹ ಎಂದು ಪರಿಗಣಿಸುವುದು ಪಕ್ಕಾ ಪಕ್ಷಪಾತ ನೀತಿ.

ವಿಜ್ಞಾನಿಯೊಬ್ಬನ ಜ್ಞಾನ ಶ್ರೇಷ್ಠ ಪ್ರಶಸ್ತಿಗೆ ಅರ್ಹ, ಕೃಷಿಕನ, ಬಡಗಿಯ, ಕುಂಬಾರನ ಜ್ಞಾನ ಪ್ರಶಸ್ತಿಗೆ ಅರ್ಹವಲ್ಲ ಅಥವಾ ಅರ್ಹವಾಗಿದ್ದರೂ ಅದು ಸ್ಥಳೀಯ ಮಟ್ಟದ ಪ್ರಶಸ್ತಿಗೆ ಮಾತ್ರ ಯೋಗ್ಯ ಎ೦ದು ನಿರ್ಧರಿಸಲು ಸರ್ಕಾರಕ್ಕೆ ಏನು ಹಕ್ಕಿದೆ? ಸಿನಿಮಾ, ಸಾಹಿತ್ಯ ಇತ್ಯಾದಿಗಳನ್ನು ಶ್ರೇಷ್ಠ, ಕನಿಷ್ಠ ಎಂದು ವಿಭಾಗಿಸುವ ಕೆಲಸ ಸರ್ಕಾರವೇಕೆ ವಹಿಸಿಕೊಳ್ಳಬೇಕು? ಇನ್ನು ‘ಮೇಲ್ಮಟ್ಟದ’ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದವರನ್ನು ಬೇರೆಯೇ ವರ್ಗದ ಪ್ರಜೆಗಳು ಎಂದು ನೋಡುವ ಪರಿಪಾಠವೂ ಬೆಳೆದುಬಂದಿದೆ.

ಇಂತಹ ಪ್ರಶಸ್ತಿ ಪಡೆದವರಿಗೆ ಸೈಟು ಪಡೆಯುವಾಗ ಅಷ್ಟು ಪ್ರಾಶಸ್ತ್ಯ, ಇನ್ನೇನೋ ಪಡೆಯುವಾಗ ಇಷ್ಟು ಪ್ರಾಶಸ್ತ್ಯ ಅಂತ ನಿರ್ಧರಿಸುವುದು ಎಂದರೆ ಸಾಂವಿಧಾನಿಕ ಸಮಾನತೆಯ ಆಶಯಗಳನ್ನು ಅಲ್ಲಗಳೆದಂತೆ. ಈಗಾಗಲೇ ಹಲವು ರೀತಿಯ ಮೇಲು, ಕೀಳು ವ್ಯವಸ್ಥೆಗಳು ಗಟ್ಟಿಯಾಗಿರುವ ಭಾರತೀಯ ಸಮಾಜದಲ್ಲಿ ಪ್ರಶಸ್ತಿಗಳು ಇನ್ನೊಂದು ರೀತಿ ವರ್ಣಾಶ್ರಮ ವ್ಯವಸ್ಥೆಯನ್ನು ಹುಟ್ಟುಹಾಕುತ್ತಿವೆ.

ಒಂದೆರಡು ವರ್ಷಗಳ ಹಿಂದೆ ಕೆಲ ಪ್ರಶಸ್ತಿ ವಿಜೇತರು ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟಿಸಿದರು. ಈ ಪ್ರತಿಭಟನೆಗೆ ಹಲವು ಕಾರಣಗಳಿದ್ದವು. ಆ ಕಾರಣಗಳಲ್ಲಿ ಒಂದು ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿ ಅಸಹಿಷ್ಣುತೆ ಪೋಷಿಸುತ್ತದೆ ಎನ್ನುವ ಆಪಾದನೆಯಾಗಿತ್ತು. ಪ್ರತಿಭಟನಾಕಾರರು ಈ ಕಾರಣ ನೀಡಿದಾಗ ಬಲಪಂಥೀಯ ವಕ್ತಾರರೆಲ್ಲಾ ಪ್ರಶಸ್ತಿ ಹಿಂದಿರುಗಿಸಿದವರ ಮೇಲೆ ಮುಗಿಬಿದ್ದರು. ಇತರರು ಇದೊಂದು ದೊಡ್ಡ ಪ್ರತಿಭಟನಾ ಅಸ್ತ್ರ ಎಂದರು.

ಈ ಪರ-ವಿರೋಧ ತಾಕಲಾಟಗಳ ಮಧ್ಯೆ ಒಂದು ಪ್ರಮುಖ ವಿಚಾರ ಪ್ರಸ್ತಾಪವಾಗದೆ ಹೋಯಿತು. ಅದು ಏನು ಎಂದರೆ ಒಮ್ಮೆ ಪ್ರಶಸ್ತಿ ಸ್ವೀಕರಿಸಿದ ಯಾರೇ ಆದರೂ ಅದನ್ನು ಹಿಂದಿರುಗಿಸಿ ಪ್ರತಿಭಟಿಸುವ ನೈತಿಕಶಕ್ತಿ ಕಳೆದುಕೊಂಡಿರುತ್ತಾರೆ. ಅಷ್ಟರಮಟ್ಟಿಗೆ ಪ್ರಶಸ್ತಿ ಹಿಂದಿರುಗಿಸಿದವರ ಮೇಲೆ ಬಲಪಂಥೀಯರು ಮಾಡಿದ ಟೀಕೆ ಒಪ್ಪಿಕೊಳ್ಳುವಂತಹದ್ದು.

ಸರ್ಕಾರವನ್ನು ಸದಾ ಎಚ್ಚರದಲ್ಲಿರುವಂತೆ ಮಾಡುವ ನೈತಿಕ ಹೊಣೆಗಾರಿಕೆ ತಮ್ಮ ಮೇಲೆ ಇದೆ ಎನ್ನುವುದನ್ನು ಒಪ್ಪಿಕೊಂಡ ಯಾರೂ ಕೂಡಾ ಸರ್ಕಾರ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಲೇಬಾರದು. ಸರ್ಕಾರ ಪ್ರಶಸ್ತಿ ನೀಡುವುದು ಒಂದು ಪ್ರಜಾಸತ್ತಾ-ವಿರೋಧಿ ಕ್ರಮ. ಇಂತಹ ಒಂದು ವಿಧದ ಪ್ರಜಾತಂತ್ರ ವಿರೋಧಿ ಕ್ರಮದಲ್ಲಿ ಭಾಗಿಯಾದ ನಂತರ ಸರ್ಕಾರ ಮಾಡುವ ಅಂತಹ ಇನ್ನೊಂದು ಕೆಲಸವನ್ನು ವಿರೋಧಿಸಿ ಪ್ರಶಸ್ತಿ ಹಿ೦ದಿರುಗಿಸುವುದು ಎಂದರೆ ತಮಗಿಲ್ಲದ ನೈತಿಕ ಶಕ್ತಿಯನ್ನು ಪ್ರದರ್ಶಿಸಲು ಹೊರಟಂತೆ.

ಸರ್ಕಾರ ಎಂಬುದು ಜನ ಸದಾ ಗುಮಾನಿಯಿಂದ ಗಮನಿಸುತ್ತಿರಬೇಕಾದ ಒಂದು ಸಂಸ್ಥೆ. ಕೆಲ ವೃತ್ತಿಗಳನ್ನು ವಹಿಸಿಕೊಂಡವರು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಿರಬೇಕು. ಮುಖ್ಯವಾಗಿ ಸಾಹಿತಿಗಳು, ಪತ್ರಕರ್ತರು, ಸಮಾಜ ಸುಧಾರಕರು, ಹೋರಾಟಗಾರರು ಸರ್ಕಾರದ ಪ್ರಶಸ್ತಿಗಳನ್ನು ಪಡೆಯುವುದು ಎಂದರೆ ಅವರಿಗಿರುವ ಮೂಲಭೂತವಾದ ಈ ಜವಾಬ್ದಾರಿಯಿಂದ ಹೊರಹೋಗುವುದೆಂದೇ ಭಾವಿಸಬೇಕಾಗುತ್ತದೆ. ಆದುದರಿಂದ ಪ್ರಶಸ್ತಿಯನ್ನು ಹಿಂದಿರುಗಿಸುವುದು ಪ್ರತಿಭಟನೆಯಾಗುವುದಿಲ್ಲ. ಪ್ರಶಸ್ತಿಯ ನಿರಾಕರಣೆ ಮಾತ್ರ ಪ್ರಶಸ್ತಿಗಳ ಮೂಲಕ ಮಾಡಬಹುದಾದ ಪ್ರತಿಭಟನೆ.

ಫ್ರೆಂಚ್ ಬರಹಗಾರ ಮತ್ತು ತತ್ವಶಾಸ್ತ್ರಜ್ಞ ಜೀನ್ ಪಾಲ್ ಸಾರ್ತ್ರ್ ಅವರು 1964ರ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಅದನ್ನು ಸ್ವೀಕರಿಸಲು ಅವರು ನಿರಾಕರಿಸಿದರು. ಆ ಸಂದರ್ಭದಲ್ಲಿ ಅವರು ನೊಬೆಲ್ ಆಯ್ಕೆ ಸಮಿತಿಗೆ ಬರೆದ ಪತ್ರದಲ್ಲಿ ಪ್ರಶಸ್ತಿ ನಿರಾಕರಿಸಿದ್ದಕ್ಕೆ ನೀಡುವ ಒಂದು ಕಾರಣ ಹೀಗಿದೆ: ‘ಸಾರ್ತ್ರ್, ಫ್ರೆಂಚ್ ಬರಹಗಾರ ಎಂದು ದಾಖಲಾಗುವ ನನ್ನ ಸಹಿ ಯಾವತ್ತೂ ಸಾರ್ತ್ರ್, ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ಬರಹಗಾರ ಎಂದು ದಾಖಲಾಗುವ ನನ್ನ ಸಹಿಗಿಂತ ಹೆಚ್ಚು ಪ್ರಬಲವಾಗಿರುತ್ತದೆ. ಅದನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ’. ನೊಬೆಲ್ ಪ್ರಶಸ್ತಿಯನ್ನು ಸರ್ಕಾರೇತರ ಸಂಸ್ಥೆ ನೀಡುತ್ತದೆ. ಸರ್ಕಾರ ನೀಡುವ ಪ್ರಶಸ್ತಿಗಳ ವಿಚಾರದಲ್ಲಿ ಸಾರ್ತ್ರ್ ಹೇಳಿದ್ದು ಇನ್ನೂ ಹೆಚ್ಚು ಸತ್ಯವಾಗಿರುತ್ತದೆ.

ಪ್ರಶಸ್ತಿಯೊಂದು ಪ್ರಶಸ್ತಿ ಅಂತ ಅನಿಸುವುದು ಅದರ ಆಯ್ಕೆ ನಿಷ್ಪಕ್ಷಪಾತವಾಗಿ ನಡೆದಾಗ. ಭಾರತದಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಿಷ್ಪಕ್ಷಪಾತ ಆಯ್ಕೆ ಸಾಧ್ಯವೇ ಇಲ್ಲ. ನಮ್ಮ ಪ್ರಜಾಸತ್ತೆ ಇನ್ನೂ ಅಷ್ಟೊಂದು ಪ್ರಬುದ್ಧತೆ ಹೊಂದಿಲ್ಲ. ಎಲ್ಲಾ ಜಾತಿಗಳಿಗೆ, ಎಲ್ಲಾ ಧರ್ಮಗಳಿಗೆ, ಎಲ್ಲಾ ಪ್ರಾಂತ್ಯಗಳಿಗೆ, ಎಲ್ಲಾ ತತ್ವಗಳಿಗೆ ಹೊಂದಿಸಿ ಸರ್ಕಾರಗಳು ನೀಡುವ ಪ್ರಶಸ್ತಿಗಳನ್ನು ಯಾರೂ ಪ್ರಶಸ್ತಿ ಎಂದು ಕರೆಯಲು ಸಾಧ್ಯವೇ ಇಲ್ಲ. ಅದು ಸರ್ಕಾರ ನೀಡುವ ಉಡುಗೊರೆ.

ಪ್ರಶಸ್ತಿ ಪಡೆದವರಲ್ಲಿ ಕೆಲವು ಮಂದಿ ಅದಕ್ಕೆ ಸಂಪೂರ್ಣ ಅರ್ಹರಿರಬಹುದು ಮತ್ತು ಯಾವುದೇ ಲಾಬಿ ನಡೆಸದೆ ಅವರಿಗೆ ಪ್ರಶಸ್ತಿ ಬಂದಿರಬಹುದು. ಆದರೆ ಅಂತಹ ಅರ್ಹರ ಬಗ್ಗೆ ಪ್ರಶಸ್ತಿ ಬರುವ ಮೊದಲೇ ಸಮಾಜಕ್ಕೆ ತಿಳಿದಿರುತ್ತದೆ. ಪ್ರಶಸ್ತಿ ಬರುವುದರಿಂದ ಅವರಿಗೆ ಏನೂ ಆಗಬೇಕಿಲ್ಲ. ಬದಲಿಗೆ, ಪ್ರಶಸ್ತಿ ಪಡೆದ ಅನರ್ಹರ ಜತೆ ಅವರ ಹೆಸರಿನ ಸಮೀಕರಣವಾಗಿ ಕೆಲವೊಮ್ಮೆ ಅವರ ಗೌರವ ಕಡಿಮೆ ಆದರೂ ಆದೀತು.

ಇನ್ನು, ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸರ್ಕಾರ ಗೌರವಿಸುವುದರಿಂದ ಅಂತಹವರಿಗೆ ತಮ್ಮ ಕೆಲಸ ಮುಂದುವರಿಸಲು ಪ್ರೇರಣೆ ನೀಡಿದಂತಾಗುತ್ತದೆ ಮತ್ತು ಬೇರೆಯವರು ನಿಸ್ವಾರ್ಥ ಸೇವೆಯಲ್ಲಿ ತೊಡಗಲು ಸ್ಫೂರ್ತಿಯಾಗುತ್ತದೆ ಎನ್ನುವ ವಾದವಿದೆ. ಇದು ವಿತಂಡವಾದ. ನಿಸ್ವಾರ್ಥ ಸೇವೆಯಲ್ಲಿ ತೊಡಗಿದವರು ಪ್ರಶಸ್ತಿಯಿಂದ ಪ್ರೇರಣೆ ಪಡೆಯುತ್ತಾರೆ ಎಂದಾದರೆ ಅವರ ನಿಸ್ವಾರ್ಥತೆಯನ್ನೇ ಅವಮಾನಿಸಿದಂತೆ.

ಪ್ರಶಸ್ತಿ ಇದೆ ಎನ್ನುವ ಕಾರಣಕ್ಕೆ ಮುಂದೆ ಯಾರಾದರೂ ನಿಸ್ವಾರ್ಥ ಸೇವೆಯಲ್ಲಿ ತೊಡಗಬಹುದು ಎಂದರೆ ಪ್ರಶಸ್ತಿ ಆಸೆಗೆ ಅವರು ಹಾಗೆ ಮಾಡಬಹುದು ಎಂದ ಹಾಗಾಯಿತು. ನಿಸ್ವಾರ್ಥ ಸೇವೆ ಮಾಡುವವರು ಹಾಗೆ ಮಾಡುವುದು ಆ೦ತರಿಕ ಪ್ರೇರಣೆಯಿಂದ. ತಮ್ಮ ಆತ್ಮದ ಹಸಿವಿನ ಕಾರಣಕ್ಕೆ. ನಿಸ್ವಾರ್ಥ ಸೇವೆ ಬೆಲೆ ಕಟ್ಟಲಾಗದ್ದು. ಅದಕ್ಕೆ ಪ್ರಶಸ್ತಿ ನೀಡುವುದು ಎಂದರೆ ಅದರ ಬೆಲೆ ತಗ್ಗಿಸುವುದು ಎಂದರ್ಥ.

ದೆಹಲಿಯಲ್ಲಿ ಈಗ ರಾಷ್ಟ್ರ ಪ್ರಶಸ್ತಿಗಳಿಗಾಗಿ ನಡೆಯುತ್ತಿರುವ ಲಾಬಿಗಳ ವಿಚಾರ ಪ್ರಸ್ತಾಪಿಸಿ ಹಿಂದಿನ ಕೇಂದ್ರ ಮಂತ್ರಿ ಜೈರಾಮ್ ರಮೇಶ್ ಬರೆದ ಲೇಖನದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎನ್. ಹಕ್ಸರ್ ಪದ್ಮ ಪ್ರಶಸ್ತಿ ನಿರಾಕರಿಸಿದ ಬಗ್ಗೆ ಪ್ರಸ್ತಾಪಿಸಿದ್ದರು. 1970ರ ದಶಕದಲ್ಲಿ ಅಂದಿನ ಕೇಂದ್ರ ಸರ್ಕಾರದ ಎಲ್ಲಾ ಯಶಸ್ವೀ ನಿರ್ಧಾರಗಳ ಹಿಂದಿನ ಬೌದ್ಧಿಕ ಶಕ್ತಿಯಾಗಿದ್ದ ಹಕ್ಸರ್‌್ ಪ್ರಶಸ್ತಿ ನಿರಾಕರಿಸುವಾಗ ಹೇಳಿದ್ದರಂತೆ: ‘ಸಂಬಳ ಪಡೆದು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಪ್ರಶಸ್ತಿ ಸ್ವೀಕರಿಸುವುದನ್ನು ನನ್ನ ಆತ್ಮ ಸಾಕ್ಷಿ ಒಪ್ಪುವುದಿಲ್ಲ’.

ಈ ಮಧ್ಯೆ ಉಡುಪಿಯ ಜಿ. ರಾಜಶೇಖರ್ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಬಯಸಿದ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಅವರಿಗೆ ಅಭಿನಂದನೆ. ಗಣರಾಜ್ಯ ದಿನಕ್ಕೊಂದು ಅರ್ಥ ಬರಬೇಕಾದರೆ ಅಂದು ನಾವು ಪ್ರಶಸ್ತಿಗಳನ್ನು ನಿರಾಕರಿಸಿದವರನ್ನು ನೆನಪಿಸಿಕೊಳ್ಳಬೇಕು; ಪ್ರಶಸ್ತಿ ಸ್ವೀಕರಿಸಿದವರನ್ನಲ್ಲ. ಪ್ರಶಸ್ತಿ ಪಡೆದವರು ತಮ್ಮ ಹೆಸರಿನ ಮುಂದೆ ಪ್ರಶಸ್ತಿಯ ಹೆಸರು ಸೇರಿಸುವುದು ಸಮಾನತೆಯ ಆಶಯಕ್ಕೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡುವುದನ್ನು ಸಂವಿಧಾನ ನಿಷೇಧಿಸಿದೆ. ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಅದನ್ನೇ ಒತ್ತಿ ಹೇಳಿದೆ. ಆದರೂ ತಮ್ಮ ಹೆಸರಿನ ಮುಂದೆ ಪದ್ಮಭೂಷಣ, ಪದ್ಮವಿಭೂಷಣ ಎಂದೆಲ್ಲ ಸೇರಿಸುವವರು ಇಡೀ ಗಣತಂತ್ರದ ಪರಿಕಲ್ಪನೆಯನ್ನೇ ಅಣಕಿಸುತ್ತಿದ್ದಾರೆ.

ಮಾಹಿತಿ ಕೃಪೆ: ನಾರಾಯಣ ಎ ಅವರ ಪ್ರಜಾವಾಣಿಯ "ಅನುರಣನ" ಅಂಕಣ (16 Jan, 2017)

India slips to 92nd rank on global talent competitiveness


Davos: India has slipped 3 places to 92nd rank on the global index of talent competitiveness that measures how countries grow, attract and retain talent, a list topped by Switzerland.

India's ranking is worst among the five BRICS countries. While China was ranked at the 54th place, Russian Federation was placed at 56th, followed by South Africa at 67th and Brazil 81st.

Switzerland topped the overall index, followed by Singapore and the United Kingdom in second and third places respectively, in the list released today by INSEAD Produced in partnership with The Adecco Group and the Human Capital Leadership Institute of Singapore (HCLI).

Others in the top 10 include the United States (4th), Sweden (5th), Australia (6th), Luxembourg (7th), Denmark (8th), Finland (9th) and Norway (10th).

Last year, India came in at 89th on the index as reports says.

The report noted that the BRICS countries are not getting stronger and both China and India have slipped from their year-ago rankings.

PTI

"Although China attains an impressive 4th place in the sub-pillar of Talent Impact and is solid in the Grow pillar - mainly supported by good formal education (23rd) and lifelong learning (20th), the shortage of vocational and technical skills shows up clearly," the report said.

While India stood on a relatively solid pool of global knowledge skills compared with other emerging markets, the country is not able to retain and attract talent.

In terms of retaining and attracting talent, India was ranked at a lowly 104th and 114th, respectively.

"This is not likely to improve until India boosts performance in its regulatory (94th) and market (99th) landscapes," the report said.

PTI

Information Courtesy : Deccan Herald (17-Jan-2017)

Overhyped SEZs, a huge failure


The Special Economic Zones (SEZs), launched by the Central government with a lot of fanfare over a decade ago, has turned into such a quagmire that no one seems to be keen on revisiting it. But a re-evaluation of the status of these SEZs and the remedial action required to be taken will have to be addressed now with the Supreme Court issuing notices to the Centre and several state governments to submit their responses to a Public Interest Litigation (PIL) seeking the return of the bulk of unused land to farmers. The Andhra Pradesh-based NGO, the "SEZ Farmers' Protection and Welfare Association" has pointed out in its petition, quoting a CAG report, that of the 50 SEZs that were approved, only 15 are operational, while 29 are yet to start any commercial activity and six have been de-notified. It also noted that 77% of the 45,782 hectares of acquired land was concentrated in four states - Andhra Pradesh, Gujarat, Maharashtra and Tamil Nadu - since the SEZ Act came into being in 2005. It also noted that the intended projects had failed to take off. Besides, of the 12.47 lakh jobs that were promised, only 42,000 had been created.

In an imitation of the Chinese model, the SEZ plan was discussed and debated for over five years before the enactment of the law. It promised single window, speedy approvals and a stable tax regime with world class infrastructure for Indian manufacturers to compete in the world market and achieve substantial exports. But poor implementation processes in different states have made SEZs an abject failure. A recent Finance Ministry survey revealed that as many as 804 projects across the country have been stalled for a variety of reasons, with only around 8% of them being unable to take off due to land acquisition problems. Pointing to a possible collusion between unscrupulous officials and land grabbers, the CAG report said that at least 11 developers had raised Rs 6,309 crore of loans through mortgaging of SEZ land, which were later diverted for other purposes.

Quoting the example of cancellation of the land acquired in West Bengal's Singur for Tata's small car project and the court's order to return them to farmers, the petitioners have urged the apex court to similarly review the functioning of the SEZs. As there is no clarity in law as far as failed projects are concerned, the petitioner also wants the state governments to conduct a socio-economic survey of the farmers who have been rendered jobless and review the compensation paid to them. A time has come for the Centre and the states to take a serious look at the SEZs and determine their fate.

Information Courtesy : Deccan Herald (17-Jan-2017)

Thursday, April 11, 2013

ಕ್ರಿಕೆಟ್ ಮತ್ತು ಸಂಘಟಿತ ಭ್ರಷ್ಟಾಚಾರ

ಕ್ರಿಕೆಟ್ ನಲ್ಲಿ ಹಿಂದೆ ಇದ್ದ ಕಲಾತ್ಮಕತೆ ಈಗ ಉಳಿದಿಲ್ಲ. ಒಂದು ಕಾಲದಲ್ಲಿ ಕ್ರಿಕೆಟ್ ಬರಿಯ ಕ್ರೀಡೆಯಲ್ಲ ಅದೊಂದು ಜನ ಸಂಸ್ಕೃತಿ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಪ್ರಭಾವಿಸಿತ್ತು. ಇಂದಿಗೂ ಆ ಪ್ರಭಾವಳಿಯನ್ನು ಕ್ರಿಕೆಟ್ ಪೂರ್ಣವಾಗಿ ಕಳೆದುಕೊಂಡಿಲ್ಲ. ಕ್ರಿಕೆಟ್ ಒಂದು ಕಲೆಯಾಗಿ ಏಕೆ ಬೆಳೆಯಲಿಲ್ಲ ಎಂಬುದು ಒಂದು ಮುಖ್ಯ ಪ್ರಶ್ನೆ. ಬಹುಶಃ ಇನ್ನೊಂದು ಕಲಾ ಪ್ರಕಾರದೊಂದಿಗೆ ಇದನ್ನು ಹೋಲಿಸಿ ನೋಡುವುದು ಈ ಸಂಶಯವನ್ನು ಪರಿಹರಿಸಬಹುದು. ಒಂದು ಯಕ್ಷಗಾನ ಪ್ರಸಂಗ ಅದು ಆಡಲ್ಪಟ್ಟ ದೇಶಕಾಲದಲ್ಲಿ ನೋಡುಗನಿಗೆ ಒಂದು ಅನುಭವವನ್ನು ಕಟ್ಟಿಕೊಡುತ್ತದೆ. ಆದರೆ ಮಾಧ್ಯಮಗಳ ಮೂಲಕ ’ನೇರಪ್ರಸಾರ’ವಾಗುವ ಕ್ರಿಕೆಟ್ ಹಾಗಲ್ಲ. ಅದು ದೇಶವನ್ನು ಮೀರಿ ಮನೆ ಮನೆಗೂ ಕಥನವನ್ನು ತರುತ್ತದೆ. ಕ್ರಿಕೆಟ್ ಗೆ ಮೈದಾನದ ಒಳಗಿರುವ ಪ್ರೇಕ್ಷಕನಿಗಿಂತ ಮೈದಾನದ ಹೊರಗಿರುವ ಪ್ರೇಕ್ಷಕರ ಸಂಖ್ಯೆ ಸಾವಿರಾರು ಪಟ್ಟು ಹೆಚ್ಚು. ಹಾಗಾಗಿ ದೇಶಾತೀತವಾದ ಪ್ರೇಕ್ಷಕನನ್ನು ನೆಚ್ಚಿಕೊಂಡು ಕ್ರಿಕೆಟ್ ಬೆಳೆಯಬೇಕಾಯಿತು. ಅದಕ್ಕಾಗಿ ಕಲೆಯಾಗಿ ಕ್ರಿಕೆಟ್ ಕ್ಷೀಣಿಸಿತು.

ಒಂದು ಕಾಲಕ್ಕೆ ಆಟಗಾರರ ಬಲಾಬಲವನ್ನು, ಸೃಜನಶೀಲ ಕಸುವನ್ನು ಜಾಹೀರುಗೊಳಿಸುವ ಟೆಸ್ಟ್ ಕ್ರಿಕೆಟ್ ಮಾದರಿ ಮುಂಚೂಣಿಯಲ್ಲಿತ್ತು. ಇಂದು ೨೦-೨೦ ಮಾದರಿಯ ಮೂಲಕ ಕ್ರಿಕೆಟ್ ನ್ನು ಕಳಪೆ ಮನರಂಜನೆಯಾಗಿಸಲಾಗಿದೆ. ಕ್ರಿಕೆಟ್ ಈಗ ಉದ್ಯಮವಾಗಿ ಬದಲಾಗಿರುವುದು ಈ ಬದಲಾವಣೆಗೆ ಕಾರಣ. ಉದ್ಯಮದ ಮುಖ್ಯ ಅಜೆಂಡಾ ಲಾಭಕೋರತನ. ಹಣದ ಮುಂದೆ ಉಳಿದೆಲ್ಲವನ್ನು ಕೀಳು ದರ್ಜೆಗಿಳಿಸಿ ತುಚ್ಛವಾಗಿ ಕಾಣುವುದು ಉದ್ಯಮದ ಗುಣ. ಹಗಲು ಹೊತ್ತಿನಲ್ಲಿ ಕ್ರಿಕೆಟ್ ಪ್ರೇಕ್ಷಕರು ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಕ್ರಿಕೆಟ್ ರಾತ್ರಿ ಆರಂಭ, ಮಲಗುವುದರೊಳಗೆ ಮುಗಿಯುವ ಧಾರಾವಾಹಿ ಎಪಿಸೋಡ್ ನಂತೆ ೨೦-೨೦ ಓವರ್ ಮುಗಿಯುವುದರೊಳಗೆ ಆಟವೂ ಮುಕ್ತಾಯ, ಬೌಲಿಂಗ್ ಗಿಂತ ಬ್ಯಾಟಿಂಗ್ ನೋಡಲು ಚೆಂದ ಎಂದು ಫೀಲ್ಡಿಂಗ್ ನಲ್ಲಿ ಬ್ಯಾಟ್ಸ್ ಮನ್ ಪರ ನಿಯಮಗಳು, ಕ್ರೀಡೆಗೆ ಸಂಬಂಧವಿಲ್ಲದ ಚೀಯರ್ ಲೀಡರ್ ಕುಣಿತ...ಹೀಗೆ ಕ್ರಿಕೆಟ್ ದೈನಿಕದ ಧಾರವಾಹಿಯಂತಹ ಒಂದು ಸರಕಾಗಿ ನೋಡಲ್ಪಡುತ್ತಿದೆ.

ಈಗಷ್ಟೆ ಐಪಿಎಲ್ ೨೦-೨೦ ಕ್ರಿಕೆಟ್ ಸರಣಿ ಆರಂಭವಾಗಿದೆ. ಕ್ರೀಡೆಯನ್ನು ಉದ್ಯಮವಾಗಿಸಿದ ಪರಾಕಾಷ್ಟೆಯನ್ನು ಇಲ್ಲಿ ಕಾಣಬಹುದು. ಒಂದು ಐಪಿಎಲ್ ಸರಣಿ ಸುಮಾರು ಎರಡು ತಿಂಗಳ ಅವಧಿಯಲ್ಲಿ ನೂರು ಬಿಲಿಯನ್ (ಒಂದು ಸಾವಿರ ಕೋಟಿ) ಡಾಲರ್ ಆದಾಯವನ್ನು ತರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಒಂದು ವರ್ಷದ ಗಳಿಕೆಗಿಂತ ಬಹಳ ಹೆಚ್ಚು. IPL is more in air than ground ಎಂಬ ಕಾಲೆಳೆಯುವ ಮಾತು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಎಸ್ ಎಮ್ ಎಸ್, ಎಮ್ ಎಮ್ ಎಸ್ ಗಳ ಮೂಲಕ ಕ್ರಿಕೆಟ್ ಸ್ಕೋರ್ ಭಿತ್ತರಣೆ, ಮೊಬೈಲ್ ನಲ್ಲಿ ಲೈವ್ ಕಾಮೆಂಟರಿ, ಖಾಸಗಿ ಚಾನೆಲ್ ಗಳಿಂದ ಆಟದ ನೇರ ಪ್ರಸಾರ, ಯೂಟ್ಯೂಬ್ ನತಂಹ ವೆಬ್ ಸೈಟ್ ಗಳ ಮೂಲಕ ನೇರಪ್ರಸಾರ ಹೀಗೆ ಆಟದ ಹರಿದಾಟ ಆಗಸದಲ್ಲೇ ಹೆಚ್ಚಾದಂತಿದೆ! ಕ್ರಿಕೆಟ್ ಆಟಕ್ಕಿಂತ ತಂತ್ರಜ್ಞಾನದ ಮೇಲಾಟವೆ ಇಂತಹ ಮತುಗಳು ಕೇಲಿಬರಲು ಕಾರಣ.

ವಿವಿಧ ತಂಡಗಳ ಮಾಲೀಕತ್ವ ಹೊಂದಿರುವ ಫ್ರಾಂಚೈಸಿಗಳ ಕಾರ್ಯವೈಖರಿ ಮತ್ತು ಆಟೋಪ ಐಪಿಎಲ್ ಕ್ರಿಕೆಟ್ ನ್ನು ಇನ್ನಷ್ಟು ವಿವಾದಾಸ್ಪದವಾಗಿಸಿದೆ. ಸಂತೆಯಲ್ಲಿ ಎಮ್ಮೆಯನ್ನೊ ಕುರಿಯನ್ನೊ ಸವಾಲು ಮಾಡಿ ಕೊಳ್ಳುವಂತೆ ಕ್ರಿಕೆಟಿಗರನ್ನು ಕೊಂಡು ಒಂದು ತಂಡ ದಾರುಣವಾಗಿ ರಚಿಸಲ್ಪಡುವುದರೊಂದಿಗೆ ಈ ಪ್ರಕ್ರೀಯೆ ಆರಂಭಗೊಳ್ಳುತ್ತದೆ. ಆದರೆ ಫ್ರಾಂಚೈಸಿಗಳ ಗಳಿಕೆಯ ದಾರಿಗಳು ಈ ಕ್ರೀಡೆಯನ್ನು ಕಾಸಿಗಾಗಿ ಕ್ರಿಕೆಟ್ ಎಂಬಲ್ಲಿಗೆ ತಂದು ನಿಲ್ಲಿಸಿವೆ. ಅವುಗಳ ಕೆಲವು ಮುಖ್ಯ ಹಣದ ಮೂಲಗಳನ್ನು ಗಮನಿಸೋಣ. ಐಪಿಎಲ್ ನಿಯಮಾವಳಿಗಳ ಪ್ರಕಾರ ಫ್ರಾಂಚೈಸಿಗಳು ತಮ್ಮ ತಂಡವನ್ನು ಹಲವು ಕಂಪನಿಗಳಿಗೆ ಜಾಹೀರಾತಿಗಾಗಿ ಮಾರಿಕೊಳ್ಳಬಹುದು. ಹೀಗೆ ಜಾಹೀರಾತಿನಿಂದ ಬಂದ ಹಣ ಆಟಗಾರನಿಗೆ ಬದಲಾಗಿ ಫ್ರಾಂಚೈಸಿಗೆ ಸಲ್ಲುತ್ತದೆ. ತಂಡದ ಯಾವ ಆಟಗಾರನೂ ಫ್ರಾಂಚೈಸಿ ಜಾಹೀರಾತಿನ ಸಲುವಾಗಿ ವಿಧಿಸುವ ಷರತ್ತುಗಳನ್ನು ಉಲ್ಲಂಘಿಸುವಂತಿಲ್ಲ. ಅಲ್ಲದೆ ಆಟಗಾರರು ಫ್ರಾಂಚೈಸಿಯ ಅನುಮತಿ ಇಲ್ಲದೆ ತಮ್ಮ ವೈಯಕ್ತಿಕ ಒಪ್ಪಂದದ ಜಾಹೀರಾತುಗಳಲ್ಲಿ ಐಪಿಎಲ್ ಮುಗಿಯುವವರೆಗೂ ಕಾಣಿಸಿಕೊಳ್ಳುವಂತಿಲ್ಲ. ಕ್ರೀಡಾಂಗಣದಲ್ಲಿ ಮಾರಾಟವಾಗುವ ಟಿಕೆಟ್ ಗಳ ಮೂಲಕ ಫ್ರಾಂಚೈಸಿಗಳು ಹಣವನ್ನು ಸಂಪಾದಿಸಬಹುದು. ತಮ್ಮ ತಂಡದ ಮ್ಯಾಚ್ ನ ಟಿ.ವಿ. ಹಕ್ಕುಗಳನ್ನು ಚ್ಯಾನಲ್ ಗಳಿಗೆ ಮಾರಿಕೊಂಡು ಹಣ ಗಳಿಸಬಹುದು. ಸ್ಟೇಡಿಯಂನಲ್ಲಿ ಪ್ರದರ್ಶಿತವಾಗುವ ಜಾಹೀರಾತುಗಳ ಮೂಲಕ ಹಣ ಗಳಿಸಬಹುದು. ತಂಡದ ಆಟಗಾರರು ತೊಡುವ ಧಿರಿಸು (ಜೆರ್ಸಿ)ಗಳಿಗೆ ಪ್ರಾಯೋಜಕರನ್ನು ಹುಡುಕಿ ಅವರಿಂದ ಹಣ ಸಂಗ್ರಹಿಸಬಹುದು. ಇಷ್ಟೆ ಅಲ್ಲದೆ ತಮ್ಮ ತಂಡಕ್ಕೆ ಮಾಡಿರುವ ಹೂಡಿಕೆಯ ಕೆಲವು ಭಾಗವನ್ನು ಬೇರೆ ಹೂಡಿಕೆದಾರರಿಗೆ ಹೆಚ್ಚಿನ ಬೆಲೆಗೆ ಮಾರಿಕೊಂಡು ಲಾಭ ಗಳಿಸಬಹುದು. ಇದೆಲ್ಲ ಗಮನಿಸಿದಾಗ ಐಪಿಎಲ್ ಫ್ರಾಂಚೈಸಿಗಳ ಹಣದ ಥೈಲಿಗಾಗಿ ರೂಪುಗೊಂಡ ಕ್ರಿಕೆಟ್ ಮಾದರಿ ಎನಿಸದೆ ಇರದು.

ಇದುವರೆಗೆ ಆಡಲ್ಪಟ್ಟ ಐಪಿಎಲ್ ನ ಎಷ್ಟೊ ಆಟಗಳು ಮ್ಯಾಚ್ ಫಿಕ್ಸಿಂಗ್ ಗೆ ಒಳಪಟ್ಟಿವೆ ಎನ್ನುತಾರೆ. ಈ ಕುರಿತು ತನಿಖೆಗಳೂ ನಡೆದಿವೆ. ಬೆಳಕಿಗೆ ಬಂದಿರುವುದು ಕೆಲವು ಮಾತ್ರ. ಮ್ಯಾಚ್ ಫಿಕ್ಸಿಂಗ್ ನ ಸಂಧರ್ಭದಲ್ಲಿ ಎರಡು ತಂಡಗಳ ಮಾಲೀಕರೂ ಹಣ ಮಾಡಬಹುದು. ಇವೆಲ್ಲ ಭೂಗತ ಲೋಕದ ಆಟಗಳು, ಮಿಲಿಯನ್ ಡಾಲರ್ ಲೆಕ್ಕಾಚಾರಗಳು! ಮ್ಯಾಚ್ ಫಿಕ್ಸಿಂಗ್ ಮೂಲಕ ಐಪಿಎಲ್ ನಲ್ಲಿ ಹೆಚ್ಚಿನ ಪ್ರಮಾಣದ ಹಣ ಹರಿದಾಡುತ್ತದೆ. ಒಂದು ಅಂದಾಜಿನ ಪ್ರಕಾರ ಶೇ. ೭೦ರಷ್ಟು ಲಾಭಗಳು ಬರುವುದು ಫಿಕ್ಸಿಂಗ್ ಮೂಲಕ ಎಂದು ಅಂದಾಜಿಸಲಾಗಿದೆ. ನಾವು ಐಪಿಎಲ್ ಅಂಗಳದಲ್ಲಿ ನೋಡುವ ಎಷ್ಟೊ ಆಟಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ಕೋಟ್ಯಾಂತರ ಪ್ರೇಕ್ಷಕರನ್ನು ಮಹಾಮೋಸಕ್ಕೆ ದೂಡುತ್ತವೆ. ಬಾಕಿ ಏನೆ ಆದರೂ ಐಪಿಎಲ್, ಬಿಸಿಸಿಐ, ಫ್ರಾಂಚೈಸಿ, ಆಟಗಾರರು, ತಂಡದ ಮ್ಯಾನೇಜರ್ ಗಳು ಹಾಗು ಹಲವು ಪ್ರತಿಷ್ಠಿತ ವ್ಯಕ್ತಿಗಳು ಬಿಲಿಯನ್ ಡಾಲರ್ ಗಳಿಕೆ ಮಾಡಿಕೊಳ್ಳುತ್ತಾರೆ. ಇವೆಲ್ಲ ನಡೆಯುವುದು ಸರಕಾರದ ಪರವಾನಗಿಯಲ್ಲಿ, ತಂತ್ರಜ್ಞಾನದ ಬೆಳಕಿನಲ್ಲಿ, ಮಾಧ್ಯಮಗಳ ಕಾಳಜಿಯಲ್ಲಿ, ಉದ್ಯಮ ಜಗತ್ತಿನ ಪ್ರೋತ್ಸಾಹದಲ್ಲಿ. ಇದು ಸಂಘಟಿತ ಭ್ರಷ್ಟಾಚಾರವಲ್ಲದೆ ಇನ್ನೇನು? ಭಾರತದಲ್ಲಿ ಕ್ರಿಕೆಟ್ ಬರಿಯ ಆಟವಲ್ಲ, ಅದು ಧರ್ಮ ಎಂದು ಹುಸಿ ರೋಮಾಂಚನಪಡುವವರು ಮತ್ತೊಮ್ಮೆ ಯೋಚಿಸಲಿ.

ನಾವು ಇತಿಹಾಸವನ್ನೊಮ್ಮೆ ಗಮನಿಸಬೇಕು. ೧೯ನೇ ಶತಮಾನದ ಮಧ್ಯ ಭಾಗದವರೆಗೆ ಕ್ರಿಕೆಟ್ ಅಮೇರಿಕೆಯಲ್ಲಿ ಜನಪ್ರೀಯ ಕ್ರೀಡೆಯಾಗಿತ್ತು. ಆಮೇಲೆ ಆ ಸ್ಥಾನವನ್ನು ಕ್ರಿಕೆಟ್ಟನ್ನೆ ಬಹುವಾಗಿ ಹೋಲುವ ಬೇಸ್ ಬಾಲ್ ಎಂಬ ಆಟ ಆಕ್ರಮಿಸಿತು. ಕ್ರಿಕೆಟ್ ಅಮೇರಿಕಾದಲ್ಲಿ ಜನಪ್ರೀಯತೆ ಕಳೆದುಲೊಳ್ಳಲು ಅಲ್ಲಿ ಆಗಷ್ಟೆ ಉತ್ತುಂಗ ತಲುಪಿದ್ದ ರಾಷ್ಟ್ರೀಯವಾದ ಕಾರಣ ಎಂಬ ವಾದವಿದೆ. ಅಮೇರಿಕೆಗೆ ಪ್ರವಾಹದಂತೆ ನುಗ್ಗುತ್ತಿದ್ದ ವಿದೇಶಿ ವಲಸಿಗರನ್ನು ಅವರ ಮೂಲ ಅಸ್ಮಿತೆಯಿಂದ ಬೇರ್ಪಡಿಸಿ ಅಮೇರಿಕನ್ನರನ್ನಾಗಿಸುವ Melting Pot (ಕರಗಿಸುವ ಮಡಿಕೆ) ಸಂಸ್ಕೃತಿಗೆ ಬೇಕಾಗಿದ್ದ ಐಡೆಂಟಿಟಿಯನ್ನು ಬೇಸ್ ಬಾಲ್ ಒಂದು ಕ್ರೀಡೆಯಾಗಿ ಒದಗಿಸಿತು. ಆಂಗ್ಲೊ-ಅಮೆರಿಕನ್ನರ ಪರಂಪರೆಯ ಭಾಗವಾಗಿ ಬಂದ ಕ್ರಿಕೆಟ್ ಇಪ್ಪತ್ತನೆ ಶತಮಾನದ ಆರಂಭದ ಹೊತ್ತಿಗೆ ಬೇಸ್ ಬಾಲ್ ಹೊಂದಿದ್ದ ಕ್ರಿಕೆಟ್ ನ ಸಾಮ್ಯತೆ, ಅದರ ಚುಟುಕು ಮಾದರಿ ಮತ್ತು ಹೊಡಿ ಬಡಿ ಮನರಂಜನೆಯಿಂದಾಗಿ ಜನಪ್ರೀಯತೆ ಕಳೆದುಕೊಂಡಿತು. ಅಮೆರಿಕನ್ನರಲ್ಲಿ ಬೆಳೆಯುತ್ತಿದ್ದ ಉದ್ಯಮಶೀಲತೆ ಬೇಸ್ ಬಾಲ್ ಕ್ರೀಡೆಯನ್ನು ಇನ್ನಷ್ಟು ಪೋಷಿಸಿತು. ಬದಲಾಗುವ ಸಾಮಾಜಿಕ ವಿದ್ಯಮಾನಗಳು, ಉದ್ಯಮ ಭಾರತದಲ್ಲಿಯೂ ಕ್ರಿಕೆಟ್ ಗೆ ಒಂದು ಹೊಸ ರೂಪ ಕೊಡಲು ಹೊರಟಿವೆ. ಈ ಬದಲಾವಣೆ ಮತ್ತು ಜನಪ್ರೀಯತೆ ಕ್ರಿಕೆಟ್ಟಿಗೆ ತನ್ನನ್ನು ಮರು ಸೃಷ್ಟಿಸಿಕೊಳ್ಳಲು ಸಹಕರಿಸಬಹುದೆ ಅಥವಾ ಅವಸಾನದ ಅಂಚಿಗೆ ದೂಡಬಹುದೆ ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.